ಐಐಎಸ್ಸಿಯಲ್ಲಿ ಶುರುವಾಗಲಿದೆ ಬಹು ವಿಶೇಷ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ: ‘ಮೈಂಡ್‌ಟ್ರೀ’ಯಿಂದ 425 ಕೋಟಿ ರೂ. ದೇಣಿಗೆ

hospital
Published on

ಬೆಂಗಳೂರು: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಬೆಂಗಳೂರಿನಲ್ಲಿ ಆರಂಭಿಸುತ್ತಿರುವ ಸ್ನಾತಕೋತ್ತರ ವೈದ್ಯಕೀಯ ಶಾಲೆ ಹಾಗೂ 800 ಹಾಸಿಗೆಗಳ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ‘ಮಿಡ್‌ಟ್ರೀ’ ಸಂಸ್ಥೆ 425 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದೆ.

ಸುಶ್ಮಿತಾ ಮತ್ತು ಸುಬ್ರೋತೊ ಬಾಗ್ಚಿ ದಂಪತಿ, ರಾಧಾ ಮತ್ತು ಎನ್‌ಎಸ್‌ ಪಾರ್ಥಸಾರಥಿ ಅವರು ಈ ಬೃಹತ್‌ ಮೊತ್ತದ ದೇಣಿಗೆಯನ್ನು ನೀಡಿದ್ದಾರೆ. ಬಾಗ್ಚಿ ಮತ್ತು ಪಾರ್ಥಸಾರಥಿ ‘ಮೈಂಡ್‌ಟ್ರೀ‘ಯ ಸ್ಥಾಪಕ ತಂಡದ ಭಾಗವಾಗಿದ್ದಾರೆ. ಈ ದೇಣಿಗೆಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆ ಎಂದು ಹೆಸರಿಡಲು ನಿರ್ಧರಿಸಲಾಗಿದೆ.

ಸುಶ್ಮಿತಾ ಮತ್ತು ಸುಬ್ರೋತೊ ಬಾಗ್ಚಿ ದಂಪತಿಯೊಂದಿನ ಪಾಲುದಾರಿಕೆ ಒಪ್ಪಂದಕ್ಕೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಹಿ ಹಾಕಿದೆ. ಅಹಮದಾಬಾದ್ ಮೂಲದ ವಾಸ್ತುಶಿಲ್ಪಿ ಆರ್ಚಿ ಮೆಡೆಸ್ ಆಸ್ಪತ್ರೆ ಕಟ್ಟಡವನ್ನು ವಿನ್ಯಾಸಗೊಳಿಸಿದ್ದಾರೆ.

ಈ ಕಾಲೇಜಿನಲ್ಲಿ ಎಂಡಿ-ಪಿಎಚ್‌ಡಿ ತರಬೇತಿ ನೀಡಲಾಗುವುದು. ಆಸ್ಪತ್ರೆಯ ಜತೆಜತೆಗೇ ವಿಜ್ಞಾನ ಮತ್ತು ಇಂಜಿನಿಯರಿಂಗ್‌ ಪ್ರಯೋಗಾಲಯಗಳು ಐಐಎಸ್ಸಿ ಕ್ಯಾಂಪಸ್‌ನಲ್ಲಿ ಲಭ್ಯವಿವೆ.

ಬರುವ ಜೂನ್‌ ತಿಂಗಳಿನಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, ಆಸ್ಪತ್ರೆಯು 2024 ರ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸಲಿದೆ. ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆಯು ರೋಗನಿರ್ಣಯ, ಚಿಕಿತ್ಸೆ ಮತ್ತು ಸಂಶೋಧನೆಗಾಗಿ ಸುಧಾರಿತ ಸೌಲಭ್ಯಗಳನ್ನು ಹೊಂದಿರುತ್ತದೆ. ಆಸ್ಪತ್ರೆಯು ಸುಧಾರಿತ ಡಿಜಿಟಲ್ ತಂತ್ರಜ್ಞಾನಗಳನ್ನು ಹೊಂದಿರಲಿದೆ. ಇಲ್ಲಿ ಸಮಗ್ರ ಇಲೆಕ್ಟ್ರಾನಿಕ್ ವೈದ್ಯಕೀಯ ದಾಖಲೆ ವ್ಯವಸ್ಥೆಗಳನ್ನು ಅಳವಡಿಸಲಾಗುವುದು ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net