‘ಕಾಡಿನಲ್ಲೂ ಡಾ.ರಾಜ್‌ಗೆ ಪುನೀತ್‌ದ್ದೇ ಚಿಂತೆಯಾಗಿತ್ತು, ನಾನ್‌ ಸತ್ರೂ ಪರವಾಗಿಲ್ಲ, ಅವ್ನು ನಟ ಆಗ್ಬೇಕು ಅಂತ ಹೇಳ್ಕೊಂಡಿದ್ರು’

Nakeeran
Published on

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಅವರ ಮನೆಗೆ ಹಲವು ಗಣ್ಯರು ಭೇಟಿಕೊಟ್ಟು ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ. ಈ ನಡುವೆಯೇ ಹಿರಿಯ ಪತ್ರಕರ್ತ ನಕ್ಕೀರನ್ ಗೋಪಾಲ್ ಅವರು ಮನೆಗೆ ಭೇಟಿ ಕೊಟ್ಟಿದ್ದು, ವೀರಪ್ಪನ್‌ ಅಪಹರಣ ಮಾಡಿದ ಸಮಯದಲ್ಲಿ ಡಾ.ರಾಜ್‌ಕುಮಾರ್‌ ಅವರ ಜತೆ ತಾವು ನಡೆಸಿರುವ ಸಂವಾದದ ಕುತೂಹಲ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ, ಡಾ.ರಾಜ್‌ ಅವರಿಗೆ ಪುನೀತ್‌ ಬಗ್ಗೆ ಅದೆಷ್ಟು ಕಾಳಜಿ ಇತ್ತು ಎಂಬುದನ್ನು ಬಣ್ಣಿಸಿದ್ದಾರೆ.

‘‍ಪುನೀತ್‌ ಅವರು ನಿಧನರಾದರು ಎಂದು ಸುದ್ದಿ ಕೇಳಿ ಆಘಾತವಾಯ್ತು. ನಾನು ಇದನ್ನು ನಂಬಲೇ ಇಲ್ಲ. ಈಗ ಎಲ್ಲವೂ ಆಗಿಹೋಗಿದೆ. ಆದರೆ ಚಿಕ್ಕ ವಯಸ್ಸಿನಲ್ಲಿಯೇ ಒಬ್ಬ ಮಹಾನ್‌ ವ್ಯಕ್ತಿ ಏನೆಲ್ಲಾ ಸಾಧನೆ ಮಾಡಬಹುದು ಎಂದು ಅಪ್ಪು ತೋರಿಸಿಹೋಗಿದ್ದಾರೆ’ ಎಂದರು.

ಅದೇ ವೇಳೆ ಡಾ.ರಾಜ್‌ಕುಮಾರ್‌ ಅವರೊಂದಿಗೆ ಕಾಡಿನಲ್ಲಿ ತಾವು ಕಳೆದಿರುವ ದಿನಗಳನ್ನು ನೆನಪಿಸಿಕೊಂಡ ನಕ್ಕೀರನ್‌, ‘ ಆ ಸಮಯದಲ್ಲಿ ನಾನೂ ಕಾಡಿಗೆ ಹೋಗಿದ್ದೆ. ರಾಜ್‌ ಕುಮಾರ್ ಅವರನ್ನು ಭೇಟಿಯಾಗಲು ಅವಕಾಶವೂ ಸಿಕ್ಕಿತ್ತು. ಹೀಗೆ ಅನೇಕ ವಿಷಯ ಮಾತನಾಡುತ್ತಿರುವಾಗ ಅವರಿಗೆ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಅಪಾರ ಚಿಂತೆ ಇದ್ದುದು ಕಂಡುಬಂತು’ ಎಂದು ಆ ದಿನಗಳನ್ನು ನೆನಪಿಸಿಕೊಂಡರು.

‘ಅಪ್ಪು ಯಾಕೋ ಬಿಜಿನೆಸ್‌ ಬಿಜಿನೆಸ್ ಅಂತಾನೆ. ನಟನಾಗುವ ಅಷ್ಟು ಉತ್ಸುಕತೆ ಇದ್ದಂಗಿಲ್ಲ. ನಾನು ಸತ್ರೂ ಪರವಾಗಿಲ್ಲ, ಅವನು ನಟನಾದ್ರೆ ಸಾಕು, ಅದೇ ನನ್ನ ದೊಡ್ಡ ಆಸೆ’ ಎಂದು ನನ್ನ ಬಳಿ ಹೇಳಿಕೊಂಡಿದ್ದರು. ಅವರ ಆಸೆಯನ್ನು ಪುನೀತ್‌ ತೀರಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಕೆಲವರೇ ಮಾಡುವ ಸಾಧನೆಯ ಉತ್ತುಂಗಕ್ಕೆ ಏರಿದ್ದಾರೆ ಅಪ್ಪು. ಅವರು ಚಿರಸ್ಮರಣೀಯರು ಎಂದು ನಕ್ಕೀರನ್‌ ಹೇಳಿದರು.

2000ರ ಜುಳು ತಿಂಗಳಿನಲ್ಲಿ ವೀರಪ್ಪನ್‌ ರಾಜ್‌ಕುಮಾರ್‌ ಅವರನ್ನು ಅಪಹರಣ ಮಾಡಿಕೊಂಡು ಹೋದ ಸಂದರ್ಭದಲ್ಲಿ ಅವರನ್ನು ಕಾಡಿನಿಂದ ಬಿಡಿಸಿಕೊಂಡು ಬರಲು ಮುಂದಾಗಿದ್ದ ಸಂಧಾನಕಾರರಲ್ಲಿ ಮಕ್ಕೀರನ್‌ ಗೋಪಾಲ್ ಪ್ರಮುಖರು. ಇವರು ತಮಿಳುನಾಡಿನ ವಾರಪತ್ರಿಕೆಯೊಂದರ ಸಂಪಾದಕರಾಗಿದ್ದಾರೆ. 108 ದಿನಗಳ ಬಳಿಕ ಡಾ.ರಾಜ್‌ಕುಮಾರ್‌ ವಾಪಸಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net