

ಬೆಂಗಳೂರು: ಮೇಲಧಿಕಾರಿಗಳ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ನಂಜನಗೂಡಿನ ವೈದ್ಯಾಧಿಕಾರಿ ಡಾ. ಎಸ್. ಆರ್. ನಾಗೇಂದ್ರ ಅವರ ಕುಟುಂಬಕ್ಕೆ ಮುಖ್ಯಮಂತ್ರಿ. ಬಿ.ಎಸ್. ಯಡಿಯೂರಪ್ಪನವರು 50 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಅವರ ಕುಟುಂಬದ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡಬೇಕು. ಸರ್ಕಾರದ ಇತರ ಸೌಲಭ್ಯವನ್ನು ಶೀಘ್ರದಲ್ಲೇ ಒದಗಿಸಬೇಕು ಎಂದೂ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ನಾಗೇಂದ್ರ ಅವರ ಆತ್ಮಹತ್ಯೆ ಪ್ರಕರಣದ ತನಿಖೆಗೆ ಆದೇಶಿಸಿರುವ ಮುಖ್ಯಮಂತ್ರಿಗಳು, ಏಳು ದಿನದೊಳಗೆ ತನಿಖಾ ವರದಿ ನೀಡುವಂತೆ ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಸರ್ಕಾರದಿಂದ ದೊರೆಯಬಹುದಾದ ಇನ್ನಿತರ ಸೌಲಭ್ಯಗಳನ್ನು ವಿಳಂಬ ಮಾಡದೆ ಪಾವತಿಸುವಂತೆ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ನಿನ್ನೆ ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಸಾವಿಗೆ ಮೇಲಧಿಕಾರಿಗಳ ಕಿರುಕುಳವೇ ಕಾರಣ ಎನ್ನುವ ಆರೋಪವಿದೆ. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸರ್ಕಾರಿ ಆಸ್ಪತ್ರೆ ವೈದ್ಯರು ಇಂದು ಬೆಳಗ್ಗೆ ಪ್ರತಿಭಟನೆ ಮುಂದುವರಿಸಿದರು. ಜಿಲ್ಲಾ ಪಂಚಾಯತಿ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಯಾರೊಬ್ಬರೂ ಕೆಲಸ ಮಾಡುವುದಿಲ್ಲ. ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ಹೊರತುಪಡಿಸಿ ಉಳಿದ ಯಾವುದೇ ಚಿಕಿತ್ಸೆ ನೀಡುವುದಿಲ್ಲ ಎಂದು ಆರೋಗ್ಯ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ನಿನ್ನೆ ಮಾತನಾಡಿದ್ದ ಸಚಿವ ಡಾ. ಕೆ. ಸುಧಾಕರ್, ಮೃತರ ಕುಟುಂಬದೊಂದಿಗೆ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ. ವೈದ್ಯಾಧಿಕಾರಿಗಳ ಸಂಘದೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು, ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು. ನಾಗೇಂದ್ರ ಅವರ ಸಾವಿನಲ್ಲಿ ಗೊಂದಲ ಸೃಷ್ಟಿ ಮಾಡುವುದು ಅಮಾನವೀಯ. ಘಟನೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನ್ಯಾಯ ದೊರಕಿಸಿಕೊಡಲಾಗುವುದು" ಎಂದು ಭರವಸೆ ನೀಡಿದ್ದರು.