ಅಮ್ಮಾ ಸಾಯಿಸ್ಬೇಡ... ಬಿಟ್ಬಿಡು.. ಎಂದ್ರೂ ಕೇಳಲಿಲ್ಲ; ಮಕ್ಕಳಿಗೂ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ!

kalburgi
Published on

ಕಲಬುರಗಿ: ಗಂಡನ ಮನೆಯ ಕಿರುಕುಳ ತಾಳದೇ, ಕಿರುಕುಳದಿಂದ ಬೇಸತ್ತು ತವರಿಗೆ ಹೋಗೋಣವೆಂದರೆ ಅದಕ್ಕೂ ಅವಕಾಶ ಸಿಗದೇ ನೊಂದ ಮಹಿಳೆಯೊಬ್ಬಳು ತಾನೂ ಬೆಂಕಿಹಚ್ಚಿಕೊಂಡು, ಮಕ್ಕಳಿಗೂ ಬೆಂಕಿಹಚ್ಚಿ ಕೊಂದ ಹೃದಯವಿದ್ರಾವಕ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಪಂಚಶೀಲ ನಗರದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ದೀಕ್ಷಾ ವಸಂತ ಶರ್ಮಾ (26) ಹಾಗೂ ಆಕೆಯ ಮಗಳು ಸಿಂಚನಾ (2) ಮೃತಪಟ್ಟಿದ್ದು, ಮೂರು ವರ್ಷದ ಮಗ ಧನಂಜಯ್​ ಸುಟ್ಟ ಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಕಲಬುರಗಿಯ ಕಾಳಗಿ ತಾಲೂಕಿನ ದೀಕ್ಷಾ ಅವರ ಮದುವೆ ಐದು ವರ್ಷಗಳ ಹಿಂದೆ ವಸಂತ ಶರ್ಮಾ ಜತೆ ನಡೆದಿತ್ತು. ಇಬ್ಬರು ಮಕ್ಕಳಾದರೂ ಗಂಡನ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ಮುಂದುವರೆಸಿದ್ದರು. ಇದರಿಂದ ಬೇಸತ್ತ ದೀಕ್ಷಾ ತವರು ಮನೆಗೆ ಹೋಗುವ ನಿರ್ಧಾರ ಮಾಡಿದ್ದರು. ಆದರೆ ಅವರಿಗೆ ಅದಕ್ಕೂ ಅವಕಾಶ ನೀಡಲಿಲ್ಲ ಎನ್ನಲಾಗಿದೆ.

ಸೋಮವಾರ (ಅ.25) ಏನಾದರೂ ಆಗಲಿ ಎಂದುಕೊಂಡು ತವರಿಗೆ ಹೋಗಲು ರೆಡಿಯಾಗಿದ್ದರು ದೀಕ್ಷಾ. ಆದರೆ ಗಂಡ ಮತ್ತು ಅತ್ತೆ ಆಕೆಗೆ ಹಿಂಸೆ ನೀಡಿದರು ಎನ್ನಲಾಗಿದೆ. ಇದರಿಂದ ಬೇಸತ್ತ ಅವರು, ತಮ್ಮ ಇಬ್ಬರು ಮಕ್ಕಳಿಗೆ ಮೊದಲು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಇದರಿಂದ ಆಘಾತಗೊಂಡ ಮಕ್ಕಳು ಸಾಯಿಸಬೇಡ ಎಂದು ಅಳುತ್ತಾ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಪಟ್ಟು ಬಿಡದ ದೀಕ್ಷಾ, ಆಟಿಕೆ ವಸ್ತುಗಳಿಗೆ ಕಟ್ಟಿ ಹಾಕಿ ಬೆಂಕಿ ಹಚ್ಚಿ ಕೊನೆಗೆ ತಾನೂ ಬೆಂಕಿ ಹಚ್ಚಿಕೊಂಡಿದ್ದಾರೆ. 2 ವರ್ಷದ ಕಂದ ಸಿಂಚನಾ ಹಾಗೂ ದೀಕ್ಷಾ ಮೃತಪಟ್ಟರೆ, ಮಗ ಬದುಕಿಕೊಂಡಿದ್ದಾನೆ.

ಗಂಡನ ಮನೆಯವರೇ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ದೀಕ್ಷಾ ಕುಟುಂಬದವರು ಆರೋಪಿಸಿದ್ದಾರೆ‌. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ಮಾಡಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net