

ಪಣಜಿ: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿರುವವರು ಅದೆಷ್ಟೋ ಮಂದಿ. ತುರ್ತಾಗಿ ಹೋಗಲೇಬೇಕಾದ ಅನಿವಾರ್ಯತೆಯಿಂದಲೋ ಇಲ್ಲವೇ ಹೇಗೋ ರೈಲು ಬಂದು ಬಿಟ್ಟಿದೆ, ಹತ್ತಿಕೊಂಡೇ ಬಿಡುವ ಎಂದುಕೊಂಡು ಚಲಿಸುತ್ತಿರುವ ಟ್ರೇನ್ ಒಳಗೆ ನುಗ್ಗುವ ಸಾಹಸ ಮಾಡುವವರೇ ಹೆಚ್ಚು.
ಈ ರೀತಿಯ ಅನೇಕ ಘಟನೆಗಳು ದಿನನಿತ್ಯ ಒಂದಿಲ್ಲೊಂದು ರೈಲು ನಿಲ್ದಾಣದಲ್ಲಿ ನಡೆಯುತ್ತಲೇ ಇರುತ್ತವೆ. ಎಷ್ಟೋ ಮಂದಿ ಪ್ರಾಣ ಕಳೆದುಕೊಳ್ಳುತ್ತಲೇ ಇದ್ದಾರೆ.
ಇದೇ ರೀತಿ ಸರ್ಕಸ್ ಮಾಡಲು ಹೋದ ವ್ಯಕ್ತಿಯೊಬ್ಬನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೈಲ್ವೆ ಸಚಿವಾಲಯ ಈ ವಿಡಿಯೋ ಹರಿಬಿಟ್ಟಿದೆ. ಇದರಿಂದ ರೈಲು ಹತ್ತಲು ಹೋದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಜಾರಿ ಬಿದ್ದಿದ್ದು, ಆರ್ಪಿಎಫ್ ಸಿಬ್ಬಂದಿ ಕ್ಷಣ ಮಾತ್ರದಲ್ಲಿ ಆತನನ್ನು ಸಾವಿನಿಂದ ಪಾರು ಮಾಡಿರುವುದನ್ನು ಕಾಣಬಹುದಾಗಿದೆ.
ಈ ಘಟನೆ ನಡೆದಿರುವುದು ಗೋವಾದ ವಾಸ್ಕೋಡ ಗಾಮಾ ರೈಲು ನಿಲ್ದಾಣದಲ್ಲಿ. ಪ್ರಯಾಣಿಕನೊಬ್ಬ, ಚಲಿಸುತ್ತಿದ್ದ ರೈಲು ಹತ್ತಲು ಪ್ರಯತ್ನಿಸಿದ್ದಾನೆ. ಆಗ ಸಮತೋಲನ ಕಳೆದುಕೊಂಡ ಆತ ಪ್ಲಾಟ್ಫಾರಂ ಹಾಗೂ ರೈಲಿನ ನಡುವೆ ಸಿಲುಕಿಕೊಂಡಿದ್ದಾನೆ. ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಆ ವ್ಯಕ್ತಿ ಕೂದಲೆಳೆಯ ಅಂತರದಲ್ಲಿ ಆತನನ್ನು ಸಾವಿನಿಂದ ಪಾರಾಗಿದ್ದಾನೆ.
ಈತನ ರಕ್ಷಣೆ ಮಾಡಿರುವವರು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಕೆಎಂ ಪಾಟೀಲ್ ಎಂದು ಗುರುತಿಸಲಾಗಿದೆ. ಇವರಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಆದರೆ ಎಲ್ಲ ಸಮಯದಲ್ಲಿ ಅದೃಷ್ಟ ನಿಮಗೆ ಕೈಗೂಡುವುದಿಲ್ಲ. ಜೀವದ ಮೇಲೆ ನಿಮಗೆ ಪ್ರೀತಿ ಇದ್ದರೆ ಇಂಥ ದುಷ್ಕೃತ್ಯಕ್ಕೆ ಕೈಹಾಕಬೇಡಿ ಎಂದು ರೈಲ್ವೆ ಇಲಾಖೆ ಹೇಳಿದೆ.
ಪ್ರಾಣ ಕಳೆದುಕೊಂಡರೆ ನಿಮಗೆ ಏನೂ ಗೊತ್ತಾಗದೇ ಇರಬಹುದು. ಆದರೆ ಶಾಶ್ವತವಾಗಿ ಅಂಗವಿಕರಾಗಿ ಇರಬೇಕಾದ ಸ್ಥಿತಿ ಬಂದರೆ ಹೇಗೆ ಎನ್ನುವುದನ್ನೊಮ್ಮೆ ಊಹಿಸಿಕೊಳ್ಳಿ...