

ಲಖನೌ: ಇಡೀ ದೇಶವೇ ಇಂದು ಲಖನೌ ಸಿಬಿಐ ವಿಶೇಷ ಕೋರ್ಟ್ನತ್ತ ಗಮನ ನೆಟ್ಟಿತ್ತು. ಎಲ್ಲರ ಕಣ್ಣು, 28 ವರ್ಷಗಳಷ್ಟು ಹಳೆಯ ಬಾಬರಿ ಮಸೀದಿಯ ತೀರ್ಪು ನೀಡುವ ನ್ಯಾಯಾಧೀಶ ಎಸ್.ಕೆ. ಯಾದವ್ ಅವರ ಮೇಲಿತ್ತು.
ಈ ಪ್ರಕರಣದ ಎಲ್ಲಾ 32 ಆರೋಪಿಗಳನ್ನೂ ಖುಲಾಸೆ ಮಾಡಿ ಆದೇಶ ಹೊರಡಿಸಿರುವ ಈ ನ್ಯಾಯಾಧೀಶರ ಕುರಿತಾದ ಒಂದು ಕುತೂಹಲದ ಮಾಹಿತಿ ಇದೆ.
ಅದೇನೆಂದರೆ ನ್ಯಾಯಾಧೀಶ ಯಾದವ್ ಅವರ ಕೊನೆಯ ಅಧಿಕಾರದ ದಿನವಿದು. ಲಖನೌ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಕೊನೆಯ ದಿನದಿಂದು ಐತಿಹಾಸಿಕ ತೀರ್ಪು ಪ್ರಕಟಿಸಿರುವ ಇವರು ಇಂದು ನಿವೃತ್ತರಾಗಲಿದ್ದಾರೆ.
ವಿಶೇಷ ಎಂದರೆ, ಎಸ್.ಕೆ.ಯಾದವ್ ಅವರ ನಿವೃತ್ತಿ ಕಳೆದ ವರ್ಷವೇ ಅಂದರೆ 2019ರಲ್ಲಿಯೇ ಆಗಿದೆ. 28 ವರ್ಷಗಳಿಂದ ಹಲವಾರು ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆ ನಡೆಸಿದ್ದಾರೆ. 2017ರಲ್ಲಿ ಎಸ್.ಕೆ.ಯಾದವ್ ಅವರು ವಿಚಾರಣೆ ಕೈಗೆತ್ತಿಕೊಂಡಿದ್ದರು.
ಇನ್ನೇನು ವಾದ-ಪ್ರತಿವಾದ ಮುಗಿದು ಅಂತಿಮ ಹಂತ ತಲುಪಿತ್ತು. ಈ ವೇಳೆಗಾಗಲೇ ಯಾದವ್ ಅವರು ನಿವೃತ್ತರಾದರು. ಆದರೆ ಈ ವಿವಾದ ಬಹು ಚರ್ಚಿತವಾಗಿಯೂ, ಬಹಳ ವಿವಾದಾತ್ಮಕವಾಗಿಯೂ ಹಾಗೂ ತೀರಾ ಹಳೆಯದಾಗಿರುವ ಇರುವ ಹಿನ್ನೆಲೆಯಲ್ಲಿ ಮತ್ತೊಬ್ಬ ನ್ಯಾಯಾಧೀಶರು ಇದನ್ನು ಕೈಗೆತ್ತಿಕೊಂಡರೆ ಅವರು ಪುನಃ ಆರಂಭದಿಂದ ವಿಚಾರಣೆ ಶುರು ಮಾಡಬೇಕಾಗಿತ್ತು. ಹೀಗಾದಲ್ಲಿ ಪ್ರಕರಣದ ವಿಚಾರಣೆ ಇನ್ನಷ್ಟು ವರ್ಷ ವಿಳಂಬವಾಗುವ ಸಾಧ್ಯತೆ ಇತ್ತು.
ಹೈಪ್ರೊಫೈಲ್ ಪ್ರಕರಣವಾಗಿರುವ ಇದನ್ನು ಮುಗಿಸಲು ಸುಪ್ರೀಂಕೋರ್ಟ್ ಒಂದು ವರ್ಷ ಹೆಚ್ಚುವರಿ ಅವಧಿಯನ್ನು ನ್ಯಾಯಾಧೀಶ ಯಾದವ್ ಅವರಿಗೆ ನೀಡುವ ಮೂಲಕ ಅವರ ಅಧಿಕಾರಾವಧಿಯನ್ನು ಎರಡು ಬಾರಿ ವಿಸ್ತರಣೆ ಮಾಡಿತು. ಆರು ತಿಂಗಳಿಗೊಮ್ಮೆಯಂತೆ ಎರಡು ಬಾರಿ ಇವರ ಅಧಿಕಾರದ ಅವಧಿಯನ್ನು ಮುಂದಕ್ಕೆ ಹಾಕಲಾಯಿತು.
ದಿನನಿತ್ಯದ ಆಧಾರದ ಮೇಲೆ ಪ್ರಕರಣದ ವಿಚಾರಣೆ ನಡೆಸುವ ಮೂಲಕ ವರ್ಷದೊಳಗೆ ಕಡ್ಡಾಯವಾಗಿ ಈ ಪ್ರಕರಣದ ಅಂತಿಮ ತೀರ್ಪು ನೀಡುವಂತೆ ಸುಪ್ರೀಂಕೋರ್ಟ್ ಯಾದವ್ ಅವರಿಗೆ ನಿರ್ದೇಶಿಸಿತ್ತು.
ಈ ನಿರ್ದೇಶನದ ಹಿನ್ನೆಲೆಯಲ್ಲಿ ಪ್ರತಿದಿನವೂ ವರ್ಷಪೂರ್ತಿ ವಿಚಾರಣೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಇಂದು ತೀರ್ಪು ಪ್ರಕಟಿಸಿದ್ದಾರೆ.