2020 ಟಾಪ್​-1 ಆನ್​ಲೈನ್​ ಆಹಾರ ಯಾವುದು ಗೊತ್ತಾ? ಮುಂಬೈನಿಂದ ಬಂದ ಟಿಪ್ಸ್​ ₹4.6 ಕೋಟಿ!

zomato
Published on

ನವದೆಹಲಿ: 2020... ಅತ್ಯಂತ ಕರಾಳ ವರ್ಷ ಎಂದೇ ಬಿಂಬಿತವಾಗಿರುವ ವರ್ಷವಿದು. ಈ ವರ್ಷದ ಕೊನೆಯ ದಿನದಲ್ಲಿ ನಾವಿದ್ದೇವೆ. ಕರೊನಾ ವೈರಸ್​ ಹಿನ್ನೆಲೆಯಲ್ಲಿ ಮನೆಯಿಂದ ಹೊರಕ್ಕೆ ಹೋಗದವರು ಬಹಳಷ್ಟು ಮಂದಿ. ಮೊದಲೇ ಮನೆಯ ಹೊರಗಡೆ ಹೋಗುವ ಆಲಸ್ಯದಿಂದ ಮನೆಯ ಒಳಗೇ ಕುಳಿತು ಆನ್​ಲೈನ್​ ಮೂಲಕ ತಿಂಡಿ-ತಿನಿಸುಗಳನ್ನು ತರಿಸುವವರೇ ಹೆಚ್ಚು. ಅದರಲ್ಲಿಯೂ ಈ ವರ್ಷ ಕರೊನಾ ಎಂದ ಮೇಲೆ ಕೇಳಬೇಕೆ? ಕರೊನಾ ನೆಪದಲ್ಲಿ ಆನ್​ಲೈನ್​ ಫುಡ್​ಗಳಿಗೆ ಭಾರಿ ಬೇಡಿಕೆ ಕುದುರಿದೆ.

ಅಂದ ಹಾಗೆ ಈ ವರ್ಷ ಅತಿಹೆಚ್ಚು ಆನ್​ಲೈನ್​ ಆರ್ಡರ್​ ಮಾಡಿರುವ ಪಟ್ಟಿಯನ್ನು ಜೊಮ್ಯಾಟೊ ಬಿಡುಗಡೆ ಮಾಡಿದೆ. ಅತಿ ಹೆಚ್ಚು ಆರ್ಡರ್​ ಯಾವ ಆಹಾರಕ್ಕೆ ಆಗಿರಬಹುದು ಎಂದು ನೀವೇನಾದರೂ ಊಹಿಸಬಲ್ಲಿರಾ?

ಕರೆಕ್ಟ್​ ಬಹುತೇಕ ಮಂದಿ ಅಂದುಕೊಂಡಂತೆ ಅದು ಬಿರಿಯಾನಿ. ಬಿರಿಯಾನಿ ಟಾಪ್​1 ಸ್ಥಾನದಲ್ಲಿ ಇದೆ. ಜೊಮ್ಯಾಟೊ ಒಂದರಿಂದಲೇ ಪ್ರತಿ ನಿಮಿಷಕ್ಕೆ 22 ಬಿರಿಯಾನಿ ಆರ್ಡರ್​ಗಳು ಬಂದಿವೆಯಂತೆ. ಇನ್ನು ಬೇರೆ ಬೇರೆ ಆನ್​ಲೈನ್​ ಫುಡ್​ ಕಂಪೆನಿಗಳಿಂದ ಅದೆಷ್ಟು ಬಂದಿವೆಯೋ ಗೊತ್ತಿಲ್ಲ!

ಬಿರಿಯಾನಿ ಎಂದಾಕ್ಷಣ ಚಿಕನ್​, ಮಟನ್​ ಬಿರಿಯಾನಿಗಳೇ ತಲೆಗೆ ಹೊಳೆಯುತ್ತವಲ್ಲವೆ? ಅಂದಹಾಗೆ ಜೊಮ್ಯಾಟೊದಿಂದ ತರಿಸಿಕೊಂಡಿರುವ ಬಿರಿಯಾನಿಗಳ ಪೈಕಿ ಈ ಎರಡು ಬಿರಿಯಾನಿಗಳು ಟಾಪ್​ನಲ್ಲಿ ಇದ್ದರೂ ಸುಮಾರು 19.8 ಲಕ್ಷ ಮಂದಿ ವೆಜ್​ ಬಿರಿಯಾನಿಗಳನ್ನೂ ತರಿಸಿಕೊಂಡಿದ್ದಾರಂತೆ.

ಇದು ಊಟದ ಮಾತಾಯ್ತು. ಇನ್ನು ತಿಂಡಿಯ ವಿಷಯಕ್ಕೆ ಬಂದರೆ ಟಾಪ್​1ನಲ್ಲಿ ಇರುವುದು ಪಿಜ್ಜಾ ಅಂತೆ. ಮೇ ತಿಂಗಳು ಒಂದರಲ್ಲಿಯೇ ಸುಮಾರು 4.5 ಲಕ್ಷ ಪಿಜ್ಜಾ ಆರ್ಡರ್​ ಬಂದಿದ್ದರೆ, ನವೆಂಬರ್​ವರೆಗೆ ಇದರ ಸಂಖ್ಯೆ 17 ಲಕ್ಷಕ್ಕೆ ಏರಿಕೆಯಾಗಿದೆ ಎಂದಿದೆ ಜೊಮ್ಯಾಟೊ.

ಮೊಮೊಸ್ ವಿಷಯದಲ್ಲಿ, ದೆಹಲಿ, ಮುಂಬೈ, ಬೆಂಗಳೂರು ಮತ್ತು ಪುಣೆಯಿಂದ 25 ಲಕ್ಷ ಆರ್ಡರ್​ಗಳು ಬಂದಿದ್ದು ಇವು ಟಾಪ್​ ಊರುಗಳಾಗಿವೆ. ಬೆಂಗಳೂರಿನ ನಿವಾಸಿ ಯಶ್​ ಎನ್ನುವವರು ಈ ವರ್ಷ ಜೊಮ್ಯಾಟೊದಲ್ಲಿ 1,380 ಆರ್ಡರ್​ ಮಾಡಿದ್ದಾರಂತೆ! ಅಂದರೆ ದಿನವೊಂದಕ್ಕೆ ಸುಮಾರು ನಾಲ್ಕು ಆರ್ಡರ್​ ಮಾಡಿದಂತೆ ಆಗಿದೆ!

ಸಿಹಿಯ ವಿಷಯದಲ್ಲಿ ಗುಲಾಬ್​ ಜಾಮೂನ್​ ಟಾಪ್​1ರಲ್ಲಿ ಇದ್ದು, ದೀಪಾವಳಿ ಸಮಯದಲ್ಲಿ ಒಂದು ಲಕ್ಷ ಆರ್ಡರ್​ ದೆಹಲಿಯಿಂದ ಬಂದಿದೆ. ಎಲ್ಲವುಗಳಿಗಿಂತಲೂ ದಾರ್ಜಿಲಿಂಗ್​ನಿಂದ ಅತಿ ಹೆಚ್ಚು ಆರ್ಡರ್​ ಆಹಾರದ ವಿಷಯದಲ್ಲಿ ಬಂದಿದೆ ಎಂದಿದೆ ಜೊಮ್ಯಾಟೊ.

ಈ ವರ್ಷ ಟಿಪ್ಸ್​ ರೂಪದಲ್ಲಿ ಮುಂಬೈ ಒಂದರಿಂದಲೇ ಈ ವರ್ಷ 4.6 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆಯಂತೆ. ಟಿಪ್ಸ್​ ನೀಡುವಲ್ಲಿ ಮುಂಬೈ ನಿವಾಸಿಗಳು ಭಾರಿ ಮುಂದು ಎಂದಿರುವ ಜೊಮ್ಯಾಟೊ ಮುಂಬೈ ನಂತರ ಗೋವಾದವರ ವಿಶಾಲ ಹೃದಯದವರು. ಕನಿಷ್ಠ ಎರಡು ಸಾವಿರ ರೂಪಾಯಿ ಟಿಪ್ಸ್​ ನೀಡುತ್ತಾರೆ ಎಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net