

ಬನಾರಸ್ (ಉತ್ತರ ಪ್ರದೇಶ): ವಿವಾದಿತ ಜ್ಞಾನವಾಪಿ ಮಸೀದಿಯೊಳಗೆ ಕೋರ್ಟ್ ಆದೇಶದಂತೆ ವಿಡಿಯೋ ಚಿತ್ರೀಕರಣ ಕಾರ್ಯ ಶೇ.65ರಷ್ಟು ಮುಗಿದಿದ್ದು, ಇದರ ವರದಿಯನ್ನು ಕೋರ್ಟ್ಗೆ ಅಧಿಕಾರಿಗಳು ನಾಳೆ (ಮಂಗಳವಾರ )ಸಲ್ಲಿಸಲಿದ್ದಾರೆ.
ಸಮೀಕ್ಷೆ ಸಮಯದಲ್ಲಿ ಮಸೀದಿಯಲ್ಲಿ ಶಿವಲಿಂಗ ಹಾಗೂ ನಂದಿ ಕಂಡುಬಂದಿರುವುದಾಗಿ ವರದಿಯಾಗಿದೆ. ನಂದಿಯ ಎದುರಿನಲ್ಲಿರುವ ಬಾವಿಯಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಪರ ವಕೀಲರು ಮಾಹಿತಿ ನೀಡಿರುವುದಾಗಿ ‘ಇಂಡಿಯಾ ಟುಡೇ’ ಪತ್ರಿಕೆ ವರದಿ ಮಾಡಿದೆ.
ಮಸೀದಿಯು ಈ ಮುಂಚೆ ಮಂದಿರವಾಗಿತ್ತು ಎಂಬ ಬಗ್ಗೆ ಇದು ಇನ್ನಷ್ಟು ಪುಷ್ಟಿ ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಮೊಘಲ್ ದೊರೆ ಔರಂಗಜೇಬ್ ಕಾಶಿ ವಿಶ್ವನಾಥ ಮಂದಿರದ ಭಾಗವೊಂದನ್ನು ಕೆಡವಿ ಇದನ್ನು ನಿರ್ಮಿಸಿದ್ದ ಎಂಬ ವಾದವಿದೆ. ಇದೀಗ ಇಲ್ಲಿ ಸಿಗುತ್ತಿರುವ ಕುರುಹುಗಳು ಈ ವಾದವನ್ನು ಪುಷ್ಟೀಕರಿಸುತ್ತಿವೆ ಎನ್ನಲಾಗುತ್ತಿದೆ.
ಕೋರ್ಟ್ ಆದೇಶದ ಮೇರೆಗೆ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ. ಕೋರ್ಟ್ ಸೂಚನೆಯಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ಸರ್ವೆ ಕಾರ್ಯ ನಡೆಯುತ್ತಿದೆ. ಶೇ.65ರಷ್ಟು ಸಮೀಕ್ಷೆ ಕಾರ್ಯ ಮುಗಿದಿದ್ದು, ಮಂಗಳವಾರ ಈ ಕುರಿತು ವರದಿ ಸಲ್ಲಿಸುತ್ತಿದ್ದೇವೆ ಎಂದು ವಕೀಲರು ಹೇಳಿದ್ದಾರೆ.