ಕಲಬುರಗಿ ಸರ್ಕಾರಿ ಶಾಲೆಯಲ್ಲಿ ನಿದ್ದೆ ಮಾಡಲು ಹೋಗಿ ಭೂಕಂಪನಕ್ಕೆ ಬೆಚ್ಚಿಬಿದ್ದ ಸಂಸದ!

jadhav
Published on

ಕಲಬುರಗಿ: ಇಲ್ಲಿಂದ ಸುಮಾರು 75 ಕಿಲೋಮೀಟರ್ ದೂರ ಇರುವ ಗ್ರಾಮ ಗಡಿಕೇಶ್ವಾರ ಗ್ರಾಮದಲ್ಲಿ ಸಂಸದ ಡಾ. ಉಮೇಶ ಜಾಧವ್‌ ಗ್ರಾಮ ವಾಸ್ತವ್ಯ ಮಾಡಿದ್ದು, ಈ ಹೊತ್ತಿನಲ್ಲಿಯೇ ಭೂಕಂಪ ಸಂಭವಿಸಿದೆ!

ಇದರಿಂದ ಸಂಸದ ಜಾಧವ್ ಅವರು ಕಂಗಾಲಾಗಿ ಹೊರಬಂದಿರುವ ಘಟನೆ ನಡೆದಿದೆ. ನಸುಕಿನ 4 ಗಂಟೆ ಸುಮಾರಿಗೆ ಭೂಮಿ ಒಳಗಿನಿಂದ ಭಾರಿ ಪ್ರಮಾಣದ ಶಬ್ದ ಬಂದು ಲಘು ಕಂಪನ ಸಂಭವಿಸಿತ್ತು. ಈ ಸಮಯದಲ್ಲಿ ಸಂಸದ, ಸರಕಾರಿ ಶಾಲೆಯಲ್ಲಿ ಮಲಗಿದ್ದರು. ಅಲ್ಲಿ ಕೂಡ ಕಟ್ಟಡ ಅಲ್ಲಾಡಿದೆ. ಕೂಡಲೇ ಎಚ್ಚರಗೊಂಡ ಸಂಸದ ಹೊರಕ್ಕೆ ಬಂದಿದ್ದಾರೆ.

ನಗರದ ಅವ್ಯವಸ್ಥೆ ಕುರಿತಂತೆ ಹಲವಾರು ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಇಲ್ಲಿನ ಪರಿಸ್ಥಿತಿ ಅರಿಯಲು ಸಂಸದರು ಗ್ರಾಮಕ್ಕೆ ಆಗಮಿಸಿದ್ದರು. ಸರ್ಕಾರಿ ಶಾಲೆಯಲ್ಲಿ ಅವರು ತಂಗಿದ್ದರು. ಇವರು ವಾಸ್ತವ್ಯ ಮಾಡಿದ ಗಡಿಕೇಶ್ವಾರದಲ್ಲಿ ಮಧ್ಯರಾತ್ರಿ 1 ಗಂಟೆಯಿಂದ ಬೆಳಗಿನವರೆಗೆ ಕರೆಂಟ್ ಕಟ್ ಮಾಡಲಾಗಿತ್ತು. ವಿದ್ಯುತ್ ಸಂಪರ್ಕ ಇಲ್ಲದೇ ಕತ್ತಲಲ್ಲೇ ಸರಕಾರಿ ಶಾಲೆಯಲ್ಲಿ ರಾತ್ರಿ ಕಳೆದ್ದಿದ್ದಾರೆ ಸಂಸದರು. ಇವರು ವಾಸ್ತವ್ಯ ಮಾಡಿರುವ ಶಾಲಾ ಕೋಣೆಗೆ ಬೀಗ ಸಹ ಇರಲಿಲ್ಲ. ಈ ನಡುವೆಯೇ ಭೂಕಂಪನದ ಅನುಭವವೂ ಆಗಿ ಗ್ರಾಮದ ಅವ್ಯವಸ್ಥೆಯ ಬಿಸಿ ತಟ್ಟಿದೆ.

ವಾಸ್ತವ್ಯದ ನಂತರ ಸಮಸ್ಯೆ ಅರಿತ ಸಂಸದರು ಜನರಿಗೆ ಧನ್ಯವಾದ ಹೇಳಿ ರಾತ್ರಿ ಉಡುಗೆಯಲ್ಲಿಯೇ ಗಡಿಕೇಶ್ವಾರದಿಂದ ಹೊರಟರು. ‘ನಾಳೆ (ಸೋಮವಾರ ) ಕಂದಾಯ ಸಚಿವ ಆರ್.ಅಶೋಕ ಬರ್ತಾರೆ. ಶೆಡ್ ನಿರ್ಮಾಣ ಸೇರಿ ಎಲ್ಲಾ ಅಗತ್ಯ ಸೌಲಭ್ಯ ಕಲ್ಪಿಸುತ್ತಾರೆ’ ಎಂದು ಭರವಸೆ ನೀಡಿ ಗ್ರಾಮ ವಾಸ್ತವ್ಯಕ್ಕೆ ಮಂಗಳ ಹಾಡಿ ಹೋದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net