ಮತಯಾಚಿಸುತ್ತಲೇ ಮದ್ವೆಯಾದ್ಳು: ವಿರೋಧಿಗಳೂ ಬಂದು ಆಶೀರ್ವಾದ ಮಾಡಿದ್ರು!

marraige
Published on

ಕೊಟ್ಟಾಯಂ: ಕೇರಳದ ಕೊಟ್ಟಾಯಂನ ವೈಕೋಮ್ ಎಂಬಲ್ಲಿ ಕುತೂಹಲದ ಮದುವೆಯೊಂದು ನಡೆದಿದೆ. ಇಲ್ಲಿ ಮದುವೆಯಾಗ ಯುವತಿ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಿರುವ ಲಾವಣ್ಯ. ಮತದಾರನನ್ನೇ ಮದುವೆಯಾಗುತ್ತಿರುವ ಈ ಯುವತಿ, ಮತಯಾಚಿಸುತ್ತಲೇ ಮದುವೆಯಾಗುವ ಮೂಲಕ ಕುತೂಹಲ ಮೂಡಿಸಿದ್ದಾರೆ.

15ನೇ ವಾರ್ಡಿನಿಂದ ಎಲ್‍ಡಿಎಫ್ ಅಭ್ಯರ್ಥಿಯಾಗಿ ಕಣಕ್ಕಿಳಿರುವ ಲಾವಣ್ಯ, ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇದರ ನಡುವೆಯೇ ಶರತ್ ಎನ್ನುವವ ಜತೆ ಹಸಮಣೆ ಏರಿರುವ ಇವರು, ಬಂದವರ ಬಳಿಯೆಲ್ಲಾ ಮತಯಾಚಿಸಿದ್ದಾರೆ.

ಉಡುಗೊರೆಯೇ ಆಶೀರ್ವಾದ ಎಂದು ಲಗ್ನಪತ್ರಿಕೆಯಲ್ಲಿ ಬರೆಯುವುದು ಸಾಮಾನ್ಯ. ಆದರೆ ಈಕೆ ನಿಮ್ಮ ಮತವೇ ನನಗೆ ನೀಡುವ ಆಶೀರ್ವಾದ ಎಂದು ಹೇಳುತ್ತಲೇ ಮದುವೆ ಮನೆಯಲ್ಲಿಯೂ ಮತಯಾಚಿಸಿದ್ದಾರೆ.

ಇನ್ನೊಂದು ಇಂಟರೆಸ್ಟಿಂಗ್​ ವಿಷಯ ಎಂದರೆ, ಈಕೆಯ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿರುವವರೆಲ್ಲರೂ, ರಾಜಕೀಯವಾಗಿ ವಿರೋಧಿಗಳಾಗಿದ್ದರೂ, ಮದುವೆಗೆ ಬಂದು ಶುಭ ಹಾರೈಸಿ ಹೋಗಿದ್ದಾರೆ. ಯುಡಿಎಫ್ ಅಭ್ಯರ್ಥಿ ಮಜಿತಾ ಲಾಲ್ಜಿ ಮತ್ತು ಎನ್‍ಡಿಎ ಅಭ್ಯರ್ಥಿ ಪಿ.ಕೆ ಬಿನು ಸೇರಿದಂತೆ ಚುನಾವಣಾ ಕಣಕ್ಕಿಳಿದವರು ಭಾಗವಹಿಸಿ ನೂತನ ವಧು-ವರರಿಗೆ ಆಶೀರ್ವಾದ ಮಾಡಿದ್ದಾರೆ. ಅವರ ಬಳಿಯೂ ಮತಯಾಚಿಸುವ ತಮಾಷೆ ಘಟನೆಯೂ ಅಲ್ಲಿ ನಡೆದಿದೆ.

ಫೆಬ್ರವರಿ 2 ರಂದು ಲಾವಣ್ಯ ನಿಶ್ಚಿತಾರ್ಥ ನೆರವೇರಿತ್ತು. ಮದುವೆಯನ್ನು ಮೇ 10 ಕ್ಕೆ ನಿಗದಿಪಡಿಸಲಾಗಿತ್ತು. ಆದರೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದುವೆ ದಿನಾಂಕವನ್ನು ಮುಂದೂಡಲಾಯಿತು. ಈ ಮಧ್ಯೆ ಲಾವಣ್ಯ ಅವರನ್ನು ವಾರ್ಡ್‍ನಲ್ಲಿ ಎಲ್‍ಡಿಎಫ್ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಯಿತು. ಆದರೆ ವಧು-ವರರಿಬ್ಬರ ಕುಟುಂಬಗಳು ಮದುವೆಯನ್ನು ಮತ್ತಷ್ಟು ಮುಂದೂಡದಿರಲು ನಿರ್ಧರಿಸಿದರು.

ಲಾವಣ್ಯ ಕುಲಶೇಖರಮಂಗಲಂ ಮೂಲದ ಕಮಲಾಸನನ್ ಮತ್ತು ಕಾಂಚನ ದಂಪತಿಯ ಪುತ್ರಿ. ಶರತ್ ಅವರು ಚೆಮ್ಮನಕರಿ ಮೂಲದ ಚಂದ್ರನ್ ಮತ್ತು ಸಂತ ಅವರ ಪುತ್ರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net