35 ರೂ.ಗಾಗಿ ಐದು ವರ್ಷ, 2 ರೂ.ಗಾಗಿ ಮೂರು ವರ್ಷ ಏಕಾಂಗಿ ಹೋರಾಟ: ಲಾಭ ಪಡೆದದ್ದು 3 ಲಕ್ಷ ಜನ!

ticket1
Published on

ಕೋಟಾ (ರಾಜಸ್ಥಾನ): ರೈಲ್ವೆ ಇಲಾಖೆ ತಮ್ಮಿಂದ ಪಡೆದುಕೊಂಡ ಎರಡು ರೂಪಾಯಿ ಹೆಚ್ಚುವರಿ ಹಣವನ್ನು ಪಡೆಯಲು ವ್ಯಕ್ತಿಯೊಬ್ಬರು ಮೂರು ವರ್ಷ ಹೋರಾಟ ಮಾಡಿ ಗೆದ್ದಿದ್ದಾರೆ. ಮಾತ್ರವಲ್ಲದೇ ಈ ಹೋರಾಟದಿಂದಾಗಿ ಸುಮಾರು ಮೂರು ಲಕ್ಷ ಮಂದಿಗೆ ಪ್ರಯೋಜನವನ್ನೂ ದೊರಕಿಸಿಕೊಟ್ಟಿದ್ದಾರೆ.

ಇಂಥದ್ದೊಂದು ಅಚ್ಚರಿಯ ಘಟನೆ ನಡೆದಿರುವುದು ರಾಜಸ್ಥಾನದಲ್ಲಿ. ಆಗಿದ್ದೇನೆಂದರೆ, ಕೋಟಾ ನಿವಾಸಿ ಇಂಜಿನಿಯರ್​ ಸುಜಿತ್​ ಸ್ವಾಮಿ ಅವರು, 2017 ಜುಲೈ 2ರಂದು ರೈಲ್ವೆಯಲ್ಲಿ ರಾಜಸ್ಥಾನದಿಂದ ನವದೆಹಲಿಗೆ ರೈಲ್ವೆ ಪ್ರಯಾಣಿಸಲು ಟಿಕೆಟ್​ ಬುಕ್​ ಮಾಡಿದ್ದರು. ಇದಕ್ಕಾಗಿ 765 ರೂಪಾಯಿ ಟಿಕೆಟ್​ ಹಣ ಕೊಟ್ಟಿದ್ದರು. ಆದರೆ ಪ್ರಯಾಣ ಸಾಧ್ಯವಾಗದ ಹಿನ್ನೆಲೆಯಲ್ಲಿ ಬುಕಿಂಗ್​ ಕ್ಯಾನ್ಸಲ್​ ಮಾಡಿದ್ದರು. ರೈಲ್ವೆ ಇಲಾಖೆ 65 ರೂಪಾಯಿ ಸೇವಾ ಶುಲ್ಕ ಬದಲಾಗಿ 100 ರೂಪಾಯಿ ಕಡಿತಗೊಳಿಸಿ 665 ರೂ. ವಾಪಸ್​ ಸಂದಾಯ ಮಾಡಿತ್ತು.

ಇದನ್ನು ಸುಜಿತ್​ ಅವರು ನೋಡಿದಾಗ, 35 ರೂಪಾಯಿ ಜಿಎಸ್​ಟಿ ಹೆಚ್ಚುವರಿಯಾಗಿ ಪಡೆದದ್ದು ಗಮನಕ್ಕೆ ಬಂತು. ಆಗಿನ್ನೂ ಜಿಎಸ್​ಟಿ ಜಾರಿಯಾಗಿರಲಿಲ್ಲ. ಆಗಲೇ 35 ರೂಪಾಯಿ ಜಿಎಸ್​ಟಿ ಎಂದು ಹಾಕಿದ್ದನ್ನು ನೋಡಿ ಅಸಮಾಧಾನಗೊಂಡ ಅವರು, ರೈಲ್ವೆ ಮತ್ತು ಹಣಕಾಸು ಇಲಾಖೆಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು. ಅಲ್ಲಿಂದ ಬಂದ ಉತ್ತರದಲ್ಲಿ ಕೂಡ ರದ್ದುಪಡಿಸಿದ ಟಿಕೆಟ್‌ಗೆ 100 (65 ರೂ. ಜೊತೆಗೆ ಸೇವಾ ತೆರಿಗೆಯಾಗಿ 35 ರೂ) ವಿಧಿಸಲಾಗಿದೆ ಎಂದು ಉತ್ತರ ಬಂದಿತ್ತು.

ಇದರಿಂದ ಇನ್ನೂ ಸಿಟ್ಟಿಗೆದ್ದ ಸುಜಿತ್​ ಅವರು, ಜಿಎಸ್​ಟಿ ಜಾರಿಯಾಗದ ಕುರಿತು ರೈಲ್ವೆ ಇಲಾಖೆಗೆ 50 ಬಾರಿ ಪತ್ರ ಬರೆದದ್ದೂ ಅಲ್ಲದೇ, ಹಣಕಾಸು ಇಲಾಖೆ ಸೇರಿ 4 ಸಚಿವಾಲಯಗಳಿಗೂ ಪತ್ರ ಬರೆದರು. ಕೊನೆಗೂ ಅವರಿಗೆ ಜಯ ಸಿಕ್ಕಿತು. ಜುಲೈ 1, 2017 ರ ಮೊದಲು ಬುಕ್ ಮಾಡಲಾದ ಮತ್ತು ರದ್ದುಗೊಳಿಸಲಾದ ಟಿಕೆಟ್‌ಗಳಿಗೆ ಬುಕಿಂಗ್ ಸಮಯದಲ್ಲಿ ವಿಧಿಸಲಾದ ಸೇವಾ ತೆರಿಗೆಯ ಒಟ್ಟು ಮೊತ್ತವನ್ನು ಮರುಪಾವತಿಸಲಾಗುವುದು ಎಂದು ರೈಲ್ವೆ ಇಲಾಖೆ ಹೇಳಿತು. ಇದರಿಂದ ಸುಜಿತ್​ಗೆ ಮಾತ್ರವಲ್ಲದೇ ಈ ಸಮಯದಲ್ಲಿ ಟಿಕೆಟ್​ ಬುಕ್​ ಮಾಡಿದ್ದವರು ಹಾಗೂ ರದ್ದು ಮಾಡಿದ್ದ ಮೂರು ಲಕ್ಷ ಪ್ರಯಾಣಿಕರಿಗೆ 35 ರೂಪಾಯಿ ವಾಪಸ್​ ನೀಡಿದೆ ರೈಲ್ವೆ ಇಲಾಖೆ.

ಮುಗಿಯದ ಹೋರಾಟ:
ಇಷ್ಟಕ್ಕೇ ಸುಜಿತ್​ ಹೋರಾಟ ಮುಗಿಯಲಿಲ್ಲ. ರೈಲ್ವೆ ಇಲಾಖೆ 35 ರೂಪಾಯಿ ಬದಲು 33 ರೂಪಾಯಿ ಹಿಂದಿರುಗಿಸಿತು. ಎರಡು ರೂಪಾಯಿ ಕೊಡದ ಬಗ್ಗೆ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ ಸುಜಿತ್​ ಅವರು, ಮತ್ತೆ ತಮ್ಮ ಹೋರಾಟ ಮುಂದುವರೆಸಿದರು. ಕೊನೆಗೆ ಇವರ ಈ ಹೋರಾಟಕ್ಕೆ ತಲೆಬಾಗಿದ ಇಲಾಖೆ ಇದೇ 23ರಂದು 2 ರೂಪಾಯಿ ಮರಳಿಸಿದೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net