

ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಎಎಸ್‌ಐ ಸುರೇಶ್ (51) ದಿಢೀರ್ ನಾಪತ್ತೆಯಾಗಿದ್ದು, ಎಲ್ಲೆಡೆ ಆತಂಕ ಸೃಷ್ಟಿಸಿದೆ. ಕಳೆದ ಎರಡು ದಿನಗಳಿಂದ ಇವರು ನಾಪತ್ತೆಯಾಗಿದ್ದು ಇದುವರೆಗೂ ಎಲ್ಲಿಯೂ ಪತ್ತೆಯಾಗಿಲ್ಲ.
ಕುಶಾಲನಗರದಲ್ಲಿ ಇರುವ ಪೊಲೀಸ್ ಕ್ವಾಟರ್ಸ್‌ಗೆ ಬೀಗ ಹಾಕಿ ಸುರೇಶ್ ತೆರಳಿದ್ದಾರೆ ಎಂದು ಹೇಳಲಾಗುತ್ತಿದ್ದು, ಕುಟುಂಬ ಸದಸ್ಯರು ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಇವರ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದು, ಇನ್ನಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಪೊಲೀಸರು ತನಿಖೆ ನಡೆಸಿದಾಗ ಸುರೇಶ್ ಅವರ ಫೋನ್‌ನ ಟವರ್ ಲೊಕೇಶನ್ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯಲ್ಲಿ ಎಂಬಲ್ಲಿ ನಿಂತಿದೆ. ಅಂದರೆ ಅಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸುತ್ತಮುತ್ತಲಿನ ಪ್ರದೇಶದಲ್ಲಿ ಸುರೇಶ್ ಅವರಿಗೆ ಹುಡುಕಾಟದಲ್ಲಿ ನಡೆಸಿದ್ದಾರೆ. ಆದರೂ ಅವರು ಪತ್ತೆಯಾಗಲಿಲ್ಲ.
ಇವರ ಪತ್ನಿ ಶೋಭಾ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದು, ಅವರಿಗೆ ವಿಷಯ ತಿಳಿಸಲಾಗಿದೆ. ಅವರು ಕೂಡ ದೂರು ದಾಖಲಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಹಾಸನ ಜಿಲ್ಲೆಯ ಕೊಣನೂರಿನವರಾಗಿರುವ ಸುರೇಶ್ ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅಲ್ಲದೆ ಸಾಕಷ್ಟು ರಜೆ ಹಾಕುತ್ತಿದ್ದರು ಎಂದು ಹೇಳಲಾಗುತ್ತಿದೆ. ಅವರಿಗಾಗಿ ಹುಡುಕಾಟ ನಡೆದಿದೆ.