ಶಿಕ್ಷಕಿಯರು ಜಗಳಗಂಟಿಯರು: ಇವರಿಂದ ಶಿಕ್ಷಕರು ತಲೆನೋವಿನ ಮಾತ್ರೆ ತೆಗೆದುಕೊಳ್ಳಬೇಕಿದೆ ಎಂದ ಸಚಿವ!

minister
Published on

ಜೈಪುರ (ರಾಜಸ್ಥಾನ): ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕಿಯರು ಇದ್ದರೆ ಅಲ್ಲಿ ಜಗಳಗಳು ಹೆಚ್ಚು. ಇವರಿಂದಾಗಿ ಪ್ರಿನ್ಸಿಪಾಲ್ ಮತ್ತು ಉಳಿದ ಸಹದ್ಯೋಗಿ ಶಿಕ್ಷಕರು ಸ್ಯಾರಿಡನ್ (ತಲೆ ನೋವಿನ ಮಾತ್ರೆ) ತೆಗೆದುಕೊಳ್ಳಬೇಕಾಗಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ರಾಜಸ್ಥಾನ ಸಚಿವ ಹಾಗೂ ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರ.

ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಜೈಪುರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುವ ವೇಳೆ ಈ ಹೇಳಿಕೆ ನೀಡಿದ್ದಾರೆ. ಪ್ರಾಥಮಿಕ ಮತ್ತು ‍ಪ್ರೌಢ ಶಿಕ್ಷಣ ಸಚಿವರಾಗಿರುವ ಗೋವಿಂದ್‌ ಸಿಂಗ್‌ ಅವರ ಈ ಹೇಳಿಕೆಯಿಂದ ಜಾಲತಾಣದಲ್ಲಿ ಭಾರಿ ವಿರೋಧದ ಅಲೆಗಳು ಎದಿದ್ದು, ಸಚಿವರು ಸಾರ್ವಜನಿಕವಾಗಿ ಮಹಿಳೆಯರ ಕ್ಷಮೆ ಕೋರಬೇಕು ಎಂದು ಪಟ್ಟು ಹಿಡಿಯಲಾಗಿದೆ.

ಆರ್‌ಇಇಟಿ ಪರೀಕ್ಷೆಯ ಉತ್ತರ ಪತ್ರಿಕೆ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಟೀಕೆಯನ್ನು ಎದುರಿಸುತ್ತಿರುವ ಈ ಸಚಿವರು ಇದೀಗ ಮತ್ತೊಂದು ವಿವಾದದಲ್ಲಿ ಬಿದ್ದಿದ್ದಾರೆ.

ಇವರ ಹೇಳಿಕೆ ಈಗ ರಾಜಕೀಯ ಸ್ವರೂಪ ಪಡೆದಿದೆ. ಈ ರೀತಿಯ ಮಹಿಳಾ ವಿರೋಧಿ ಹೇಳಿಕೆ ನೀಡುವುದು ಅವರ ಕೊಳಕು ಮನಸ್ಥಿತಿಯನ್ನು ಸೂಚಿಸುತ್ತದೆ ಎಂದು ರಾಜಸ್ಥಾನ ವಿರೋಧ ಪಕ್ಷ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಅಲ್ಕಾ ಗುರ್ಜಾರ್ ಹೇಳಿದ್ದಾರೆ. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದಿದ್ದು, ಸಾಧನೆ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಈ ರೀತಿ ಹೇಳಿಕೆ ನೀಡಿರುವುದು ಇವರ ಮನಸ್ಥಿತಿ ತೋರಿಸುತ್ತದೆ ಎಂದಿದ್ದಾರೆ.

ರಾಜಸ್ಥಾನ ರಾಜ್ಯದ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸುಮನ್ ಶರ್ಮಾ ಅವರು ಕೂಡ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು ಸಚಿವರು ಶಿಕ್ಷಣ ಮಂತ್ರಿಯಲ್ಲ, ಮೂರ್ಖ ಮಂತ್ರಿ' ಎಂದು ಕಿಡಿಕಾರಿದ್ದಾರೆ.

ಇಲ್ಲಿದೆ ನೋಡಿ ಸಚಿವರ ವಿವಾದಾತ್ಮಕ ಹೇಳಿಕೆ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net