100ಕ್ಕೆ 89 ಅಂಕ ಗಳಿಸಿದ 104 ವರ್ಷದ ಅಜ್ಜಿ: ಸಾಕ್ಷರತಾ ಪರೀಕ್ಷೆಯಲ್ಲಿನ ಸಾಧನೆಗೆ ಶ್ಲಾಘನೆಗಳ ಮಹಾಪೂರ

kuttiyamma
Published on

ಕೊಟ್ಟಾಯಂ (ಕೇರಳ): ಕಲಿಕೆಗೆ ವಯಸ್ಸಿನ ಹಂಗಿಲ್ಲ. ಯಾವ ವಯಸ್ಸಿನಲ್ಲಿ ಏನು ಬೇಕಾದರೂ ಸಾಧಿಸಬಹುದು ಎನ್ನುವ ಮಾತನ್ನು ಇದಾಗಲೇ ಕೇರಳದ ಹಲವಾರು ವೃದ್ಧರು ಸಾಬೀತು ಮಾಡಿದ್ದಾರೆ. ಸಾಕ್ಷರತೆ ವಿಚಾರದಲ್ಲಿ ನಂಬರ್‌ 1 ಸ್ಥಾನದಲ್ಲಿರುವ ಕೇರಳದಲ್ಲಿ ಸಾಕ್ಷತರಾ ಪರೀಕ್ಷೆ ಪ್ರತಿವರ್ಷವೂ ನಡೆಯುತ್ತದೆ. ಇದರಲ್ಲಿ ವೃದ್ಧರು ಮಾಡುತ್ತಿರುವ ಸಾಧನೆ ಮೆಚ್ಚುವಂಥದ್ದೇ.

ಆದರೆ ಇದೀಗ 104 ವರ್ಷದ ವೃದ್ಧೆಯೊಬ್ಬರು ಈ ಪರೀಕ್ಷೆಯಲ್ಲಿ 100ಕ್ಕೆ 89 ಅಂಕ ಪಡೆದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಕೊಟ್ಟಾಯಂ ಜಿಲ್ಲೆಯ ಆಯರಕುನ್ನಂ ಪಂಚಾಯಿತಿಯು ಈ ಪರೀಕ್ಷೆ ನಡೆಸಿತ್ತು. ಕೇರಳ ರಾಜ್ಯ ಸಾಕ್ಷರತಾ ಮಿಷನ್​ ಅಡಿಯಲ್ಲಿ ಈ ಪರೀಕ್ಷೆ ನಡೆಸಲಾಗುತ್ತದೆ. ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರವು ಕೇರಳ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸ್ವಾಯುತ್ತ ಸಂಸ್ಥೆಯಾಗಿದ್ದು, ಸಾಕ್ಷರತಾ ಪ್ರಮಾಣ ಹೆಚ್ಚಳಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಈ ಪರೀಕ್ಷೆಯಲ್ಲಿ ಕುಟ್ಟಿಯಮ್ಮ ಎನ್ನುವ ವೃದ್ಧೆ ಇಂಥದ್ದೊಂದು ಸಾಧನೆ ಮಾಡಿದ್ದಾರೆ. ಮನೆಯಿಂದಲೇ ಸಾಕ್ಷರತಾ ಪರೀಕ್ಷೆಯಲ್ಲಿ ಅವರು ಭಾಗವಹಿಸಿದ್ದರು. ಈ ಪರೀಕ್ಷೆಯು ಸಾಮಾನ್ಯವಾಗಿ ನಾಲ್ಕನೇ ತರಗತಿಯ ಗುಣಮಟ್ಟವನ್ನು ಹೊಂದಿರುತ್ತದೆ. ಅದರಂತೆ ಪರೀಕ್ಷೆ ಬರೆದಿದ್ದಾರೆ ಕುಟ್ಟಿಯಮ್ಮ. ಶಿಕ್ಷಕಿಯಾಗಿರುವ ರೆಹ್ನಾ ನನಗೆ ಮಲಯಾಳಂನಲ್ಲಿ ಅಕ್ಷರಗಳನ್ನು ಬರೆಯಲಿ ಹೇಳಿಕೊಟ್ಟರು. ಕೆಲ ವರ್ಷಗಳ ಹಿಂದೆ ಪತಿ ತೀರಿಕೊಂಡ ಮೇಲೆ ಒಂಟಿಯಾಗಿದ್ದ ನನಗೆ ಅಕ್ಷರ ಕಲಿಯುವ ಹಂಬಲವಾಗಿ ನಾನು ಓದುವುದನ್ನು ಬರೆಯುವುದನ್ನು ಕಲಿತಿದ್ದೇನೆ ಎಂದು ಸಂತೋಷದಿಂದ ಹೇಳುತ್ತಾರೆ ಕುಟ್ಟಿಯಮ್ಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net