

ಗಾಂಧಿನಗರ (ಗುಜರಾತ್ ): ಈಕೆ ವಿವಾಹಿತೆ, ಮೂರು ವರ್ಷದ ಮುದ್ದಾದ ಮಗುವಿನ ತಾಯಿ. ಆತ ವಿವಾಹಿತ. ಆದರೆ ಇಬ್ಬರೂ ತಂತಮ್ಮ ಸಂಸಾರವನ್ನು ತೊರೆದು ಲಿವ್ ಇನ್ ರಿಲೇಷನ್ನಲ್ಲಿ ಇದ್ದರು. ಈ ತಪ್ಪಿಗೀಗ ಯುವತಿ ಹೆಣವಾಗಿದ್ದರೆ, ಯುವಕ ಕಂಬಿಯ ಹಿಂದಿದ್ದಾನೆ!
ಇಂಥದ್ದೊಂದು ಘಟನೆ ನಡೆದಿರುವುದು ಗುಜರಾತ್ನಲ್ಲಿ. ಚಿರಾಗ್ ಹಾಗೂ ರಶ್ಮಿ ಕಟಾರಿಯಾ ಎಂಬ ಜೋಡಿಯ ಕಥೆ ಇದು. ಬೇರೆಯವರ ಜತೆ ವಿವಾಹವಾಗಿದ್ದರೂ, ಈ ಇಬ್ಬರು ಲಿವ್ ಇನ್ ರಿಲೇಷನ್ನಲ್ಲಿ ಇದ್ದರು ಎನ್ನಲಾಗಿದೆ. ಈ ಮಧ್ಯೆ ರಶ್ಮಿ ಗರ್ಭಿಣಿಯಾಗಿದ್ದಾರೆ.
ಇಬ್ಬರ ನಡುವೆ ಏನಾಗಿದೆಯೋ ಸದ್ಯ ಬಹಿರಂಗವಾಗಿಲ್ಲ. ಆದರೆ ಗರ್ಭಿಣಿ ರಶ್ಮಿ ಕೊಲೆಯಾಗಿದ್ದು, ಈ ಸಂಬಂಧ ಚಿರಾಗ್ನನ್ನು ಬಂಧಿಸಲಾಗಿದೆ.
ಆಗಿದ್ದೇನು?
ನವೆಂಬರ್ 14ರಂದು ರಶ್ಮಿ ಮೂರು ವರ್ಷದ ಮಗನನ್ನು ತಾಯಿ ಮನೆಯಲ್ಲಿ ಬಿಟ್ಟು ಹೋಗಿದ್ದವಳು ವಾಪಸ್ ಆಗಿರಲಿಲ್ಲ. ಆಕೆಯ ಪಾಲಕರು ಎಷ್ಟು ಹುಡುಕಾಡಿದರೂ ಮಗಳು ಸಿಗಲಿಲ್ಲ. ಕೊನೆಯದಾಗಿ ಪೊಲೀಸರಿಗೆ ದೂರು ನೀಡಿದ್ದರು.
ಇದರ ಬೆನ್ನತ್ತಿ ಹೋದ ಪೊಲೀಸರಿಗೆ ಚಿರಾಗ್ ವಿಷಯ ತಿಳಿದಿದೆ. ವಿವಾಹಿತನಾಗಿರುವ ಈತನ ಜತೆ ರಶ್ಮಿ ಲಿವ್ ಇನ್ ರಿಲೇಷನ್ನಲ್ಲಿ ಇದ್ದುದು, ಗರ್ಭಿಣಿಯಾಗಿರುವ ವಿಷಯ ತಿಳಿದಿದೆ. ನಂತರ ಚಿರಾಗ್ಗಾಗಿ ಬಲೆ ಬೀಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ತಾನೇ ರಶ್ಮಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಆಕೆಯ ಶವವನ್ನು ಅಲ್ಲಿಂದ ಸುಮಾರು 22 ಕಿ.ಮೀ ದೂರ ಇರುವ ತಮ್ಮ ಕೃಷಿಭೂಮಿಯಲ್ಲಿ ಗುಂಡಿ ತೋಡಿ ಹೂತುಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ. ಆಕೆ ತನ್ನ ಜತೆ ಹೆಚ್ಚು ಜಗಳವಾಡುತ್ತಿದ್ದಳು. ಈ ಹಿನ್ನೆಲೆಯಲ್ಲಿ ತಾನು ಆಕೆಯನ್ನು ಕೊಲೆ ಮಾಡಿರುವುದಾಗಿ ಬಹಿರಂಗಪಡಿಸಿದ್ದಾನೆ. ಮೃತದೇಹವನ್ನು ವಶಕ್ಕೆ ಪಡೆದುಕೊಂಡು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಕೃತ್ಯದಲ್ಲಿ ಚಿರಾಗ್ ಪತ್ನಿಯ ಕೈವಾಡ ಇದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದಕ್ಕೆ ಕಾರಣ, ಈ ಅಕ್ರಮ ಸಂಬಂಧದ ಬಗ್ಗೆ ತಿಳಿದ ಆತನ ಪತ್ನಿ ಕೆಲ ತಿಂಗಳ ಹಿಂದೆ ಆಕೆ ರಶ್ಮಿ ಜತೆ ಜಗಳವಾಡಿದ್ದೂ ಅಲ್ಲದೇ ರಶ್ಮಿಯ ಮೇಲೆ ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದೆ. ಒಟ್ಟಿನಲ್ಲಿ ರಶ್ಮಿ ಕೊಲೆಯಾಗಿದ್ದು, ತನಿಖೆ ಮುಂದುವರೆದಿದೆ.