

ಮಾಸ್ಕೊ: ಅಮೆರಿಕದ ಅಧ್ಯಕ್ಷ ಜೋ ಬೈಡೆನ್, ಅವರ ಪತ್ನಿ ಜಿಲ್ ಬೈಡೆನ್ ಹಾಗೂ ಮಗಳು ಆಶ್ಲೇ ಬ್ಲೇಜರ್ ಬೈಡೆನ್ ಸೇರಿದಂತೆ 23 ಅಮೆರಿಕನ್ನರಿಗೆ ರಷ್ಯಾ ತನ್ನ ದೇಶಕ್ಕೆ ಬರದಂತೆ ನಿಷೇಧ ಹೇರಿದೆ.
"ರಷ್ಯಾದ ರಾಜಕೀಯ ಮತ್ತು ಸಾರ್ವಜನಿಕ ಕ್ಷೇತ್ರಗಳಲ್ಲಿ ಇರುವವರ ವಿರುದ್ಧ ಅಮೆರಿಕ ನಿರಂತರವಾಗಿ ನಿರ್ಬಂಧಗಳನ್ನು ವಿಧಿಸುತ್ತಲೇ ಬಂದಿದೆ. ಯಾರ್ಯಾರು ತಮ್ಮ ದೇಶಕ್ಕೆ ಬರಬಾರದು ಎಂದು ನಿರ್ಧರಿಸಲಾಗುತ್ತದೆಯೋ ಅಂಥವರನ್ನು 'ಸ್ಟಾಪ್ ಲಿಸ್ಟ್'ಗೆ ರಷ್ಯಾ ಸೇರಿಸುತ್ತಿದೆ. ಇದೀಗ ಅಮೆರಿಕದ 25 ಮಂದಿಯನ್ನು ಸೇರ್ಪಡೆ ಮಾಡಲಾಗಿದ್ದು, ಅದರಲ್ಲಿ ಜೋ ಬೈಡೆನ್ ಹಾಗೂ ಅವರ ಕುಟುಂಬಸ್ಥರು ಇದ್ದಾರೆ ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ.
ರಾಜಕಾರಣಿಗಳಲ್ಲದೆ, ಅನೇಕ ವಿಶ್ವವಿದ್ಯಾಲಯಗಳ ಪ್ರೊಫೆಸರ್‌ಗಳು ಮತ್ತು ಸಂಶೋಧಕರು ಹಾಗೂ ಅಮೆರಿಕದ ಮಾಜಿ ಸರ್ಕಾರಿ ಅಧಿಕಾರಿಗಳು ಈ ಪಟ್ಟಿಯಲ್ಲಿದ್ದಾರೆ. ಮೈನೆನ ಸುಸಾನ್ ಕಾಲಿನ್ಸ್, ಕೆಂಟುಕಿಯ ಮಿಚ್ ಮೆಕ್‌ಕಾನ್ನೆಲ್, ಅಯೋವಾದ ಚಾರ್ಲ್ಸ್ ಗ್ರಾಸ್ಲೆ, ನ್ಯೂಯಾರ್ಕ್ನ ಕರ್ಸ್ಟನ್ ಗಿಲ್ಲಿಬ್ರಾಂಡ್ ಸೇರಿದಂತೆ ಹಲವಾರು ಅಮೆರಿಕದ ಸೆನೆಟರ್‌ಗಳು ಈ ಪಟ್ಟಿಯಲ್ಲಿ ಸೇರಿದ್ದಾರೆ.
ಅಮೆರಿಕ ಮತ್ತು ಅಭಿವೃದ್ಧಿ ಹೊಂದಿದ ದೇಶಗಳ ಜಿ-7 ಕೂಟದ ಸದಸ್ಯ ರಾಷ್ಟ್ರಗಳು ರಷ್ಯಾದಿಂದ ಚಿನ್ನ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಲಿವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭಾನುವಾರ ಘೋಷಿಸಿದ್ದರು. ಇದರ ಬೆನ್ನಲ್ಲೇ ಇದೀಗ ರಷ್ಯಾ ಈ ನಿಷೇಧವನ್ನು ಹೇರಿದೆ.
ಯೂಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವುದಕ್ಕೆ ಪ್ರತಿಯಾಗಿ ರಷ್ಯಾ ಮೇಲೆ ಹೇರಿರುವ ನಿರ್ಬಂಧಗಳ ಭಾಗವಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಬೈಡೆನ್ ಭಾನುವಾರ ಹೇಳಿದ್ದರು. ಜಿ-7 ಕೂಟದ ಶೃಂಗ ಸಭೆಯಲ್ಲಿ ಪಾಲ್ಗೊಂಡಿರುವ ನಾಯಕರು ಈ ಬಗ್ಗೆ ಮಂಗಳವಾರ ಅಧಿಕೃತ ಪ್ರಕಟಣೆ ಹೊರಡಿಸುವ ನಿರೀಕ್ಷೆಯಿದೆ. ರಷ್ಯಾ-ಯೂಕ್ರೇನ್ ಸಮರದ ಪರಿಣಾಮವಾದ ಹಣದುಬ್ಬರ ಮುಂತಾದ ಸವಾಲುಗಳನ್ನು ಎದುರಿಸುವ ಹಾಗೂ ಇಂಧನ ಸರಬರಾಜು ಖಚಿತಪಡಿಸುವ ವಿಚಾರವಾಗಿ ಮುಖಂಡರು ಸಮಾಲೋಚನೆ ನಡೆಸಲಿದ್ದಾರೆ. ರಷ್ಯಾವನ್ನು ಶಿಕ್ಷಿಸಲು ಜಾಗತಿಕವಾಗಿ ಶಕ್ತಿಗಳನ್ನು ಕ್ರೋಡಿಕರಿಸ ಲಾಗುತ್ತಿದ್ದು ಜಿ-7 ಶೃಂಗ ಸಭೆಯೂ ಆ ನಿಟ್ಟಿನಲ್ಲಿ ಕೆಲಸ ಮಾಡಲಿದೆ.