

ಶ್ರೀನಗರ: ಕಾಶ್ಮೀರದ ಯುವಕರನ್ನು ಭಯೋತ್ಪಾದನಾ ಚಟುವಟಿಕೆಗೆ ಪಾಕಿಸ್ತಾನದಲ್ಲಿ ಬಳಕೆ ಮಾಡಲಾಗುತ್ತಿದೆ, ವಿವಿಧ ರೀತಿಯ ಆಮಿಷ ಒಡ್ಡಿ ಅವರನ್ನು ಉಗ್ರ ಸಂಘಟನೆಗಳಿಗೆ ಸೇರಿಸಿಕೊಳ್ಳಲಾಗುತ್ತಿದೆ ಎಂದು ಸುದ್ದಿಯಾಗುತ್ತಿರುವ ಬೆನ್ನಲ್ಲೇ ಇದೀಗ ಭಾರತೀಯ ಭದ್ರತಾಸಂಸ್ಥೆಗಳು ದೇಶದ ಭದ್ರತೆಗೆ ಆತಂಕ ಒಡ್ಡಿರುವ ಸಂಗತಿಯೊಂದನ್ನು ಬಹಿರಂಗಪಡಿಸಿವೆ.
ಕಾಶ್ಮೀರದಿಂದ ಯುವಕರು ಕಣ್ಮರೆಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲಿಯೂ ಕಳೆದ ಮೂರು ವರ್ಷಗಳಲ್ಲಿ ಇದು ಆತಂಕವನ್ನು ಹೆಚ್ಚು ಮಾಡಿದೆ. ಇದಾಗಲೇ ನೂರಕ್ಕೂ ಹೆಚ್ಚು ಯುವಕರು ಕಾಶ್ಮೀರದಿಂದ ಕಣ್ಮರೆಯಾಗಿದ್ದಾರೆ. ಕೆಲವು ಯುವಕರು ವಾಪಸ್ ಬಂದರೂ ಅವರು ಪುನಃ ನಾಪತ್ತೆಯಾಗಿದ್ದಾರೆ. ಇದು ಅತ್ಯಂತ ಆತಂಕವನ್ನು ಸೃಷ್ಟಿ ಮಾಡಿದೆ ಎಂದು ಭದ್ರತಾಸಂಸ್ಥೆಗಳು ಹೇಳಿವೆ.
ಅಲ್ಪಾವಧಿ ವೀಸಾ ಬಳಸಿಕೊಂಡು ಪಾಕಿಸ್ತಾನಕ್ಕೆ ತೆರಳಿದ್ದ ಕಾಶ್ಮೀರದ ಹಲವು ಯುವಕರು, ಭಯೋತ್ಪಾದಕ ಜಾಲವನ್ನು ಸೇರಿರುವ ಸಾಧ್ಯತೆ ಇದೆ ಎಂದು ಎಂದು ಭದ್ರತಾ ಪಡೆ ಸಂದೇಹ ವ್ಯಕ್ತಪಡಿಸಿದೆ.
ಈ ಕುರಿತು ನಡೆಸಿರುವ ತನಿಖೆಯಿಂದ ಕೆಲವು ಅಂಶಗಳು ಬೆಳಕಿಗೆ ಬಂದಿದ್ದು, ಅವು ಬಹಳ ಆಘಾತಕಾರಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಯುವಕರು ಗಡಿಯುದ್ದಕ್ಕೂ ಕಾರ್ಯನಿರ್ವಹಿಸುವ ಭಯೋತ್ಪಾದಕ ಗುಂಪುಗಳಿಗೆ ಗೋಪ್ಯವಾಗಿ ಸಹಾಯ ಮಾಡುತ್ತಿರುವ ಕುರಿತು ಸೂಚನೆ ಸಿಕ್ಕಿದೆ. ಇವರೆಲ್ಲರೂ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳ ಸ್ಲಿಪರ್‌ಸೆಲ್ ರೀತಿ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆಯಿದೆ ಎಂಬ ಶಂಕೆ ಮೂಡಿರುವುದಾಗಿ ಅವರು ಹೇಳಿದ್ದಾರೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ಉತ್ತರ ಕಾಶ್ಮೀರದ ಗಡಿ ಪ್ರದೇಶದ ಹಂದ್ವಾರ ಅರಣ್ಯ ಪ್ರದೇಶದಲ್ಲಿ ಐವರು ಭಯೋತ್ಪಾದಕರು ಸೇನಾ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದರು. ಅದರಲ್ಲಿ ಒಬ್ಬಾತ ಸ್ಥಳೀಯ ನಿವಾಸಿಯಾಗಿರುವುದು ಬೆಳಕಿಗೆ ಬಂದಿದೆ. ಈತ 2018ರಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದ. ನಂತರ, ಆತ ಮರಳಿ ಬಂದಿರಲಿಲ್ಲ. ಏಳು ದಿನಗಳಿಗಿಂತ ಹೆಚ್ಚು ಅವಧಿಯವರೆಗೆ ಅಧಿಕೃತ ವೀಸಾ ಬಳಸಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ ಕಾಶ್ಮೀರಿ ಯುವಕರ ಮಾಹಿತಿಯನ್ನು ಭದ್ರತಾ ಏಜೆನ್ಸಿ, ದೆಹಲಿ ವಿಮಾನ ನಿಲ್ದಾಣ ಮತ್ತು ವಾಘಾ ಗಡಿಯ ವಲಸೆ ಅಧಿಕಾರಿಗಳು ಜಂಟಿಯಾಗಿ ಸಂಗ್ರಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಏ.1ರಿಂದ 6ರವರೆಗೆ ಭಾರತ ಪ್ರವೇಶಿಸಲು ಯತ್ನಿಸಿದ ಉಗ್ರರ ಗುಂಪುಗಳಲ್ಲಿ; ದಕ್ಷಿಣ ಕಾಶ್ಮೀರದ ಶಾಪಿಯಾನ್, ಕುಲ್ಗಾಮ್, ಅನಂತ್‌ನಾಗ್ ಜಿಲ್ಲೆಯವರೂ ಸೇರಿದ್ದಾರೆ. ಪಾಕ್ ವೀಸಾ ಪಡೆದು ತೆರಳಿದವರು ಮರಳಲಿಲ್ಲ. ಇದರಿಂದ ಭದ್ರತಾಪಡೆಗಳು ಹೀಗೆ ಪಾಕಿಸ್ತಾನಕ್ಕೆ ತೆರಳಿದವರ ಹಿನ್ನೆಲೆ, ಕುಟುಂಬವನ್ನು ವಿಚಾರಿಸುತ್ತಿದ್ದಾರೆ. ಇದರಿಂದ ಕೆಲವರಿಗೆ ತೊಂದರೆಯಾದರೂ, ಅಪಾಯವನ್ನು ಗರಿಷ್ಠಪ್ರಮಾಣದಲ್ಲಿ ತಗ್ಗಿಸಬಹುದೆಂಬ ಉದ್ದೇಶವಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.