ನೀರಿನೊಳಗೆ ಹೊಕ್ಕು ಪಾಣಿಪೀಠವ ಹತ್ತಿ ಶಿವನ ಪೂಜೆ ಮಾಡುವ ಜಗತ್ತಿನ ಏಕೈಕ ಅರ್ಚಕ ಹಂಪಿಯ ಕೃಷ್ಣ ಇನ್ನಿಲ್ಲ..

krishnabhat
Published on

ಬಳ್ಳಾರಿ: ಬೇಡರ ಕಣ್ಣಪ್ಪ ಶಿವಲಿಂಗದ ಮೇಲೆಯೇ ಹತ್ತಿ ಪೂಜೆ ಸಲ್ಲಿಸಿ ಎಲ್ಲರೂ ವಿಸ್ಮಯವಾಗುವಂಥ ಭಕ್ತಿಯ ಪ್ರದರ್ಶನ ಮಾಡಿ ಹೆಸರುವಾಸಿಯಾದವ. ಆದರೆ ಶಿವಪೀಠದ ಮೇಲೇರಿ ನಿತ್ಯವೂ ಪೂಜೆ ಸಲ್ಲಿಸಿ ಜಗತ್ತಿನ ಗಮನ ಸೆಳೆದವರು ಹಂಪಿಯ ಬಡವಿಲಿಂಗ ದೇವಸ್ಥಾನದ ಅರ್ಚಕ ಕೃಷ್ಣ ಭಟ್‌. ಶಿವನ ದೇವಸ್ಥಾನಕ್ಕೆ ಹೋಗುವವರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ, ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಅರ್ಚಕ ಕೃಷ್ಣ ಭಟ್‌ ತಮ್ಮ 87ನೇ ವಯಸ್ಸಿನಲ್ಲಿ ಇಂದು ಶಿವನ ಪಾದ ಸೇರಿದ್ದಾರೆ.

ವಯೋಸಹಜ ಕಾಯಿಯಿಲೆಯಿಂದ ಅವರು ಬಳಲುತ್ತಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಾಸರವಳ್ಳಿಯ ಕೃಷ್ಣ ಭಟ್‌ ಅವರು 1979ರಲ್ಲಿ ಹಂಪಿಗೆ ಬಂದು ನೆಲೆಸಿದ್ದವರು. ಅಂದಿನಿಂದ ಬಡವಿ ಲಿಂಗಕ್ಕೆ ಪೂಜೆ ಮಾಡುತ್ತಿದ್ದರು. ಕಳೆದ ವರ್ಷ ಅನಾರೋಗ್ಯದಿಂದ ಪೂಜೆ ನಿಲ್ಲಿಸಿದ್ದರು. ಅವರ ಮಗ ಸದ್ಯ ಈ ಲಿಂಗದ ಪೂಜೆ ಮಾಡುತ್ತಿದ್ದಾರೆ.

ಹಂಪಿಯ ಬಡವಿಲಿಂಗದ ಭಕ್ತರ ಕಣ್ಣಿಗಷ್ಟೇ ಕಾಣಿಸುತ್ತಿದ್ದ ಕೃಷ್ಣ ಭಟ್‌ ಅವರು ಸಾಮಾಜಿಕ ಜಾಲತಾಣದಿಂದ ಬೆಳಕಿಗೆ ಬಂದವರು. ಇವರ ಪ್ರಭಾವ ಎಷ್ಟಿತ್ತು ಎಂದರೆ ಹಂಪಿಗೆ ಇವರನ್ನು ನೋಡಲು ಹೋಗುವವರ ಸಂಖ್ಯೆಯೇ ಅಧಿಕವಾಗಿತ್ತು. ಸರಳ ಜೀವನದ ಒಂದು ಉದಾಹರಣೆಯಂತಿದ್ದ ಭಟ್ಟರು ಅವಕಾಶ ಸಿಕ್ಕಾಗ ಕುತೂಹಲಿಗರೊಂದಿಗೆ ಮಾತಿಗೂ ಸಿಗುತ್ತಿದ್ದರು. ಹಾಗಾಗಿ ಜಾಲತಾಣದ ಹೀರೋ ಆಗಿದ್ದವರಿವರು. ಅವರ ಜತೆ ಸೆಲ್ಫಿ ತೆಗೆಸಿಕೊಂಡು ಅವರ ಬಗ್ಗೆ ಬರೆದವರಿಗಂತೂ ಲೆಕ್ಕವೇ ಇಲ್ಲ.

ಅಂದಹಾಗೆ ಈ ಶಿವಲಿಂಗ ಸಾಮಾನ್ಯವಾದುದಲ್ಲ. ನೀರಿನೊಳಗೆ ಇರುವ ಈ ಶಿವಲಿಂಗ ಏಕಶಿಲಾ ಮೂರ್ತಿಯಾಗಿದೆ. ಸುಮಾರು ಮೂರು ಮೀಟರ್ ಎತ್ತರದ ಇದನ್ನು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕೆತ್ತಲಾಗಿದೆ. ಇದನ್ನು ಕಪ್ಪು ಕಲ್ಲಿನಿಂದ ಕೆತ್ತಲಾಗಿದ್ದು, 3 ಮೀಟರ್ ಎತ್ತರವಿದೆ. ಶಿವಲಿಂಗವು ಮೂರು ಕಣ್ಣಿನ ಗುರುತುಗಳನ್ನು ಹೊಂದಿದೆ. ಮೂರು ಕಣ್ಣುಗಳು ಶಿವನ ಮೂರು ಕಣ್ಣುಗಳನ್ನು ಪ್ರತಿನಿಧಿಸುತ್ತದೆ.

ಈ ದೇವಾಲಯಕ್ಕೆ ಸೂರಿಲ್ಲ. ಸೂರ್ಯನ ಬೆಳಕು ನೇರವಾಗಿ ಶಿವಲಿಂಗದ ಮೇಲೆ ಬೀಳುತ್ತದೆ. ಮಳೆಗಾಲದಲ್ಲಿ ಮಳೆ ನೀರು ಒಳಕ್ಕೆ ಸುರಿಯುತ್ತದೆ.

ನೀರಿನೊಳಕ್ಕೆ ಇಳಿದು ಇಷ್ಟು ವಿಶಾಲವಾಗಿರುವ ಶಿವಲಿಂಗಕ್ಕೆ ಕೃಷ್ಣ ಭಟ್‌ ಅವರು ಪೂಜೆ ಸಲ್ಲಿಸಲು ಶಿವನ ಪಾಣಿಪೀಠವನ್ನು ಏರಲೇಬೇಕಿತ್ತು. ಆದ್ದರಿಂದ ಪಾಣಿಪೀಠ ಏರಿ ಶಿವನ ಪೂಜೆ ಸಲ್ಲಿಸುತ್ತಿದ್ದ ಏಕೈಕ ವ್ಯಕ್ತಿ ಎಂದು ಇವರು ಹೆಸರುವಾಸಿಯಾಗಿದ್ದಾರೆ.

ಬಡವಿಲಿಂಗ ಎಂಬ ಹೆಸರು ಬಂದ ಹಿಂದೆಯೂ ಕಥೆಯಿದೆ. ಅದೇನೆಂದರೆ ಈ ಶಬ್ದ ಎರಡು ಪದಗಳ ಸಂಯೋಜನೆಯಿಂದ ಬಂದಿದೆ. ಬಡ ಹಾಗೂ ಲಿಂಗ ಶಿವವನ್ನು ಪ್ರತಿನಿಧಿಸುತ್ತದೆ. ದೇವಸ್ಥಾನದೊಳಗೆ ಶಿವಲಿಂಗವನ್ನು ಬಡತನದಿಂದ ಬೆಳೆದ ರೈತ ಮಹಿಳೆ ಇರಿಸಿದ್ದು ಎಂಬ ಐತಿಹ್ಯವಿದ್ದು, ಆದ್ದರಿಂದ ಇದನ್ನು ಬಡವಿಲಿಂಗ ದೇವಸ್ಥಾನ ಎಂದು ಕರೆಯಲಾಗುತ್ತಿದೆ ಎನ್ನುತ್ತಾರೆ ಬಲ್ಲವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net