

ಚೆನ್ನೈ: ತಮಿಳುನಾಡಿಗೆ ಇನ್ನೇನು ಚುನಾವಣೆ ಸಮೀಪವಾಗಿದೆ. ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಎಲ್ಲಾ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ತಯಾರಿ ನಡೆಸಿವೆ.
ಈ ನಡುವೆ ನಟ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯಂ (ಎಂಎನ್‌ಎಂ) ಪಕ್ಷ ಕೂಡ ಅಭ್ಯರ್ಥಿಗಳ ಆಯ್ಕೆಯಲ್ಲಿ ತೊಡಗಿದೆ. ತಮಿಳುನಾಡು ಮತ್ತು ಪುದುಚೇರಿ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹೊಸ ಯೋಚನೆ ರೂಪಿಸಿರುವ ರಾಜಕಾರಣಿ ಕಮಲ್ ಹಾಸನ್, ಇದೀಗ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪಕ್ಷದ ಸದಸ್ಯರಿಂದ ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲು ಶುರು ಮಾಡಿದೆ. ಮುಂಬರುವ ಚುನಾವಣೆಗಳಿಗೆ ಚುನಾವಣಾ ಕಾರ್ಯತಂತ್ರಗಳನ್ನು ನಿರ್ಧರಿಸಲು ಎಂಎನ್‌ಎಂ ಪಕ್ಷದ ಕಾಯಂ ಅಧ್ಯಕ್ಷರಾಗಿರುವ ಕಮಲ್ ಹಾಸನ್‌ಗೆ ಅಧಿಕಾರ ನೀಡಲಾಗಿದೆ.
ಕಳೆದ ತಿಂಗಳಷ್ಟೇ ಕಾಲಿನ ಮೂಳೆ ಸೋಂಕಿಗೆ ಸಂಬಂಧಿಸಿದಂತೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಮಲ್ ಹಾಸನ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದ್ದು, ಇದೀಗ ಮೇನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವುದಾಗಿ ವೈದ್ಯರು ಹೇಳಿದ್ದಾರೆ.
ಇದಾಗಲೇ ಎಂಎನ್‌ಎಂ ಪಕ್ಷಕ್ಕೆ ಬ್ಯಾಟರಿ ಟಾರ್ಚ್ ಚಿಹ್ನೆ ನೀಡಲಾಗಿದೆ. ತಮಿಳುನಾಡಿನ ಎಲ್ಲ 234 ವಿಧಾನಸಭಾ ಕ್ಷೇತ್ರಗಳಿಗೆ ನಮಗೆ ಟಾರ್ಚ್‌ಲೈಟ್ ಚಿಹ್ನೆ ನೀಡಲಾಗಿದೆ ದು ಕಮಲ್ ಹಾಸನ್ ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಈಗ ಕಮಲ್ ಹಾಸನ್ ಅವರು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲು ಮುಂದಾಗಿದ್ದು, ಫೆಬ್ರವರಿ 21ರಿಂದ (ಭಾನುವಾರ) ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಸಂಭಾವ್ಯ ಅಭ್ಯರ್ಥಿಗಳು 25 ಸಾವಿರ ರೂಪಾಯಿ ಪಾವತಿಸಬೇಕು, ಪಕ್ಷೇತರ ಸದಸ್ಯರು ಸಹ ಅರ್ಜಿ ಸಲ್ಲಿಸಬಹುದು ಅಥವಾ ನಾಮನಿರ್ದೇಶನಗೊಳ್ಳಬಹುದು ಎಂದು ಪಕ್ಷ ಇದಾಗಲೇ ಘೋಷಣೆ ಮಾಡಿದೆ.
ಅಂದ ಹಾಗೆ, 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಇದೇ ಚಿಹ್ನೆಯನ್ನು ಬಳಸುವ ಮೂಲಕ ಕಣಕ್ಕೆ ಇಳಿದಿತ್ತು. ಈ ಚುನಾವಣೆಯಲ್ಲಿ ಶೇಕಡಾ 3.77 ರಷ್ಟು ಮತಗಳನ್ನು ಪಡೆದುಕೊಂಡಿತ್ತು. ಕೆಲವು ಕ್ಷೇತ್ರಗಳಲ್ಲಿ ಮಾತ್ರ ಶೇ. 10 ರಷ್ಟು ಮತ ಗಳಿಸಿತ್ತು.