ಪತ್ನಿಗೆ ಪಾಲು ಕೊಡಬೇಕಾಗುತ್ತದೆಯೆಂದು 6 ಕೋಟಿ ರೂ. ಬಂಗಲೆಯನ್ನೇ ಸುಟ್ಟುಹಾಕಿದ ಭೂಪ!

fire
Published on

ಬ್ರಿಟನ್‌: ಬ್ರಿಟನ್‌ ವ್ಯಕ್ತಿಯೊಬ್ಬ ತನ್ನ ಐಷಾರಾಮಿ ಬಂಗಲೆಯನ್ನು ಸುಟ್ಟು ಬೂದಿ ಮಾಡಿದ್ದಾನೆ. 550 ಸಾವಿರ ಪೌಂಡ್‌ ಅಂದರೆ ಸುಮಾರು ಆರು ಕೋಟಿ ರೂಪಾಯಿ ಮೌಲ್ಯದ ಈ ಬಂಗಲೆಯನ್ನು ಆತ ಸುಟ್ಟಿರುವುದಕ್ಕೆ ವಿಚಿತ್ರ ಕಾರಣವೂ ಇದೆ.

ಜಾನ್ ಮ್ಯಾಕ್‌ಕೊರ‍್ರಿ ಎಂಬ 75 ವರ್ಷ ವಯಸ್ಸಿನ ಈ ಭೂಪ ಹೀಗೆ ಮಾಡಲು ಕಾರಣ, ಈತನ ಪತ್ನಿ! ಕೆನ್‌ಫಾರ್ಡ್‌ ನಿವಾಸಿಯಾಗಿರುವ ಈತನಿಗೂ ಪತ್ನಿಗೂ ವಿರಸ ಉಂಟಾಗಿದೆ. ಈ ಇಳಿ ವಯಸ್ಸಿನಲ್ಲಿ ದಂಪತಿ ನಡುವೆ ಏನೋ ಜಗಳವಾಗಿ ಪತ್ನಿ ಮನೆ ಬಿಟ್ಟು ಹೋಗಿದ್ದಾಳೆ. ಇದೇ ಕೋಪಕ್ಕೆ ಈತ ಬಂಗಲೆಯನ್ನೇ ಸುಟ್ಟುಹಾಕಿದ್ದಾನೆ.

ಅಷ್ಟಕ್ಕೂ ಪತ್ನಿ ಬಿಟ್ಟುಹೋದ ಸಿಟ್ಟಿಗೆ ಮಾತ್ರ ಹೀಗೆ ಮಾಡಿದ್ದಲ್ಲ. ಆಕೆ ಬಿಟ್ಟು ಹೋದ ಮೇಲೆ ವಿಚ್ಛೇದನಕ್ಕೆ ಅರ್ಜಿ ಹಾಕಿದರೆ, ಈ ಬಂಗಲೆಯಲ್ಲಿ ಅವಳಿಗೂ ಪಾಲು ಕೊಡಬೇಕಾಗುತ್ತದೆ ಎಂದು ಸುಟ್ಟು ಭಸ್ಮಮಾಡಿದ್ದಾನೆ. ಪೊಲೀಸರ ವಿಚಾರಣೆ ವೇಳೆ ಈ ಭಯಾನಕ ಸತ್ಯವನ್ನು ಬಿಚ್ಚಿಟ್ಟಿದ್ದಾನೆ. ತನಗೆ ವಾಸಿಸಲು ಮನೆ ಇಲ್ಲದಿದ್ದರೂ ಪರವಾಗಿಲ್ಲ, ಪತ್ನಿಗೆ ಅದರಲ್ಲಿ ಪಾಲು ಕೊಡಲು ಸಾಧ್ಯವೇ ಇಲ್ಲ ಎಂದು ಹೀಗೆ ಮಾಡಿರುವುದಾಗಿ ಜಾನ್‌ ಹೇಳಿದ್ದಾನೆ!

Man Burns Down Own House To Stop Estranged Wife From Selling It Off

ಬಂಗಲೆಯನ್ನು ಸುಡುವ ಸಮಯದಲ್ಲಿ ಇದಕ್ಕೆ ಪತ್ನಿ ಪ್ರತಿರೋಧ ಒಡ್ಡಿದರೂ ಜಾನ್‌ ಕೇಳಲಿಲ್ಲ. ಮಾತ್ರವಲ್ಲದೇ ತನ್ನ ಚಿನ್ನಾಭರಣ ಸೇರಿದಂತೆ ವಸ್ತುಗಳನ್ನು ಹೊರಕ್ಕೆ ತರಲು ಆಕೆ ಮನೆಯೊಳಗೆ ದೌಡಾಯಿಸಿದಾಗ ಅದಕ್ಕೂ ಬಿಡದ ಜಾನ್‌, ಎಲ್ಲವನ್ನೂ ಸುಟ್ಟು ಹಾಕಿದ್ದಾನೆ. ಮನೆಯ ವಿಮೆಯ ಕಂತುಗಳನ್ನು ಪಾವತಿ ಮಾಡದೇ ಇದ್ದ ಕಾರಣ ವಿಮೆ ಕೂಡ ಈಗ ಅದಕ್ಕೆ ಸಿಗುವುದಿಲ್ಲ!

ಕುಡಿದ ಅಮಲಿನಲ್ಲಿ ಹೀಗೆ ಮಾಡಿಬಿಟ್ಟೆ. ನಾನು ಏನು ಮಾಡುತ್ತಿದ್ದೇನೆಂದು ನನಗೆ ತಿಳಿಯಲಿಲ್ಲ ಎಂದಿದ್ದಾನೆ ಜಾನ್‌. ಆದರೆ ಪತ್ನಿ ಹೇಳಿದ್ದೇನೆಂದರೆ ನಾನು ಅವನನ್ನು ಬಿಟ್ಟುಹೋದ ಮೇಲೆ ಖುಷಿಯಾಗಿದ್ದೇನೆಂದು ಸಿಟ್ಟಿನಿಂದ ಆತ ಹಾಗೆ ಮಾಡಿದ್ದಾನೆ. ನಾನೇನೂ ವಿಚ್ಛೇದನ ಕೇಳುತ್ತಿರಲಿಲ್ಲ ಎಂದಿದ್ದಾಳೆ. ಒಟ್ಟಿನಲ್ಲಿ ಗಂಡ-ಹೆಂಡತಿ ಜಗಳ ಬಂಗಲೆ ಭಸ್ಮ ಆಗುವವರೆಗೆ ಎಂಬಂತಾಯಿತು!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net