

ನವದೆಹಲಿ: ಕೇಂದ್ರ ಸಚಿವ ಬಿಜೆಪಿಯ ಮುಖ್ತಾರ್ ಅಬ್ಬಾಸ್ ನಖ್ವಿ, ಹಾಗೂ ಜೆಡಿಯುನ ರಾಮಚಂದ್ರ ಪ್ರಸಾದ್ ಸಿಂಗ್ ರಾಜೀನಾಮೆ ನೀಡಿದ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರಿಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿದೆ. ರಾಮಚಂದ್ರ ಪ್ರಸಾದ್ ಸಿಂಗ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಕ್ಕು ಸಚಿವಾಲಯಗಳ ಉಸ್ತುವಾರಿಯನ್ನು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನೀಡಲಾಗಿದೆ.
ನಿನ್ನೆ (ಬುಧವಾರ) ಇವರಿಬ್ಬರೂ ರಾಜೀನಾಮೆ ನೀಡಿದ್ದರು.ಇಂದು ಇವರಿಬ್ಬರ ರಾಜ್ಯಸಭಾ ಅವಧಿ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಒಂದು ದಿನ ಮುಂಚಿತವಾಗಿ ರಾಜೀನಾಮೆ ನೀಡಿದ್ದಾರೆ. "ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ ಸಲಹೆಯಂತೆ, ಸಂವಿಧಾನದ 75 ನೇ ವಿಧಿಯ ಷರತ್ತು (2) ರ ಅಡಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಕೇಂದ್ರ ಸಚಿವ ಸಂಪುಟದಿಂದ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ರಾಮಚಂದ್ರ ಪ್ರಸಾದ್ ಸಿಂಗ್ ರಾಜೀನಾಮೆಗಳನ್ನು ಅಂಗೀಕರಿಸಿದ್ದಾರೆ" ಎಂದು ರಾಷ್ಟ್ರಪತಿ ಭವನದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಮಧ್ಯೆ, ನಖ್ವಿ ಅವರನ್ನು ಎನ್ಡಿಎಯ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಹೆಸರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಅವಧಿಯು ಬರುವ ಆಗಸ್ಟ್ 10ಕ್ಕೆ ಕೊನೆಗೊಳ್ಳಲಿದೆ. ಈ ಹುದ್ದೆಗೆ ನಾಮಪತ್ರ ಸಲ್ಲಿಸಲು ಈ ಜುಲೈ 19ರವರೆಗೆ ಅವಕಾಶವಿದೆ. ಆಗಸ್ಟ್ 6ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ.
ಪ್ರವಾದಿ ಮೊಹಮ್ಮದ್ ಕುರಿತಾಗಿ ಬಿಜೆಪಿ ಮುಖಂಡೆ ನೂಪುರ್ ಶರ್ಮಾ ಅವರ ಹೇಳಿಕೆಯಿಂದ ಸದ್ಯ ಭುಗಿಲೆದ್ದಿರುವ ಗಲಾಟೆಯನ್ನು ಶಮನಗೊಳಿಸುವ ಸಲುವಾಗಿ ಬಿಜೆಪಿಯು ಓರ್ವ ಮುಸ್ಲಿಂ ನಾಯಕರನ್ನು ಉಪರಾಷ್ಟ್ರಪತಿ ಹುದ್ದೆಗೆ ಪರಿಗಣಿಸುತ್ತಿದೆ ಎಂದೂ ರಾಜಕೀಯ ವಲಯದಲ್ಲಿ ಕೇಳಿಬಂದಿದೆ. ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇಂದ್ರದ ಮಾಜಿ ಸಚಿವೆ ನಜ್ಮಾ ಹೆಫ್ತುಲ್ಲಾ ಮತ್ತು ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್ ಹೆಸರು ಕೂಡ ಉಪರಾಷ್ಟ್ರಪತಿ ಹುದ್ದೆಗೆ ಕೇಳಿಬರುತ್ತಿದೆ.