ಥೂ...ನನ್ನಷ್ಟು ದೊಡ್ಡ ಕತ್ತೆ ಯಾರೂ ಇಲ್ಲ... ನಾನೇ ದೊಡ್ಡ ಕತ್ತೆ... ಎಂದು ಹಣೆ ಚಚ್ಚಿಕೊಂಡ ಮಮತಾ ಬ್ಯಾನರ್ಜಿ!

mamata
Published on

ಕೋಲ್ಕತಾ: ಥೂ ನನ್ನಷ್ಟು ದೊಡ್ಡ ಕತ್ತೆ ಯಾರೂ ಇಲ್ಲ... ನಾನು ಅತಿದೊಡ್ಡ ಕತ್ತೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ತೃಣಮೂಲ ಕಾಂಗ್ರೆಸ್ ನ ನಾಯಕಿ ಮಮತಾ ಬ್ಯಾನರ್ಜಿ ಇಂದು ಆಕ್ರೋಶ ಹೊರಹಾಕಿದ್ದಾರೆ.

ಪಶ್ಚಿಮ ಬಂಗಾಳಕ್ಕೆ ಶೀಘ್ರದಲ್ಲಿ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಹಮ್ಮಿಕೊಳ್ಳಲಾಗಿದ್ದ ಚುನವಣಾ ಪ್ರಚಾರ ಸಭೆಯಲ್ಲಿ ಅವರು ತಮ್ಮನ್ನು ತಾವೇ ಹಳಿದುಕೊಂಡು ಹಣೆ ಚಚ್ಚಿಕೊಂಡರು.

ಅಷ್ಟಕ್ಕೂ ಈ ರೀತಿ ಅವರು ಹೇಳಲು ಕಾರಣ, ಅಧಿಕಾರಿ ಕುಟುಂಬ! ತಮ್ಮ ಪಕ್ಷ ಬಿಟ್ಟು ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಹಾಗೂ ಅವರ ತಂದೆ ಸಿಸಿರ್​ ಅಧಿಕಾರಿಯನ್ನು ಉದ್ದೇಶಿಸಿ ಅವರು ತಮ್ಮನ್ನು ದೂಷಿಸಿಕೊಂಡರು. ನಾನು ದೊಡ್ಡ ಕತ್ತೆ. ನನ್ನಷ್ಟು ದೊಡ್ಡ ಕತ್ತೆ ಬೇರೊಂದಿಲ್ಲ. ಅಧಿಕಾರಿ ಕುಟುಂಬದ ಅಸಲಿ ಮುಖವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನು ವಿಫಲಳಾದೆ. ಮೇದಿನಿಪುರ ಜಿಲ್ಲೆಯಲ್ಲಿ ಅಧಿಕಾರಿ ಕುಟುಂಬವು 5000 ಕೋಟಿಯಷ್ಟು ಮೌಲ್ಯದ ಸಾಮ್ರಾಜ್ಯ ಕಟ್ಟಿದ್ದಾರೆ ಎಂಬ ಮಾತುಗಳನ್ನು ಕೇಳಿದ್ದೇನೆ. ಇಷ್ಟು ವರ್ಷ ನಮ್ಮ ಪಕ್ಷದಲ್ಲಿ ಇದ್ದರೂ ಅದು ನನಗೆ ತಿಳಿಯಲಿಲ್ಲ. ಈಗ ಪಕ್ಷಾಂತರ ಮಾಡಿದರು. ಆದರೆ ಸುಮ್ಮನೇ ಬಿಡುವುದಿಲ್ಲ. ನಾನು ಅಧಿಕಾರಕ್ಕೆ ಬಂದ ಮೇಲೆ ತನಿಖೆ ಮಾಡುತ್ತೇನೆ ಎಂದು ಕಿಡಿ ಕಾರಿದರು.

ಸಿಸಿರ್ ಅಧಿಕಾರಿ ಎಗ್ರಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಪಕ್ಷದ ಪ್ರಮುಖ ನಾಯಕರ ಸಮ್ಮುಖದಲ್ಲಿ ಇಂದು ಬಿಜೆಪಿಗೆ ಸೇರ್ಪಡೆಗೊಂಡರೆ, ಟಿಎಂಸಿ ತೊರೆದಿದ್ದ ಸುವೇಂದು ಅಧಿಕಾರಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಲಿದ್ದಾರೆ.

ಈ ಭಾಗದ ಜನರು ಅಧಿಕಾರಿ ಕುಟುಂಬವನ್ನು ಸಹಿಸಿಕೊಳ್ಳುವುದಿಲ್ಲ. ಜನರು ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ. ನಾನು ದೊಡ್ಡ ಕತ್ತೆ. ಅಧಿಕಾರಿ ಕುಟುಂಬದ ಅಸಲಿ ಮುಖವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾನು ವಿಫಲಳಾದೆ. ನನಗೆ ಗೊತ್ತಿಲ್ಲ. ಆದರೇ, ಅಧಿಕಾರಿ ಕುಟುಂಬ ಮೇದಿನಿಪುರ ಜಿಲ್ಲೆಯಲ್ಲಿ 5000 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂದು ಜನರು ಹೇಳುತ್ತಾರೆ. ಅವರು ಮತವನ್ನು ಹಣಕ್ಕೆ ಖರೀದಿ ಮಾಡುತ್ತಿದ್ದಾರೆ. ಅವರಿಗೆ ಮತ ಹಾಕಬೇಡಿ. ಎಂದು ಬ್ಯಾನರ್ಜಿ ಕಿಡಿ ಕಾರಿದ್ದಾರೆ.

ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಮಮತಾ, ಬಿಜೆಪಿಯವರೆಂದರೇ ರಾಕ್ಷಸರು, ಗೂಂಡಾಗಳು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net