

ನಿಮಗೆ ಮೋಸ ಮಾಡಿರುವವರೆ ಅವರು. ಕಾನೂನಿನ ದೃಷ್ಟಿಯಿಂದಲೂ ಅವರು ಅಪರಾಧಿಗಳು. ದಾಂಪತ್ಯವನ್ನು ನಡೆಸಲು ದೈಹಿಕವಾಗಿ ಶಕ್ತಿಯಿಲ್ಲದ ವ್ಯಕ್ತಿ, ತನ್ನ ಕೊನೆಗಾಲಕ್ಕೆ ಮನೆಯ ಕೆಲಸಕ್ಕೆ ಒಬ್ಬ ಆಳಿರಲಿ ಎಂದು ಮೋಸಮಾಡಿ ನಿಮ್ಮನ್ನು ಮದುವೆಯಾಗಿದ್ದಾರೆ. ಅಲ್ಲದೇ ನಿಮ್ಮನ್ನು ಮಾನಸಿಕವಾಗಿ ಅತ್ತೆ ಮತ್ತು ಗಂಡ ಹಿಂಸಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮೂರಿನ ಪೋಲೀಸರಿಗೆ ಕಂಪ್ಲೇಂಟ್ ಕೊಡಿ. ನಿಮ್ಮ ತೌರಿನ ಬಗ್ಗೆ ನೀವು ಏನೂ ಬರೆದಿಲ್ಲ. ಮೊದಲು ಆ ಮನೆಯನ್ನು ಬಿಟ್ಟು ಬನ್ನಿ. ನೀವು ಮದುವೆಗೆ ಮುನ್ನ ಮಾಡುತ್ತಿದ್ದ ಉದ್ಯೋಗದ ಕಂಪನಿಯಲ್ಲೇ ಉದ್ಯೋಗ ಸಿಗುತ್ತದಾ ಪ್ರಯತ್ನಿಸಿ. ಸರ್ಕಾರೀ ಕೆಲಸವೇ ಏಕೆ ಬೇಕು? ಮೊದಲು ಸಣ್ಣ ಪುಟ್ಟ ಯಾವುದಾದರೂ ಕೆಲಸಕ್ಕೆ ಸೇರಿ. ನಂತರ ನಿಧಾನವಾಗಿ ಒಳ್ಳೆಯ ಕೆಲಸವನ್ನು ಹುಡುಕಿಕೊಳ್ಳಿ. ಎರಡೆರಡು ಪದವಿಗಳನ್ನು ಇಟ್ಟುಕೊಂಡಿರುವ ನೀವು ಬರೀ ಭಾವುಕರಾಗಿ ಯೋಚಿಸಬಾರದು.
ನಿಮ್ಮಲ್ಲಿರುವ ಜಾಣತನವನ್ನು ಬಳಸಿ ನಿಮ್ಮ ಕಾಲಮೇಲೆ ನೀವು ನಿಲ್ಲುವ ಪ್ರಯತ್ನ ಮಾಡಿ. ನಿಮ್ಮ ಗಂಡನ ಜೊತೆ ಬದುಕುವುದರ ಬಗ್ಗೆ ಆ ನಂತರ ಯೋಚಿಸಬಹುದು. ಅದಕ್ಕೆ ವಕೀಲರೂ ನ್ಯಾಯಾಲಯವೂ ಸಹಾಯ ಮಾಡುತ್ತದೆ.