ವಿಚಾರಣೆಗೆ ಕೋರ್ಟ್‌ಗೆ ಕರೆತರ್ತಿಲ್ಲವೆಂದು ಸಿಟ್ಟಿಗೆದ್ದು ನ್ಯಾಯಾಧೀಶರತ್ತ ಚಪ್ಪಲಿ ಎಸೆದ ಆರೋಪಿ!

judge
Published on

ಮುಂಬೈ: ಕೊಲೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ವ್ಯಕ್ತಿಯೋರ್ವ ನ್ಯಾಯಾಲಯದ ಒಳಗೆ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರ ಕಡೆಗೆ ಚಪ್ಪಲಿ ಎಸೆದಿದ್ದಾನೆ. ಈ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್‌ ಕೋರ್ಟ್‌ನಲ್ಲಿ ನಡೆದಿದೆ.

ರೋಷನ್‌ ಘೋರ್ಪಡೆ ಎಂಬಾತ ಇಂಥ ಕೃತ್ಯ ಎಸಗಿದವನು. ಈತ ತನ್ನ ಪತ್ನಿ ಹಾಗೂ ತಾಯಿಯನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಈತನ ವಿಚಾರಣೆ ಅನೇಕ ವರ್ಷಗಳಿಂದ ನಡೆಯುತ್ತಿದೆ. ಆದರೆ ವಿಚಾರಣೆ ದಿನಗಳಲ್ಲಿ ಪೊಲೀಸರಿಗೆ ಎಷ್ಟೇ ಬೇಡಿಕೊಂಡರೂ ಅವರು ಈತನನ್ನು ಕೋರ್ಟ್‌ಗೆ ಕರೆದುಕೊಂಡು ಹೋಗುತ್ತಿರಲಿಲ್ಲ. ಪ್ರತಿಬಾರಿಯೂ ತನ್ನನ್ನು ಕೋರ್ಟ್‌ಗೆ ಕರೆದುಕೊಂಡು ಹೋಗಿ ಎನ್ನುತ್ತಿದ್ದ. ಆದರೆ ಪೊಲೀಸರು ಕೋರ್ಟ್‌ ಆದೇಶವಿದ್ದರಷ್ಟೇ ಕರೆದುಕೊಂಡು ಹೋಗುವುದಾಗಿ ಹೇಳಿದ್ದರು.

ಇದರಿಂದ ರೋಷನ್‌ ನ್ಯಾಯಾಧೀಶರ ವಿರುದ್ಧ ಸಿಟ್ಟಿಗೆದ್ದಿದ್ದ. ನಿನ್ನೆ ವಿಚಾರಣೆಗೆ ಕರೆದುಕೊಂಡು ಹೋದಾಗ ನ್ಯಾಯಾಧೀಶರ ಕಡೆಗೆ ಚಪ್ಪಲಿ ಎಸೆದಿದ್ದಾನೆ. ತಕ್ಷಣ ನ್ಯಾಯಾಧೀಶರು ಕೆಳಗೆ ಬಗ್ಗಿ ತಪ್ಪಿಸಿಕೊಂಡಿದ್ದಾರೆ.

ಈಗ ಕೊಲೆ ಕೇಸಿನ ಜತೆಗೆ ಐಪಿಸಿ ಸೆಕ್ಷನ್‌ 353 (ಸಾರ್ವಜನಿಕ ಸೇವಕ ತನ್ನ ಕರ್ತವ್ಯವನ್ನು ನಿರ್ವಹಿಸದಂತೆ ಅಡ್ಡಿಪಡಿಸಲು ಯತ್ನ), 504ರ (ಶಾಂತಿಯನ್ನು ಭಂಗಗೊಳಿಸಿ ಉದ್ದೇಶಪೂರ್ವಕ ಅವಮಾನ)ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net