

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ ಕೃಷ್ಣ(SM Krishna) ಅವರ ಪಾರ್ಥಿವ ಶರೀರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಹುಟ್ಟೂರು ಮದ್ದೂರಿನ ಸೋಮನಹಳ್ಳಿಯಲ್ಲಿ ಬುಧವಾರ ಸಂಜೆ 4 ಗಂಟೆಗೆ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
"ಬುಧವಾರ (ನಾಳೆ) ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ರಾಜ್ಯಾದ್ಯಂತ ಮೂರು ದಿನ ಶೋಕಾಚಾರಣೆ ಮಾಡಲಾಗುವುದು. ಬುಧವಾರ ಬೆಳಗ್ಗೆ 8 ಗಂಟೆವರೆಗೂ ಎಸ್.ಎಂ. ಕೃಷ್ಣ ಅವರ ಸದಾಶಿವನಗರ ನಿವಾಸದಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ನಂತರ ಅವರ ಪಾರ್ಥಿವ ಶರೀರವನ್ನು ಮದ್ದೂರಿನ ಸೋಮನಹಳ್ಳಿಗೆ ಕೊಂಡೊಯ್ಯಲಾಗುವುದು. ಅಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 3.00ಗಂಟೆವರೆಗೂ ಮಂಡ್ಯ, ಮೈಸೂರು ಭಾಗದ ಜನರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು.
ಆಡಳಿತಕ್ಕೆ ಹೊಸ ರೂಪ ಕೊಟ್ಟ ಧೀಮಂತ ನಾಯಕ ಎಸ್.ಎಂ ಕೃಷ್ಣ
“ಎಲ್ಲಾ ವರ್ಗಗಳಿಗೆ ಬದುಕು ಕಟ್ಟಿಕೊಟ್ಟ, ಆಡಳಿತಕ್ಕೆ ಹೊಸ ರೂಪ ಕೊಟ್ಟ ಧೀಮಂತ ನಾಯಕ ಎಸ್.ಎಂ ಕೃಷ್ಣ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮದ್ದೂರಿನಲ್ಲಿ ಮಂಗಳವಾರ ಮಾಧ್ಯಮಗಳಿಗೆ ಜತೆ ಮಾತನಾಡಿದರು.
“ರಾಜ್ಯ ಮತ್ತು ರಾಷ್ಟ್ರದ ಧೀಮಂತ ನಾಯಕರನ್ನು ನಾವು ಕಳೆದುಕೊಂಡಿದ್ದೇವೆ. ಆಧುನಿಕ ಕರ್ನಾಟಕದ ಮಹಾಶಿಲ್ಪಿ ಎಸ್.ಎಂ. ಕೃಷ್ಣ ಅವರು. ಅವರು ನಮ್ಮ ಕುಟುಂಬದ ಸದಸ್ಯರಾಗಿದ್ದರೂ ರಾಜ್ಯಕ್ಕೆ ಅವರ ಕೊಡುಗೆ ಅಪಾರ. ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರಾಗಿ ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ವಿದೇಶಾಂಗ ಮಂತ್ರಿಯಾಗಿ, ಮಹಾರಾಷ್ಟ್ರದ ರಾಜ್ಯಪಾಲರ ಹುದ್ದೆ ಅಲಂಕರಿಸಿದ್ದ ಹಿರಿಯ ನಾಯಕ. 1962ರಿಂದ ಶಾಸಕರಾಗಿ ಆಯ್ಕೆಯಾಗಿ ಎಲ್ಲಾ ಸ್ಥಾನ ಅಲಂಕರಿಸಿ ಸೋಲು ಗೆಲವು ಕಂಡಂತಹ ಅಪರೂಪದ ನಾಯಕ” ಎಂದು ತಿಳಿಸಿದರು.