

1992ರಲ್ಲಿ ಕ್ರಿಕೆಟ್ ವಿಶ್ವಕಪ್ ಎತ್ತಿಹಿಡಿದು ಪಾಕಿಸ್ತಾನದ ಕೀರ್ತಿಯನ್ನು ಮುಗಿಲು ಮುಟ್ಟಿಸಿದ ಇಮ್ರಾನ್ ಅಹ್ಮದ್ ಖಾನ್ ನಿಯಾಜಿ ಪಾಕಿಸ್ತಾನ ಮೂರು ತುಂಡುಗಳಾಗಿ ಛಿದ್ರವಾಗುತ್ತದೆ ಎಂದು 2022ರಲ್ಲಿ ಸಾರ್ವಜನಿಕವಾಗಿ ಹೇಳುತ್ತಿರುವವರೆಗಿನ ಈ ಮೂವತ್ತು ವರ್ಷಗಳಲ್ಲಿ ಸಿಂಧೂ ನದಿಯಲ್ಲಿ ಅದೆಷ್ಟು ನೀರು ಹರಿದುಹೋಗಿದೆ! ಪಾಕಿಸ್ತಾನ ಏನೇನಾಗಿಹೋಗಿದೆ! ಆ ಇನ್ಸ್ವಿಂಗರ್ ಮಾಂತ್ರಿಕ ಎಷ್ಟು ಬೆಳೆದಿದ್ದಾರೆ ಅಥವಾ ಇಳಿದಿದ್ದಾರೆ! ಈಗ ಹೇಳಬೇಕಾದ ಸಂಗತಿ ಇದು. ಹೇಗೂ ಪಾಕಿಸ್ತಾನದ ಬಗ್ಗೆ ನಾವು ಭಾರತೀಯರಿಗಿರುವ ಕುತೂಹಲ ದೂರ ಹೋದ ಸಂಗಾತಿ ಏನೇನು ಮಾಡುತ್ತಿರಬಹುದೆಂದು ವಿಚ್ಛೇದಿತರೊಬ್ಬರಲ್ಲಿರುವ ಕುತೂಹಲಕ್ಕಿಂತ ಕಡಿಮೆಯೇನಲ್ಲ ಅಲ್ಲವೇ! ಆದರೆ, ಪ್ರಶ್ನೆಯೆಂದರೆ ಈ ಪಾಕಿಸ್ತಾನ ಪರಸಂಗ ಮತ್ತು ಇಮ್ರಾನ್ ರಗಳೆಯನ್ನು ಎಲ್ಲಿಂದ ಆರಂಭಿಸಬೇಕೆನ್ನುವುದು! ಕೊನೆಗೆ ಅಳೆದೂ ಸುರಿದೂ ನಾನು ತಲುಪಿದ ತೀರ್ಮಾನ- ಇಂದಿನಿಂದಲೇ ಆರಂಭಿಸಿ ಫ್ಲಾಷ್ಬ್ಯಾಕ್ಗೆ ಹೋಗಿ ಮತ್ತೆ ಇತ್ತಲೇ ಬರೋಣ, ಹಾಗೇ ಬಂದು ಹೋಗುತ್ತಾ, ಹೋಗಿ ಬರುತ್ತಾ ಇರೋಣ ಅಂತ. ಬನ್ನಿ, ನನ್ನ ಜತೆ ನೀವೂ ಒಂದಷ್ಟು ತಿರುಗಾಡಿ. ಗಣಪತಿ ಬಾಪ್ಪನ ಹಾಗೆ ಸುಮ್ಮನೆ ಒಂದೇ ಕಡೆ ಕೂರುವುದು ಬೇಡ.
ಎಲ್ಲ ಶುರುವಾದದ್ದು ಅಥವಾ ತಾರಕಕ್ಕೇರಿದ್ದು ಇದೇ ಜನವರಿ 24ರಂದು, ಇಮ್ರಾನ್ ಖಾನ್ರನ್ನು ಪ್ರಧಾನಿ ಪಟ್ಟದಿಂದ ಕೆಳಗಿಳಿಸಲು ವಿರೋಧಪಗಳೆಲ್ಲವೂ ಒಟ್ಟುಗೂಡಿ ವ್ಯೂಹ ರಚಿಸಿ, ಆಡಳಿತ ಪದ ಹಲವಾರು ಸದಸ್ಯರನ್ನೂ ಅದರೊಳಗೆ ಎಳೆದುಕೊಳ್ಳತೊಡಗಿದಾಗ. ಪಾಕಿಸ್ತಾನದಲ್ಲಿ ಪ್ರಧಾನಿಯನ್ನು ಪಟ್ಟದಿಂದಿಳಿಸಲು ಅಷ್ಟೆಲ್ಲಾ ಕಸರತ್ತು ಬೇಕೇ ಎಂದು ನೀವು ಕೇಳಬಹುದು. ಅದೂ ಸರಿಯೇ ಬಿಡಿ. ಇಲ್ಲಿಯವರೆಗೆ ಅಲ್ಲಿ ಪ್ರಧಾನಿಯಾಗಿ ಬೀಗಿದ ಹದಿನೆಂಟು ಜನರಲ್ಲಿ ಯಾರೊಬ್ಬರೂ ಪೂರ್ಣಾವಧಿ ಪೂರೈಸಿಲ್ಲ! ಚಿಟಿಕೆ ಹೊಡೆಯುವುದರಲ್ಲಿ ಗದ್ದುಗೆಯಿಂದ ಬಿದ್ದಿದ್ದಾರೆ. ಮೀಸೆ ಮಣ್ಣಾಗಲಿಲ್ಲವೆಂದು ಮತ್ತೆ ಎದ್ದ ಬೆನಜೀರ್ ಭುಟ್ಟೊ ಮತ್ತೊಮ್ಮೆ, ನವಾಜ್ ಶರೀಫ್ ಮತ್ತೆ ಮೂರು ಸಲ ಪ್ರಧಾನಿಯಾದರೂ ಒಮ್ಮೆಯೂ ಪೂರ್ಣಾವಧಿ ಪೂರೈಸಲಾಗಲಿಲ್ಲ. ಬೆನಜೀರ್ ಭುಟ್ಟೋ ನಾಟಕೀಯವಾಗಿ ಹತ್ಯೆಗೊಳಗಾದರೆ ನವಾಜ್ ಶರೀಫ್ ನಾಟಕಿಯವಾಗಿಯೇ ನೇಣುಕುಣಿಕೆಯನ್ನು ಕೊನೇ ಗಳಿಗೆಯಲ್ಲಿ ತಪ್ಪಿಸಿಕೊಂಡರು! ಇನ್ನು, ಮೊದಲ ಪ್ರಧಾನಿ ಲಿಯಾಖತ್ ಆಲಿ ಖಾನ್ ಅಧಿಕಾರದಲ್ಲಿದ್ದಾಗಲೇ ಹತ್ಯೆಗೊಳಗಾದರೆ, ಎಚ್. ಎಸ್. ಸುಹ್ರವರ್ದಿ ಗದ್ದುಗೆಯಿಂದಿಳಿದು ದೇಶವನ್ನೇ ತೊರೆದು ಓಡಿಹೋದರೂ ಐದು ವರ್ಷಗಳ ನಂತರ ಅಯೂಬ್ ಖಾನ್ರ ಬಂಟರಿಂದ ದೂರದ ಬೈರೂತ್ನಲ್ಲಿ ಹತ್ಯೆಗೊಳಗಾದರು.
ತನ್ನ ವಿರುದ್ಧ ವಿರೋಧ ಪಗಳು ಒಟ್ಟಾದದ್ದೇ ಇಮ್ರಾನ್ ಖಾನ್ ತಿರುಗಿದ್ದು ಸೇನೆಯ ಕಡೆಗೆ. ಮೂರೂವರೆ ವರ್ಷಗಳ ಹಿಂದೆ ಚುನಾವಣೆಗಳಲ್ಲಿ ಇಮ್ರಾನ್ ಪರವಾಗಿ ಮತದಾರರಿಗೆ ಹಣ ಹಂಚಿ ಅಥವಾ ಬೆದರಿಸಿ, ಚುನಾವಣೆಗಳ ನಂತರ ಸಣ್ಣಪುಟ್ಟ ಪಗಳನ್ನು ಹಿಡಿದು ಒಟ್ಟುಗೂಡಿಸಿ ಈ ಮಾಜಿ ಕ್ರಿಕೆಟಿಗನನ್ನು ಅಧಿಕಾರಕ್ಕೆ ತಂದಿದ್ದೇ ಸೇನೆ. ಎಲ್ಲವೂ ಅಂದಿನಂತೇ ಇದ್ದಿದ್ದರೆ ಇಮ್ರಾನ್ ಸರ್ಕಾರ ಉರುಳಲು ಸೇನೆ ಬಿಡುತ್ತಲೇ ಇರಲಿಲ್ಲ. ಆದರೆ, ಕಳೆದೊಂದು ವರ್ಷದಲ್ಲಿ ಇಮ್ರಾನ್ ಬೌಲ್ ಮಾಡುತ್ತಿದ್ದ ಚೆಂಡು ತಿರುತಿರುಗಿ ದಿಕ್ಕು ಬದಲಿಸುತ್ತಿದ್ದ ಹಾಗೇ ತಾವೂ ಬದಲಾಗಿಹೋಗಿದ್ದರು. ತನ್ನ ಕಡೆ ಸೇನೆ ಇದೆ ಎನ್ನುವ ಕಾರಣಕ್ಕೇ ಮೊದಲ ಒಂದೂವರೆ-ಎರಡು ವರ್ಷಗಳಲ್ಲಿ ದೇಶದ ಒಳಗಿನ ಹಾಗೂ ಹೊರಗಿನ ಎಲ್ಲರ ಮೇಲೂ ಇಮ್ರಾನ್ ಖಾನ್ ಎಗರಾಡಿದ್ದೇ ಎಗರಾಡಿದ್ದು. ವಿರೋಧ ಪದ ನಾಯಕರನ್ನು ಅಡಿಗಡಿಗೆ ಕಿಚಾಯಿಸುವುದಲ್ಲದೆ, ತಾನು ಮಾತಾಡಿಸಿದರೂ ನರೇಂದ್ರ ಮೋದಿಯವರು ಮಾತಾಡುತ್ತಲೇ ಇಲ್ಲವೆಂದು ಆಪಾದಿಸಿ ನಮ್ಮ ಪ್ರಧಾನಿಗಳನ್ನು "ಸಣ್ಣ ಮನುಷ್ಯ' ಎಂದು ಕರೆಯುವ ಉದ್ಧಟತನ ತೋರಿದ್ದರು. ಆ ದಿನಗಳಲ್ಲಿ ಈ ಪಾಕ್ ಪ್ರಧಾನಿಯ ವರ್ತನೆ ಹೇಗಿತ್ತೆಂದರೆ ತನ್ನ ಭಾವನೇ ಪ್ರಿನ್ಸಿಪಾಲ್ ಆಗಿರುವ ಶಾಲೆಗೆ ಸೇರಿಕೊಂಡ ವಿದ್ಯಾರ್ಥಿಯೊಬ್ಬ, "ಮರ್ದ್ ಟಾಂಗೆವಾಲಾ ಹ್ಞೂಂ ಮೈ ಮರ್ದ್ ಟಾಂಗೆವಾಲಾ, ಮುಝೆ ಟೀಚರ್ ಕ್ಯಾ ಮಾರೇಗೀ ಮೈ ತೊ ಪ್ರಿನ್ಸಿಪಾಲ್ ಕಾ ಸಾಲಾ!' ಎಂದು ಎಲ್ಲರ ಮೇಲೂ ಜರ್ಬದಸ್ತು ಮಾಡುತ್ತಾನಲ್ಲಾ ಹಾಗಿತ್ತು. ಆದರೆ, ಹಿಂದಿನ ಬಹುತೇಕ ಪ್ರಧಾನಿಗಳಿಗೆ ಕನಸಾಗಿದ್ದ ಅಧಿಕಾರಾವಧಿಯ ಅರ್ಧದಷ್ಟನ್ನು ಪೂರ್ಣಗೊಳಿಸಿದ್ದೇ ಇಮ್ರಾನ್ ಖಾನ್ ತಾನೇ ಎಲ್ಲಾ, ತನ್ನದೇ ಎಲ್ಲಾ, ತನ್ನ ಮುಂದೆ ಯಾರಿಲ್ಲಾ ಎಂದು ತಿಳಿದುಕೊಂಡುಬಿಟ್ಟರು, ಸೇನೆಯನ್ನೇ ಎದುರುಹಾಕಿಕೊಳ್ಳುವ ಹಂತಕ್ಕೂ ಹೋಗಿಬಿಟ್ಟರು. ಸೇನೆಯದೇ ಒಂದು ಅಂಗವಾದ ಕುಖ್ಯಾತ ಇಂಟರ್ ಸರ್ವಿಸಸ್ ಇಂಟಲಿಜೆನ್ಸ್ (ಐಎಸ್ಐ) ನಿರ್ದೇಶಕನ ಆಯ್ಕೆ ಮಾಡುವುದು ಸೇನಾ ದಂಡನಾಯಕ. ನೇಮಕಾತಿ ಪತ್ರಕ್ಕೆ ಪ್ರಧಾನಿಯ ಸಹಿ ಬೀಳಬೇಕಾದ್ದು ಔಪಚಾರಿಕ ಅಷ್ಟೇ. ಅದರಂತೆ, ಕಳೆದ ನವೆಂಬರ್ನಲ್ಲಿ ಲೆ.ಜ. ಶೂಜಾ ಹಮೀದ್ರ ಸ್ಥಾನದಲ್ಲಿ ಲೆ.ಜ. ನದೀಂ ಅಂಜುಂ ಅವರನ್ನು ಐಎಸ್ಐ ಮುಖ್ಯಸ್ಥರನ್ನಾಗಿ ಮಾಡಿ ಸೇನಾ ದಂಡನಾಯಕ ಕಮರ್ ಜಾವೇದ್ ಬಾಜ್ವಾ ಸಿದ್ಧಪಡಿಸಿದ ಪತ್ರಕ್ಕೆ ಸಹಿ ಹಾಕಲು ಇಮ್ರಾನ್ ನಿರಾಕರಿಸಿದರು. ತಮಗೆ ಸಮೀಪವೆನಿಸಿದ್ದ ಹಮೀದ್ರೇ ಮುಂದುವರಿಯುವುದು ಅವರಿಗೆ ಬೇಕಾಗಿತ್ತು. ಆದರೆ, ಲೆ.ಜ. ಹಮೀದ್ ಸೇನಾ ದಂಡನಾಯಕ ಜ. ಬಾಜ್ವಾರ ಅನುಗ್ರಹವನ್ನು ಕಳೆದುಕೊಂಡಿದ್ದರು, ಹೀಗಾಗಿ, ಅವರು ಐಎಸ್ಐಯಿಂದ ಕಾಲ್ತೆಗೆಯಲೇಬೇಕಾಗಿತ್ತು, ಎಂಬ ಪಾಕ್ ವ್ಯವಸ್ಥೆಯ ವಾಸ್ತವವನ್ನು ಇಮ್ರಾನ್ ಮರೆತುಬಿಟ್ಟಿದ್ದರು. ಅವರೇಕೆ ವಾಸ್ತವಪ್ರೆ ಕಳೆದುಕೊಂಡರು ಎಂದು ಅರ್ಥವಾಗುವುದಿಲ್ಲ.
ಇಮ್ರಾನ್ ಖಾನ್ ಪಾಕ್ ರಾಜಕಾರಣ ಕಂಡ ಬಹುಶಃ ಅತ್ಯಂತ ಬುದ್ಧಿವಂತ ಹಾಗೂ ಜಾಣಾಕ್ಷ ರಾಜಕಾರಣಿ. ಕ್ರಿಕೆಟ್ನಲ್ಲಿ ಎದುರಾಳಿ ಬ್ಯಾಟ್ಸ್ಮನ್ಗಳ ಆಟದ ವೈಖರಿಗನುಗುಣವಾಗಿ ಬೌಲಿಂಗ್ ವಿಧಾನಗಳನ್ನು ಬದಲಿಸಿಕೊಂಡು ಅವರನ್ನು ಕಂಗಾಲುಗೊಳಿಸುವುದರಲ್ಲಿ ನಿಷ್ಣಾತರಾಗಿದ್ದ ಇಮ್ರಾನ್ ಅದೇ ನಡವಳಿಕೆಯನ್ನು ರಾಜಕಾರಣದಲ್ಲೂ ಪ್ರದರ್ಶಿಸಿದ ಉದಾಹರಣೆಗಳಿವೆ. ಕಾಲು ಶತಮಾನದ ಹಿಂದೆ "ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸ್ಾ' (ಪಿಟಿಐ) ಪ ಕಟ್ಟಿ ರಾಜಕೀಯ ರಂಗ ಪ್ರವೇಶಿಸಿದ ಅವರು ಮೊದಲಿಗೆ ಆದ್ಯತೆಯಾಗಿಸಿಕೊಂಡದ್ದು ಭ್ರಷ್ಟಾಚಾರದ ನಿರುದ್ಧ ಸಮರವನ್ನು. ಆದರೆ, ಭ್ರಷ್ಟಾಚಾರವನ್ನು ರಾಷ್ಟ್ರೀಯ ಸ್ವಭಾವವನ್ನಾಗಿ ಅಳವಡಿಸಿಕೊಂಡಿರುವ ಪಾಕಿಸ್ತಾನದಲ್ಲಿ ಅದರ ನಿಮೂರ್ಲನದ ಪ್ರಯತ್ನ ಗಾಳಿ ಗುದ್ದಿ ಮೈ ನೋಯಿಸಿಕೊಂಡಂತೆ ಮತ್ತು ಆದ್ಯತೆಯನ್ನು ಬದಲಾಯಿಸದೇ ರಾಜಕೀಯದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದರಿತ ಕೂಡಲೇ ಧರ್ಮದ ಬಗ್ಗೆ ಮಾತಾಡತೊಡಗಿದರು. ತಾವು ನಿಷ್ಠಾವಂತ ಮುಸ್ಲಿಂ, ಇಸ್ಲಾಂನ ಹೆಸರಿನಲ್ಲಿ ಸ್ಥಾಪನೆಯಾಗಿರುವ ಪಾಕಿಸ್ತಾನದಲ್ಲಿ ಇಸ್ಲಾಂ ಅನ್ನು ಸದೃಢಗೊಳಿಸುವುದು ತಮ್ಮ ಆದ್ಯತೆ ಎಂದು ೂಷಿಸಿ ಜನತೆಯ ಮನ ಗೆದ್ದರು. ಅನಂತರ ಅವರು ಹಿಂದೆ ತಿರುಗಿ ನೋಡಿಲ್ಲ. ಈ ಕಾರಣದಿಂದಲೇ ಅವರು, ಪಾಕ್ ವ್ಯವಸ್ಥೆ ಇಸ್ಲಾಮಿಕ್ ಕಟ್ಟಳೆಗಳು ಮತ್ತು ಶರಿಯಾ ಕಾನೂನುಗಳ ಆಧಾರದ ಮೇಲೇ ಆಧಾರಿತವಾಗಿರಬೇಕು ಎಂದು ಹೇಳುವ ತಾಲಿಬಾನ್ ಜತೆಗೂ ವ್ಯಾವಹಾರಿಕ ಹೊಂದಾಣಿಕೆ ಮಾಡಿಕೊಂಡರು. ತಾಲಿಬಾನ್ ಕುರಿತಾಗಿ ಅವರ ಮೃದು ನೀತಿಗಳಿಂದಾಗಿ ಅವರಿಗೆ "ತಾಲಿಬಾನ್ ಖಾನ್' ಎಂಬ ಹೆಸರೇ ಬಂದುಬಿಟ್ಟಿತು. ಹತ್ತು ವರ್ಷಗಳ ಹಿಂದೆ ಹದಿವಯಸ್ಸಿನ ಮಲಾಲಾ ಯೂಸುಫ್ರಯ್ ಮೇಲೆ ಪಾಕ್ ತಾಲಿಬಾನ್ ದಾಳಿ ಎಸಗಿದಾಗ ಇಮ್ರಾನ್ ಖಾನ್ ವ್ಯಾವಹಾರಿಕ ಪ್ರೆ ದೊಡ್ಡದಾಗಿ ಪ್ರದರ್ಶಿತವಾಯಿತು. ಆ ಕೃತ್ಯದ ಬಗ್ಗೆ ಒಬ್ಬ ಜವಾಬ್ದಾರಿಯುತ ಪ್ರಜಾಪ್ರಭುತ್ವವಾದಿ ಜನನಾಯಕನಾಗಿ ತಾವೇಕೆ ದನಿಯೆತ್ತುತ್ತಿಲ್ಲ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದು, "ಇಲ್ಲಿ (ಇಸ್ಲಾಮಾಬಾದ್ನಲ್ಲಿ) ಕೂತುಕೊಂಡು ನಾನು ತಾಲಿಬಾನ್ ಅನ್ನು ಟೀಕಿಸಿದರೆ ಅಲ್ಲಿ (ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದಲ್ಲಿ) ನನ್ನ ಪದ ಕಾರ್ಯಕರ್ತರನ್ನು ಕಾಪಾಡುವವರಾರು' ಎಂದು! ಅಲ್ಲಿ ಇಲ್ಲಿ ಎಲ್ಲೆಲ್ಲಿಯೂ ಸಲ್ಲುವ ಈ ಬಗೆಯ ನೀತಿನಿಲುವುಗಳಿಂದಲೇ ಪ್ರಭಾವಶಾಲಿ ಜನನಾಯಕನಾಗಿ ಬೆಳೆದ ಇಮ್ರಾನ್ ಸಹಜವಾಗಿಯೇ ಸೇನೆಗೂ ಪ್ರಿಯರಾದರು. ಹೀಗಾಗಿಯೇ 2018ರ ಚುನಾವಣೆಗಳಲ್ಲಿ ಸೇನೆ ಇವರನ್ನು ಬೆಂಬಲಿಸಿ ತನ್ನ ಪರವಾಗಿ "ನಾಗರಿಕ ಮುಖ'ವಾಗಲು ಆರಿಸಿಕೊಂಡು ಚುನಾವಣೆಗಳಲ್ಲಿ ಗೆಲ್ಲಿಸಿ ಪ್ರಧಾನಿ ಪಟ್ಟಕ್ಕೇರಿಸಿತು.
ಇದೆಲ್ಲವನ್ನೂ ಕಡೆಗಣಿಸಿ ಸೇನೆಯ ಜತೆಗೇ ತಿಕ್ಕಾಟಕ್ಕಿಳಿದ ಇಮ್ರಾನ್ ನಡವಳಿಕೆ ಆತ್ಮಹತ್ಯೀಯವೇ ಆಗಿತ್ತು. ಸೇನೆ ಮೂಲಭೂತವಾದಿ ರಾಜಕೀಯ ಪ ತೆಹ್ರೀಕ್-ಇ-ಲಬ್ಬಾಯಿಕ್ ಪಾಕಿಸ್ತಾನ್ (ಟಿಎಲ್ಪಿ) ಅನ್ನು ಇಮ್ರಾನ್ ಖಾನ್ ವಿರುದ್ಧ ಛೂ ಬಿಟ್ಟಿತು. ಅದು ರಾಷ್ಟ್ರಾದ್ಯಂತ ಎಬ್ಬಿಸಿದ ದಾಂಧಲೆಯಿಂದ ಬಚಾವಾಗಲು ಸೇನೆಯೊಂದಿಗೇ ರಾಜಿ ಮಾಡಿಕೊಳ್ಳುವ ಒತ್ತಡಕ್ಕೊಳಗಾದ ಇಮ್ರಾನ್ ಖಾನ್ ಐಎಸ್ಐ ಮುಖ್ಯಸ್ಥನ ಸ್ಥಾನಕ್ಕೆ ಸೇನೆಯ ಆಯ್ಕೆಯಾದ ಲೆ.ಜ. ನದೀಂ ಅಂಜುಂರನ್ನು ಒಪ್ಪಿಕೊಂಡರು. ಆದರೆ, ಅಷ್ಟಕ್ಕೆ ಸೇನೆ ತಮ್ಮನ್ನು ಮತ್ತೆ ಅಪ್ಪಿಕೊಂಡುಬಿಡುತ್ತದೆ ಎಂದವರು ನಂಬಿದ್ದು ತಪ್ಪಾಗಿತ್ತು. ತಾನೇ ಸಾಕಿದ ನಾಯಿ ತನ್ನತ್ತಲೇ ಬೊಗಳಿದ್ದನ್ನು ಮಿಸಲು ಸೇನೆ ತಯಾರಿರಲಿಲ್ಲ. ಅದು ವ್ಯಕ್ತವಾದದ್ದು ಜನವರಿ ಅಂತ್ಯದಲ್ಲಿ ಇಮ್ರಾನ್ ಗದ್ದುಗೆ ಅಲ್ಲಾಡತೊಡಗಿದಾಗ ಆಡಳಿತ ಪ ಮತ್ತು ವಿರೋಧ ಪಗಳ ನಡುವಿನ ಸಂರ್ಷದಲ್ಲಿ ತಾನು ಅಲಿಪ್ತವಾಗಿ ಉಳಿಯುವುದಾಗಿ ಸೇನೆ ಘೋಷಿಸಿದಾಗ. ನಿರಾಶೆಗೊಂಡ ಇಮ್ರಾನ್ ಸೇನೆಯನ್ನು ಒಲಿಸಿಕೊಳ್ಳುವ ದಾರಿ ತೊರೆದು ಸಂರ್ಷದ ಹಾದಿಗಿಳಿದರು. "ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ಸಂರ್ಷವಾದಾಗ ಸ್ವಂತವಾಗಿ ಆಲೋಚಿಸಬಲ್ಲ ಮನುಷ್ಯರು ಒಳ್ಳೆಯದರ ಬೆಂಬಲಕ್ಕೆ ನಿಲ್ಲುತ್ತಾರೆ. ಆಲೋಚನಾ ಸಾಮರ್ಥ್ಯವಿಲ್ಲದ ಪ್ರಾಣಿಗಳು (ಜಾನ್ವಾರ್) ಮಾತ್ರ ಅಲಿಪ್ತವಾಗುಳಿಯುತ್ತವೆ' ಎಂಬ ಅವರ ಟೀಕಾಸ ತಾತ್ವಿಕವಾಗಿ ಸರಿಯೇ ಆಗಿದ್ದರೂ ಪಾಕ್ ರಾಜಕಾರಣದ ವಾಸ್ತವಗಳಿಗೆ ಹೊಂದುವಂತಿರಲಿಲ್ಲ. ಇಮ್ರಾನ್ ಖಾನ್ ಒಳ್ಳೆಯದನ್ನು ಪ್ರತಿನಿಧಿಸುತ್ತಾರೆ ಎಂದು ಸೇನೆ ಭಾವಿಸಹೋಗಲಿಲ್ಲ. ತನ್ನನ್ನು "ಜಾನ್ವಾರ್' ಎಂದು ಕರೆದ ಅವರನ್ನು ಕೆಳಗಿಳಿಸಲು ನಿರ್ಧರಿಸಿತು. ಅದು ಮೂರೂವರೆ ವರ್ಷಗಳ ಹಿಂದೆ ತಾನೇ ತಿರಸ್ಕರಿಸಿದ್ದ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಗಳ ಸಂಯುಕ್ತ ಕೂಟವನ್ನು ತೆರೆಯ ಹಿಂದೆಯೇ ಬೆಂಬಲಿಸತೊಡಗಿತು. ಒಟ್ಟಿನಲ್ಲಿ ಇಮ್ರಾನರ ಜಾನ್ವಾರ್ ಹೇಳಿಕೆ "ಆ ಬೈಲ್, ಮುಝೆ ಮಾರ್' ಎಂದು ಸೇನೆಯನ್ನು ಆಹ್ವಾನಿಸಿದಂತೇ ಆಯಿತು.
ಅಂತಿಮವಾಗಿ ಸೇನೆಯ ಕುಮ್ಮಕ್ಕಿನಿಂದಲೇ ವಿರೋಧ ಪಗಳು ಇಮ್ರಾನ್ ಖಾನ್ರ ಪಿಟಿಐ ಪವನ್ನೂ ಒಡೆದು ಅವರು ಸಂಸತ್ತಿನಲ್ಲಿ ಬಹುಮತ ಕಳೆದುಕೊಳ್ಳುವಂತೆ ಮಾಡಿತು. ಇಮ್ರಾನ್ ಪ್ರಧಾನಿ ಗದ್ದುಗೆಯಿಂದ ಕೆಳಗಿಳಿಯಲೇಬೇಕಾಯಿತು. ಆದರೆ, ಅಧಿಕಾರ ನಿರ್ಗಮನದಲ್ಲಿ ಅವರು ಇನ್ನೊಂದಿಷ್ಟು ಅವಮಾನವನ್ನು ಅನುಭವಿಸಬೇಕಾಗಿತ್ತು. ಅದಾದದ್ದು ಏಪ್ರಿಲ್ 9ರಂದು. ಆ ರಾತ್ರಿ ಇಮ್ರಾನ್ ಖಾನ್ರ ಬಾನಿ ಗಲಾ ನಿವಾಸಕ್ಕೆ ಹೆಲಿಕಾಪ್ಟರ್ನಲ್ಲಿ ಬಂದ ಸೇನಾ ದಂಡನಾಯಕ ಜ. ಬಾಜ್ವಾ ಪ್ರಧಾನಿಗೆ ಕಪಾಳಮೋ ಮಾಡಿದರು. ಈ "ಕ್ರಮ'ಕ್ಕೆ ಕಾರಣ ಬಾಜ್ವಾರನ್ನು ದಂಡನಾಯಕನ ಸ್ಥಾನದಿಂದ ಬರಖಾಸ್ತುಗೊಳಿಸಿ, ತಮಗೆ ಸಮೀಪದ ಲೆ.ಜ. ಶೂಜಾ ಹಮೀದ್ರನ್ನು ಆ ಸ್ಥಾನಕ್ಕೇರಿಸಲು ಇಮ್ರಾನ್ ತಯಾರಿಸಿದ್ದ ಸರ್ಕಾರಿ ಆದೇಶ ಎಂದು ಹೇಳಲಾಗುತ್ತದೆ. ಆ ಆದೇಶ ಜಾರಿಗೊಳ್ಳದಂತೆ ಮಾಡಲು ಜಾಜ್ವಾ ಆಯ್ದುಕೊಂಡ ಮಾರ್ಗ ಪ್ರಧಾನಿಯ ಕೆನ್ನೆಗೆ ಬಾರಿಸುವುದಾಗಿತ್ತಂತೆ! ಇದರ ಸತ್ಯಾಸತ್ಯತೆ ಸ್ಪಷ್ಟವಿಲ್ಲ. ಆದರೆ, ಇಮ್ರಾನ್ರ ಕೆನ್ನೆ ಚುರುಗುಟ್ಟಿದ್ದಂತೂ ನಿಜ.
ಇಷ್ಟಾಗಿಯೂ, ಹಿಂದೆ ಸೇನೆ ತನ್ನನ್ನು ಅವಮಾನಿಸಿದ ಝುಲ್ಫೀಕರ್ ಆಲಿ ಭುಟ್ಟೋರನ್ನು ನೇರವಾಗಿ ಗಲ್ಲಿಗೇರಿಸಿದ್ದು, ತನ್ನ ವಿರುದ್ಧ "ಬಾಲ ಬಿಚ್ಚಿದ' ಬೆನಜೀರ್ ಭುಟ್ಟೋರನ್ನು ಹತ್ಯೆಯಲ್ಲದ ಹತ್ಯಾ ವಿಧಾನದಲ್ಲಿ ಕೊಂದದ್ದು, ತನ್ನ ವಿರುದ್ಧ ಪಿತೂರಿ ಎಸಗಿದ ನವಾಜ್ ಶರೀಫ್ರ ತಲೆದಂಡವನ್ನು ಸೌದಿ ಅರೇಬಿಯಾದ ಒತ್ತಡದಿಂದಾಗಿ ತಡೆಹಿಡಿದಿದ್ದನ್ನು ನೆನಪಿಸಿಕೊಂಡರೆ ಇಮ್ರಾನ್ ಖಾನ್ರಿಗಾದ "ಶಿಕ್ಷೆ' ಏನೇನೂ ಅಲ್ಲ. ಆದರೆ, ಇಲ್ಲಿಗೇ ಎಲ್ಲವೂ ಮುಗಿದಿದೆ ಎಂದರ್ಥವಲ್ಲ. ಸೇನೆ ಮತ್ತು ಇಮ್ರಾನ್ ಖಾನ್ ಒಟ್ಟಿಗೇ ನಟಿಸುತ್ತಿರುವ ನಾಟಕದ ಎರಡು ಅಂಕಗಳಷ್ಟೇ ಈಗ ಮುಗಿದಿವೆ. ಇನ್ನೆಷ್ಟು ಅಂಕಗಳಿವೆ ಎಂದು ಹೇಳಲಾಗದಿದ್ದರೂ ನಾಟಕಕ್ಕೆ ಅನಿರೀತವಾಗಿ ಪರದೆ ಬೀಳದಿರಲಿ, ಎಲ್ಲ ಪಾತ್ರಧಾರಿಗಳೂ ಕೊನೆಯಲ್ಲಿ ರಂಗದ ಮೇಲೆ ಒಟ್ಟಿಗೆ ನಗುತ್ತಾ ನಿಂತು ಪ್ರೇಕರಿಂದ ಮೆಚ್ಚುಗೆಯ ಕರತಾಡನದ ಗೌರವ ಪಡೆಯಲಿ ಎನ್ನುವುದು ನಾನೂ ಸೇರಿದಂತೆ ಎಲ್ಲ ಶಾಂತಿಪ್ರಿಯರ ಆಶಯ.