ಗಾಳಿಯಲ್ಲೇ ನಿಂತು ಮಕರಂದ ಹೀರುವ ಪಕ್ಷಿ ಪ್ರಪಂಚದ ಪುಟಾಣಿ ಅದ್ಭುತ

hummingbird
Published on

| ಸುರೇಶ್ ಮರಕಾಲ ಸಾಯ್ಬರಕಟ್ಟೆ

‘ಹಾರುವ ಹಕ್ಕಿ’ ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ನಿಮ್ಮೆಲ್ಲರಂತೆ, ಶಾಲೆಗೆ ಹೋಗುವಾಗ ನನಗೂ ಕೂಡಾ ಹಕ್ಕಿಗಳನ್ನು ಕಂಡರೆ ಹೇಳಲಾಗದ ಸೆಳೆತ; ಅದು ಇಂದಿಗೂ ಕಡಿಮೆಯಾಗಿಲ್ಲ. ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ಕಂಡಾಗ, ಅವುಗಳ ಎಲ್ಲೆಯಿರದ ಸ್ವಾತಂತ್ರ್ಯಕ್ಕೆ, ಪುಡಿಗಾಸೂ ಇಲ್ಲದೆ ದೇಶ-ವಿದೇಶ ಸುತ್ತಲು ಅವುಗಳಿಗೆ ಪ್ರಕೃತಿ ನೀಡಿರುವ ಅವಕಾಶಕ್ಕೆ ಬೆರಗಾಗುತ್ತಿದ್ದೆ! ದೂರದಲ್ಲಿ ಬಣ್ಣದ ಮುದ್ದೆಯಂತೆ ಕಣ್ಮಿಟುಕಿಸಿ ಬಿಡುವುದರೊಳಗೆ ಕಣ್ಮರೆಯಾಗುತ್ತಿದ್ದ ಹಕ್ಕಿಗಳನ್ನು –ಎಲ್ಲಾ ಮಕ್ಕಳಂತೆ ನನಗೂ- ಹತ್ತಿರದಿಂದ ಕಾಣಬೇಕು, ಸಾಕಬೇಕು ಎಂಬ ಆಸೆಯಾಗುತ್ತಿತ್ತು. ಮರಗಳ ಮೇಲೆ, ಅವುಗಳ ರೀತಿಯಲ್ಲಿಯೇ ಅವುಗಳನ್ನು ಬಿಡಬೇಕು, ನಾವು ತಂದು ಎಷ್ಟೇ ಅಕ್ಕರೆಯಿಂದ ಸಾಕಿದರೂ ಅವು ಬದುಕಲಾರವು, ಬದುಕಿದರೂ ಖುಷಿಯಿಂದಂತೂ ಇರಲಾರವು ಎಂದು ಯಾವಾಗೂ ಹೇಳುತ್ತಿದ್ದ ನನ್ನ ತಂದೆಯವರ ಮಾತನ್ನು ಕೇಳುವ ಗೋಜಿಗೇ ಅಂದು ಹೋಗುತ್ತಿರಲಿಲ್ಲ. ಆದರೆ ನನ್ನ ಮಂಗ ಬುದ್ಧಿಯ ಪರಿಚಯವಿದ್ದ ಅವರು ಕೆಲವೊಂದು ವಿಷಯಗಳಲ್ಲಿ ಹೇಳುವಷ್ಟು ಹೇಳಿ ಸಾಕಾದ ಮೇಲೆ, ’ಅನುಭವಿಸಿ ಪಾಠ ಕಲಿಯಲಿ’ ಎಂದು ಸುಮ್ಮನಾಗಿ ಬಿಡುತ್ತಿದ್ದರು!

ನನ್ನ ಬಾಲ್ಯದಲ್ಲಿ ನೆನಪಿರುವ ಹಾಗೆ, ಸುಮಾರು ಆರೇಳು ಹಕ್ಕಿಗಳನ್ನು ಅವುಗಳ ಮನೆಯಿಂದ ಹಾರಿಸಿಕೊಂಡು ಬಂದು, ನಮ್ಮ ಮನೆಯಲ್ಲಿ ತಂದು ಸಾಕಿದ್ದೆ. ನನ್ನ ದುರಾದೃಷ್ಟವೋ, ಆ ಹಕ್ಕಿಗಳ ಅದೃಷ್ಟವೋ- ಒಟ್ಟಿನಲ್ಲಿ ನನ್ನ ನರಕಯಾತನೆಯನ್ನು ತಡೆಯುವ ಶಕ್ತಿ ಸಾಲದೆ- ಒಂದು ಹಕ್ಕಿಯೂ ನನ್ನ ಜೊತೆ ಅದರ ಪೂರ್ಣ ಆಯುಷ್ಯವನ್ನು ಕಳೆಯಲಿಲ್ಲ! ಒಮ್ಮೆಯಂತೂ ‘ಭೂತಕ್ಕಿ’ ಎಂದು ಕರೆಯುವ, ಮನೆಯೊಳಗೆ ತಂದರೆ ಅನಿಷ್ಠ ಅನ್ನುತ್ತಿದ್ದ ಹಕ್ಕಿಯನ್ನು ಹಿಡಿದು ತರಲು ನಾನೂ ನನ್ನ ದೊಡ್ಡಮ್ಮನ ಮಗ ನಾರಾಯಣನೂ ದೊಡ್ಡ ಹಾಡಿಯೊಳಗೆ ಹುಣ್ಣಿಮೆಯ ರಾತ್ರಿ ಹಕ್ಕಿಯ ಗೂಡು ಇರುವ ಪೊದೆ ಬಳಿ ತಂದೆಯವರ ಒಂದು ಲುಂಗಿಯನ್ನೇ ಬಲೆಯನ್ನಾಗಿ ಮಾಡಿ, ನಿಶಾಚರರಂತೆ ಹಕ್ಕಿಗಾಗಿ ಕಾವಲು ಕಾಯತೊಡಗಿದ್ದೆವು!! ಮನೆಯಲ್ಲಿ ನಮ್ಮಿಬ್ಬರನ್ನು ಎಲ್ಲಿ ಹುಡುಕಿದರೂ ನಾವಿಬ್ಬರು ಪತ್ತೆಯಾಗದೇ, ಬಾವಿ ಕೆರೆಯನ್ನೆಲ್ಲ ಮೇಲಿಂದಲೇ ಸುಮ್ಮನೆ ನೋಡಿ (ಯಾಕೆಂದರೆ ನಾವಿಬ್ಬರೂ ಎಷ್ಟೊಂದು ಚೆನ್ನಾಗಿ ಈಜುತ್ತಿದ್ದೆವೆಂದರೆ, ಸಾಧಾರಣ ಪೆಟ್ಟಿಗೆ ನೀರಿಗೆ ಬಿದ್ದು ಸಾಯುವುದಿಲ್ಲವೆಂದು ಎಲ್ಲರಿಗೂ ಗೊತ್ತಿತ್ತು!) ಹುಡುಕುತ್ತಾ ಬಂದು ನೋಡಿದರೆ, ತುಂಬು ಹುಣ್ಣಿಮೆಯ ದಿನ ಭೂತ ಪ್ರೇತಗಳು ತಿರುಗಾಡುತ್ತಾವೆಂದು ಊರಿನವರೆಲ್ಲರೂ ಯಾವ ಸಂಶಯವೂ ಇಲ್ಲದೆ ನಂಬುತ್ತಿದ್ದ ಆ ಹಾಡಿಯ ಮಧ್ಯದ ಪೊದೆಯ ಮರೆಯಲ್ಲಿ ಕಾವಲು ಬಿದ್ದ ಸೈನಿಕರಂತೆ ವಿರಾಜಮಾನವಾಗಿರುವುದನ್ನು ಕಂಡು ಕ್ಯಾಕರಿಸಿ ಉಗಿದು, ಮಹಾಮಂಗಳಾರತಿ ಮಾಡಿ, ಕಿವಿ ಕಳಚಿ ಅವರ ಕೈಗೇ ಸೇರಿಹೋಗುವಷ್ಟು ಜೋರಾಗಿ ತಿರುಪಿ, ”ಇನ್ನೊಂದು ಐದು ನಿಮಿಷದಲ್ಲಿ ಆ ಹಕ್ಕಿ ಬಂದೇ ಬರುತ್ತದೆ, ಅದನ್ನ ಹಿಡಿಯಬೇಕು” ಎಂಬ ನಮ್ಮ ಗೋಗೆರೆತಕ್ಕೆ ಮತ್ತಷ್ಟು ಕೆರಳಿ, ಅಲ್ಲೇ ಇದ್ದ ಯಾವುದೋ ಗಿಡದ ಅಡರನ್ನೇ ಆಯುಧ ಮಾಡಿಕೊಂಡು, ಮುಕುಳಿಯ ಮೇಲೆ ನಾಲ್ಕು ಬಿಗಿದು, ಕೆಂಪಾಗುತ್ತಿದ್ದ ಮುಕುಳಿಯನ್ನು ಒರೆಸಿಕೊಳ್ಳಲೂ ಅವಕಾಶ ನೀಡದೆ, ರಟ್ಟೆ ಹಿಡಿದು ದರದರನೆ ಎಳೆದುಕೊಂಡು ಮನೆಯೊಳಗೆ ಪ್ರತಿಷ್ಠಾಪನೆ ಮಾಡಿದರು! ಬೈಗುಳ, ಕಿವಿ ಹಿಂಡುವುದು, ಹುಣಿಸೆ ಅಡರಿನ ಪೆಟ್ಟು ಇವೆಲ್ಲವೂ ನಮ್ಮ ಜೀವನದ ಎಷ್ಟು ಅವಿಭಾಜ್ಯ ಅಂಗಗಳಾಗಿ ಹೋಗಿದ್ದುವೆಂದರೆ, ಅವುಗಳ ಬಗ್ಗೆ ಯೋಚಿಸಬೇಕು ಎನ್ನುವಷ್ಟೂ ತಿಳುವಳಿಕೆ ನಮಗಿರಲಿಲ್ಲ. ನಮ್ಮ ಚಿಂತೆ ಎಂದರೆ ಅನ್ಯಾಯವಾಗಿ ಹಕ್ಕಿ ನಮ್ಮ ಕೈತಪ್ಪಿ ಹೋಯಿತಲ್ಲಾ ಎಂದು! ಮನೆಯಲ್ಲಿ ಆ ಹಕ್ಕಿ ರೂಪ ಬಣ್ಣಗಳನ್ನು ವರ್ಣನೆ ಮಾಡಿದ ಮೇಲೆ, ಅದು ಭೂತಕ್ಕಿ ಎಂದು ತಿಳಿದ ತಂದೆಯವರು, ಹಾಡಿಯಲ್ಲಿ ಅಮ್ಮ ನಮಗೆ ಮಾಡಿದ್ದ ಪೂಜೆ ಪುನಸ್ಕಾರಗಳ ಮುಂದುವರಿದ ಭಾಗವಾಗಿ ರುದ್ರಾಭಿಷೇಕ ಆರಂಭಿಸಿದರು!!

ಈ ಹಕ್ಕಿಗಳನ್ನು ಸಾಕುವ ವಿಚಾರದಲ್ಲಿ ನಾನು ಸಂಪೂರ್ಣ ಸೋತಿದ್ದು ಮಾತ್ರ ಹೂವಿನಿಂದ ಹೂವಿಗೆ ಹಾರುವ ಸೇವಂತಿಗೆ ಹೂವಿನ ಗಾತ್ರದ ಒಂದು ಹಕ್ಕಿಯಲ್ಲಿ! ಆ ಹಕ್ಕಿಯ ಹೆಸರು ಆಗ ನನಗೆ ಗೊತ್ತಿರಲಿಲ್ಲ. ಹೆಸರನ್ನು ಕಟ್ಟಿಕೊಂಡು ಆಗಬೇಕಾಗಿದ್ದೂ ಏನೂ ಇರಲಿಲ್ಲ. ಅದರ ಮೈಮಾಟಕ್ಕೆ, ಬಣ್ಣಕ್ಕೆ, ಹೂವಿನಿಂದ ಹೂವಿಗೆ ಚಕ್ಕನೆ ಹಾರುವ ವೇಗಕ್ಕೆ ಮಾರುಹೋದ ನಾನು, ’ಸಾಕಿದರೆ ಇಂತಹಾ ಹಕ್ಕಿಯನ್ನು ಸಾಕಬೇಕು’ ಎಂಬ ಗಂಡಸುತನದ ನಿರ್ಧಾರಕ್ಕೆ ಬಂದೆ! ಆದರೆ ಆ ಹಕ್ಕಿ ಅದೆಷ್ಟು ವೇಗದಲ್ಲಿ ಹಾರುತ್ತಿತ್ತು ಎಂದರೆ, ನಾನು ಅದನ್ನು ಕೈಯ್ಯಲ್ಲಿ ಹಿಡಿಯುವುದಿರಲಿ, ಅದರ ಹಾರಾಟದ ವೇಗವನ್ನು ಕಣ್ಣಿನಲ್ಲಿ ಸರೆ ಹಿಡಿಯುವುದೂ ಕೂಡಾ ಅಸಾಧ್ಯವಾಯಿತು. ಹಕ್ಕಿ ಸಿಗುವಂತಿಲ್ಲ, ಚಪಲ ಬಿಡುವಂತಿಲ್ಲ. ತಂದೆಯವರನ್ನೇ ಕೇಳಿದೆ! ಆಗ ಸಾವಕಾಶವಾಗಿ ಹೇಳಿದರು, ಅದು ಹೂವಿನ ರಸವನ್ನು ಕುಡಿದು ಬದುಕುವ ಹಕ್ಕಿ, ಅದರ ಹಾರಾಟದ ವೇಗ, ಅದರ ಪುಟ್ಟ ಗಾತ್ರವನ್ನು ತೋರಿಸುತ್ತಾ ಅದನ್ನು ಹಿಡಿಯುವುದು ಅತ್ಯಂತ ಕಷ್ಟವೆಂದೂ, ಹಿಡಿದರೂ ಕೂಡಾ ಹೂವಿನ ರಸವನ್ನು ನಮಗೆ ತೆಗೆಯಲು ಬರುವುದಿಲ್ಲವಾದ್ದರಿಂದ ಹೂವಿನ ರಸವನ್ನು ಕುಡಿದು ಬದುಕುವ ಆ ಹಕ್ಕಿ ಉಪವಾಸ ಬಿದ್ದು ಒಂದೇ ದಿನಕ್ಕೆ ಸತ್ತೇ ಹೋಗುತ್ತದೆ ಎಂದೂ, ಹಕ್ಕಿ ಹಿಡಿಯುವುದರಲ್ಲಿ ಅತ್ಯಂತ ಪಳಗಿದ ಕುಡುಬಿ ಜನರೋ, ಕಿಳ್ಳೇಕ್ಯಾತರೋ ಮಾತ್ರ- ಅದೂ ಶಥಪ್ರಯತ್ನ ಮಾಡಿದರೆ- ಹತ್ತರಲ್ಲಿ ಒಂದನ್ನು ಹಿಡಿಯಬಹುದೇನೋ ಎಂದರು. ನನ್ನ ಹಕ್ಕಿ ಹಿಡಿಯುವ ಸಾಹಸವನ್ನು ಪ್ರೋತ್ಸಾಹಿಸುವ ಬದಲು, ಇಂತಹಾ ನಿರುತ್ಸಾಹದ ಮಾತಾಡುತ್ತಾರಲ್ಲಾ, ಇದೇ ನನ್ನ ತಾಕತ್ತಿನ ಪ್ರದರ್ಶನಕ್ಕೆ ಸರಿಯಾದ ಕಾಲವೆಂದು ನಿರ್ಧರಿಸಿದೆ! ಹೀಗಾಗಿ ಅವರ ಮಾತಿನಿಂದ ನನಗೇನು ಆಶಾಭಂಗವಾದಂತೆ ಕಾಣಲಿಲ್ಲ; ಬದಲಿಗೆ ದಾಸವಾಳ ಗಿಡದಡಿಗೆ ನನ್ನ ವಾಸ್ತವ್ಯವನ್ನು ಬದಲಿಸಿಕೊಂಡೆ! ನಾನೇನು ಮಾಡಿದರೂ ಆ ಹಕ್ಕಿಯ ಒಂದು ಪುಕ್ಕವನ್ನು ಕೂಡಾ ಮುಟ್ಟಲಾರೆ ಎಂದು ತಂದೆಯವರಿಗೆ ತಿಳಿದಿದ್ದುರಿಂದ ನಾನು ಆ ಹಕ್ಕಿಯನ್ನು ಬೇಟೆಯಾಡುವುದರ ಬಗ್ಗೆಯಾಗಲೀ, ಆ ಪುಟ್ಟ ಹಕ್ಕಿಯ ಜೀವ ರಕ್ಷಣೆಯ ಬಗ್ಗೆಯಾಗಲೀ ಅವರು ಯಾವುದೇ ಆಸಕ್ತಿಯನ್ನು ತೋರಲಿಲ್ಲ! ಮುಂದಿನ ನಾಲ್ಕಾರು ದಿನ ಮನೆಯ ಎದುರಿನ ದಾಸವಾಳ ಗಿಡದ ಹೂವಿನ ಮೇಲೆ ಗಾಳಿಯಲ್ಲೆ ನಿಂತು ಮಕರಂದ ಹೀರುತ್ತಿದ್ದ ಅದನ್ನು ಹಿಡಿಯಲು ನಾನು ಮಾಡುತ್ತಿದ್ದ ವ್ಯರ್ಥ ಪ್ರಯತ್ನವನ್ನು ನೋಡಿ ದೂರದಲ್ಲೇ ನಗುತ್ತಿದ್ದರು - ಅಷ್ಟೆ!!

ನಾನು ಅಂದು ಹಿಡಿಯಲು ಪ್ರಯತ್ನ ಮಾಡಿದ್ದು, ಹೂವಿನ ರಸ ಹೀರುವ ಸನ್ ಬರ್ಡ್ ಅಥವಾ ಸೂರಕ್ಕಿಯನ್ನು. ಊರಲ್ಲಿ ಅದಕ್ಕೆ ದಾಸವಾಳ ಹಕ್ಕಿ ಎಂದು ಕರೆಯುತ್ತಿದ್ದುದರ ನೆನಪು. ಈ ಹಕ್ಕಿಯ ರೀತಿ ಕಾಣುವ ಮತ್ತೊಂದು ಜಾತಿ ಇದೆ, ವಾಸ ಅಮೇರಿಕಾದ ಉತ್ತರ ಮತ್ತು ಮಧ್ಯ ಭಾಗ ಹಾಗೂ ಕೆರೆಬಿಯನ್ ಪ್ರದೇಶದಲ್ಲಿ, ಜೊತೆಗೆ ಸ್ವಲ್ಪ ಪ್ರಮಾಣದಲ್ಲಿ ಉತ್ತರ ಅಮೇರಿಕಾದಲ್ಲಿ ಕೂಡಾ. ಹೆಸರು ‘ಹಮ್ಮಿಂಗ್ಬರ್ಡ್’. ಅತ್ಯಂತ ಚಿಕ್ಕ ಹಕ್ಕಿ. ಎಷ್ಟು ಚಿಕ್ಕದೆಂದರೆ, ಪ್ರಪಂಚದಲ್ಲಿಯೇ ಅತೀ ಚಿಕ್ಕ ಹಕ್ಕಿ. ಒಂದು ಹಮ್ಮಿಂಗ್ ಬರ್ಡ್ನ ಗರಿಷ್ಟ ಉದ್ದ ಕೇವಲ ಮೂರು ಇಂಚುಗಳು! ಅದರಲ್ಲೂ ಬೀ-ಹಮ್ಮಿಂಗ್ಬರ್ಡ್ನ ಉದ್ದ ಕೇವಲ 2.25 ಇಂಚುಗಳು! ಅಂದರೆ ನಿರಾಯಾಸವಾಗಿ ಅಂಗೈಯ ಮೇಲೆ ಹತ್ತು ಹಕ್ಕಿಗಳನ್ನು ಕೂರಿಸಿಕೊಳ್ಳಬಹುದು!! ಒಂದು ಹಕ್ಕಿಯ ಭಾರ ಹೆಚ್ಚೆಂದರೆ ಮೂರರಿಂದ ನಾಲ್ಕೂವರೆ ಗ್ರಾಂಗಳು!

ನಮ್ಮ ಸುತ್ತಲೂ ನೂರಾರು ಪಕ್ಷಿಗಳಿದ್ದರೂ, ನಾನು ವಿಶೇಷತಃ ಈ ಹಮ್ಮಿಂಗ್ ಬರ್ಡನ್ನೇ ಇಂದಿನ ವಿಷಯವಾಗಿ ಆರಿಸಲು ಅನೇಕ ಕಾರಣಗಳಿವೆ. ಹಾಗೆ ನೋಡಿದರೆ, ಈ ಪ್ರಕೃತಿ ಎಷ್ಟೊಂದು ಬಗೆ ಬಗೆಯ ವೈಚಿತ್ರ್ಯಗಳ ತವರುಮನೆಯಾಗಿದೆಯೆಂದರೆ, ಇಲ್ಲಿ ಯಾವುದು ಒಂದರ ರೀತಿ ಮತ್ತೊಂದಿದೆ? ಒಂದು ಮುಖದಂತೆ ಮತ್ತೊಂದಿಲ್ಲ, ಒಂದು ಜೀವಿಯಂತೆ ಇನ್ನೊಂದಿಲ್ಲ, ಹೆಚ್ಚೇಕೆ ಒಂದೇ ಮರದ ಹಣ್ಣು- ಯಾವುದೇ ಮರದ ಹಣ್ಣನ್ನು ಬೇಕಾದರೂ ತೆಗೆದುಕೊಳ್ಳಿ- ಒಂದರ ರುಚಿ ಅದೇ ಮರದ ಮತ್ತೊಂದು ಟೊಂಗೆಯ ಹಣ್ಣಿನದಕ್ಕಿಂತ ಸ್ವಲ್ಪವಾದರೂ ಭಿನ್ನವಾಗಿಯೇ ಇರುತ್ತದೆ. ನಕಲು ಮಾಡುವುದು ಮನುಷ್ಯ ಮಾತ್ರ! ನಮ್ಮ ಸುತ್ತಮುತ್ತ ಇರುವ ಪ್ರತೀ ಪ್ರಾಣಿ, ಪಕ್ಷಿಯೂ ಅದರ ನಿಟ್ಟಿನಿಂದ ಚಿಂತಿಸುವಾಗ ಅದು ವೈವಿಧ್ಯವೇ. ಆದರೂ ಹಮ್ಮಿಂಗ್ ಬರ್ಡ್ನ ವೈವಿದ್ಯತೆ ಇನ್ನೂ ಹೆಚ್ಚು! ಹಕ್ಕಿಗಳಲ್ಲಿ ಬಹುತೇಕ ಎಲ್ಲವೂ ಹಾರುತ್ತವೆ, ಎಲ್ಲೋ ಕೆಲವೊಂದನ್ನು- ಅಳಿದು ಹೋದ ಡೋಡೋ, ಉಷ್ಟ್ರಪಕ್ಷಿ, ಕಿವಿ, ಕ್ಯಾಸೋವರಿ, ಪೆಂಗ್ವಿನ್ ಮೊದಲಾದವುಗಳನ್ನು- ಹೊರತುಪಡಿಸಿದರೆ. ಆದರೆ ಯಾವ ಹಕ್ಕಿಗೂ ಹಮ್ಮಿಂಗ್ ಬರ್ಡ್ನಂತೆ ಹಾರಲು ಸಾಧ್ಯವಿಲ್ಲ ಬಿಡಿ! ಇದರ ರೆಕ್ಕೆಗಳು ಒಂದು ಸೆಕೆಂಡ್ಗೆ ಎಷ್ಟು ಬಾರಿ ಬೀಸುತ್ತವೆ ಗೊತ್ತೇ? ಐಡು ಬಾರಿ?, ಹತ್ತು ಬಾರಿ?, ಇಪ್ಪತ್ತು ಬಾರಿ?, ನಂಬಲು ಅಸಾಧ್ಯವಾದ ಸತ್ಯವಿದು, ಹಮ್ಮಿಂಗ್ಬರ್ಡ್ ಸಾಮಾನ್ಯ ಹಾರಾಟದ ಸ್ಥಿತಿಯಲ್ಲಿ ಬರೀ ಒಂದು ಸೆಕೆಂಡ್ಗೆ ಕನಿಷ್ಟ ಎಪ್ಪತ್ತೈದು ಬಾರಿ ತನ್ನ ರೆಕ್ಕೆಗಳನ್ನು ಬಡಿಯುತ್ತದೆ. ಎತ್ತರದಿಂದ ಡೈ ಹೊಡೆಯಬೇಕಾದ ಪರಿಸ್ಥಿತಿಯಲ್ಲಂತೂ ಈ ಹಕ್ಕಿಯ ರೆಕ್ಕೆಯ ವೇಗವನ್ನು ನಾವು ಊಹೆ ಕೂಡಾ ಮಾಡಲಾರೆವು!!, ಸೆಕೆಂಡ್ಗೆ ಕನಿಷ್ಟ ಇನ್ನೂರು ಬಾರಿ!!! ಇಷ್ಟೊಂದು ಊಹನಾತೀತ ವೇಗದಲ್ಲಿ ಹಮ್ಮಿಂಗ್ಬರ್ಡ್ ತನ್ನ ರೆಕ್ಕೆಯನ್ನು ಬೀಸುವಾಗ, ಆ ರೆಕ್ಕೆಗಳು ಗಾಳಿಯೊಂದಿಗೆ ಘರ್ಷಣೆ ಹೊಂದಿ ‘ಹ್ರ್ಮ್.....’ ಎಂಬ ಮರ್ಮರ ಬರುವುದರಿಂದಲೇ, ಈ ಹಕ್ಕಿಯನ್ನು ಇಂಗ್ಲೀಷ್ನಲ್ಲಿ ‘ಹಮ್ಮಿಂಗ್’ ಬರ್ಡ್ ಎಂದು ಕರೆಯುವುದು. ಇನ್ನೂ ವಿಶೇಷವೆಂದರೆ, ಹಮ್ಮಿಂಗ್ಬರ್ಡ್ ತನ್ನ ರೆಕ್ಕೆಗಳನ್ನು ಎಲ್ಲ ಹಕ್ಕಿಗಳಂತೆ ಮೇಲಕ್ಕೂ ಕೆಳಕ್ಕೂ ಬೀಸದೆ, ‘ಎಂಟು’ ಅಂಕೆಯ ಆಕಾರದಲ್ಲಿ ಬೀಸುತ್ತದೆ! ಜೊತೆಗೆ ಈ ರೆಕ್ಕೆಗಳ ಅಪ್ರತಿಮ ವೇಗದಿಂದಾಗಿ ಹಮ್ಮಿಂಗ್ಬರ್ಡ್ ಗಾಳಿಯಲ್ಲಿ ಹಾರುತ್ತಾ ಮುಂದೆ ಚಲಿಸಬಲ್ಲದು, ಹಿಂದಕ್ಕೆ ಚಲಿಸಬಲ್ಲದು!, ಕೆಳಕ್ಕೆ ಚಲಿಸಬಲ್ಲದು!, ಮೇಲಕ್ಕೆ ಚಲಿಸಬಲ್ಲದು!, ಅಷ್ಟೇ ಅಲ್ಲ, ಥೇಟ್ ಹೆಲಿಕ್ಯಾಪ್ಟರ್ನಂತೆ ಗಾಳಿಯಲ್ಲಿ ಹಾರುತ್ತಾ ಒಂದೇ ಕಡೆ ಸ್ಥಿರವಾಗಿ ನಿಮಿಷಗಳ ಕಾಲ ನಿಲ್ಲಬಲ್ಲದು!! ಪ್ರಪಂಚದಲ್ಲಿ ಗಾಳಿಯಲ್ಲಿ ಹಾರಾಡುತ್ತಾ ಹಿಂದಕ್ಕೆ ಚಲಿಸಬಲ್ಲ ಏಕೈಕ ಹಕ್ಕಿ ಇದು!! ಈ ಹಕ್ಕಿಯ ಭುಜ ಮತ್ತು ರೆಕ್ಕೆ ಆರಂಭವಾಗುವ ಮೂಳೆಗಳು ಹಕ್ಕಿಯ ದೇಹಕ್ಕೆ ಅತ್ಯಂತ ಹತ್ತಿರದಲ್ಲಿ ಅಂಟಿಕೊಂಡಂತೆ ಇರುವುದರಿಂದಲೇ ಗಾಳಿಯಲ್ಲಿ ಅಷ್ಟೊಂದು ಲೀಲಾಜಾಲವಾಗಿ, ತನಗೆ ಬೇಕಾದಂತೆ ಹಾರಾಟ ಮಾಡಲು ಸಾಧ್ಯವಾಗಿರುವುದು. ಹಾರಾಟಕ್ಕೆ ತಕ್ಕಂತೆ ಅದರ ರೆಕ್ಕೆಗಳೂ ಬೆಳೆದಿವೆ. ವಿಚಿತ್ರವೆಂದರೆ, ಹಮ್ಮಿಂಗ್ ಬರ್ಡ್ನ ರೆಕ್ಕೆಗಳು ಅದರ ದೇಹಕ್ಕಿಂತಲೂ ಉದ್ದವಿದೆ; ಮೂರು ಇಂಚು ಉದ್ದವಿರುವ ಹಕ್ಕಿಗೆ ಸುಮಾರು ನಾಲ್ಕು ಇಂಚು ಉದ್ದದ ರೆಕ್ಕೆಗಳಿರುತ್ತವೆ!!

ಕೊಕ್ಕಿನ ವಿಚಾರದಲ್ಲೂ ಈ ಹಕ್ಕಿಗಳು ವಿಚಿತ್ರ. ಎಲ್ಲ ಹಕ್ಕಿಗಳ ರೀತಿಯ ಕೊಕ್ಕು ಇವುಗಳದ್ದಲ್ಲ. ಹಮ್ಮಿಂಗ್ ಬರ್ಡ್ನ ಕೊಕ್ಕು ಬಲಿಷ್ಟ ಇಂಜಕ್ಷನ್ ಸಿರಿಂಗ್ನಂತೆ ಚೂಪಾಗಿ ಇರುತ್ತದೆ. ಬೇರೆ ಹಕ್ಕಿಗಳ ಕೊಕ್ಕಿಗೆ ಹೋಲಿಸಿದರೆ ಇವುಗಳ ಕೊಕ್ಕು ದೇಹ ಪ್ರಮಾಣಕ್ಕಿಂತ ಬಹು ಉದ್ದ. ನಾಲಗೆ ಸುರುಳಿಯಾಕಾರವಾಗಿದ್ದು, ಹಾವಿನ ನಾಲಗೆಯಂತೆ ಸಿರಿಂಜ್ನಂತಹ ಕೊಕ್ಕಿನಿಂದ ಆಗಾಗ ಹೊರಗೆ ಇಣುಕುತ್ತದೆ. ವಿಶೇಷವೆಂದರೆ, ನಾಲಗೆಯ ತುದಿಯಲ್ಲಿ ಅತಿ ಸೂಕ್ಷ್ಮವಾದ ಕೂದಲಗಳಿದ್ದು ಇದ್ದು, ಹೂವಿನ ಮಕರಂದವನ್ನು ಬಾಚಿ ನೆಕ್ಕಲು ಇದು ಸಹಾಯಕಾರಿಯಾಗಿದೆ. ಈ ನಾಲಿಗೆ ಪ್ರತೀ ಸೆಕೆಂಡ್ಗೆ ಹದಿಮೂರು ಬಾರಿ- ಎಂದರೆ ಪ್ರಚಂಡ ವೇಗದಲ್ಲಿ- ಹೂವಿನ ಮಕರಂದವನ್ನು ನೆಕ್ಕಬಲ್ಲದು!!

ಹಮ್ಮಿಂಗ್ ಬರ್ಡ್ನ ಇನ್ನೊಂದು ವಿಶೇಷತೆ ಅಡಗಿರುವುದು, ಅದರ ಬಕಾಸುರನ ಹಸಿವು ಮತ್ತು ಅದನ್ನೂ ಮೀರಿಸಿದ ಅದರ ಜೀರ್ಣಶಕ್ತಿಯಲ್ಲಿ. ಪಿಂಗ್ಪಾಂಗ್ ಚೆಂಡಿನ ಗಾತ್ರದ ಹಮ್ಮಿಂಗ್ಬರ್ಡ್ ಬರ್ಡ್ ಪ್ರತಿ ದಿನ ತನ್ನ ದೇಹ ತೂಕದ ಒಂದೂವರೆ ಪಟ್ಟು ಮಕರಂದವನ್ನು ಕುಡಿಯುತ್ತದೆ! ಇನ್ನೂ ಸುಲಭವಾಗಿ ಹೇಳಬೇಕೆಂದರೆ, ಈ ಹಕ್ಕಿಗಳ ಜೀರ್ಣಕ್ರಿಯೆ ಆನೆಯ ಜೀರ್ಣಕ್ರಿಯೆಗಿಂತ ನೂರು ಪಟ್ಟು ಅಧಿಕ! ಈ ಪುಟ್ಟ ಹಕ್ಕಿಗೆ ಇದೇಕೆ ಹೀಗೆ ರಾಕ್ಷಸ ಜೀರ್ಣ ಶಕ್ತಿ ಎನ್ನುತ್ತೀರಾ? ಕಾರಣವಿದೆ, ಹಮ್ಮಿಂಗ್ಬರ್ಡ್ ನೋಡಲು ಅತ್ಯಂತ ಚಿಕ್ಕ ಪಕ್ಷಿಯಾದರೂ, ಅದರ ಹಾರಾಟದ ಪ್ರಚಂಡ ವೇಗ, ಹಾರಾಟಕ್ಕೆ ಬೇಕಾದ ರೆಕ್ಕೆಗಳ ಅನೂಹ್ಯ ವೇಗದ ಬೀಸುವಿಕೆಗೆ ಅಗಾಧವಾದ ಶಕ್ತಿ ಬೇಕಾಗುತ್ತದೆ. ಜೊತೆಗೆ ಕಿರೀಟಕ್ಕೊಂದು ತುರಾಯಿ ಸಿಕ್ಕಿಸಿದಂತೆ, ಹಮ್ಮಿಂಗ್ಬರ್ಡ್ನ ಹೃದಯ ಬಡಿತದ ವೇಗವನ್ನು ಕೇಳಿದರಂತೂ ಬೆಚ್ಚಿ ಬೀಳುತ್ತೀರಿ! ವಿಶ್ರಾಂತಿ ವೇಳೆಯಲ್ಲಿ ಈ ಹಕ್ಕಿಯ ಹೃದಯ ಬಡಿತ ನಿಮಿಷಕ್ಕೆ ಕನಿಷ್ಟ ಇನ್ನೂರೈವತ್ತು ಬಾರಿ!! ಅದೇ ಹಕ್ಕಿ ಹಾರಾಡುತ್ತಿರುವಾಗ, ಡೈ ಹೊಡೆಯಬೇಕಾದ ಪರಿಸ್ಥಿತಿ ಬಂದಾಗ ಹೃದಯ ಬಡಿತ ನಿಮಿಷಕ್ಕೆ ಸಾವಿರದ ಇನ್ನೂರು ಬಾರಿ!!! ಹಮ್ಮಿಂಗ್ಬರ್ಡ್ನ ಈ ಒಂದು ನಿಮಿಷದ ಬಡಿತವನ್ನು ಮನುಷ್ಯನ ಹೃದಯಕ್ಕೆ ಬಡಿಯಲು ಸುಮಾರು ಹದಿನೇಳು ನಿಮಿಷಗಳು ಬೇಕಾಗಬಹುದು!! ಹಕ್ಕಿಯ ಈ ಎಲ್ಲಾ ಚಟುವಟಿಕೆಗೆ ಬಹಳ ಶಕ್ತಿ ವ್ಯಯವಾಗುವುದರಿಂದ, ಆ ಶಕ್ತಿಯನ್ನು ಪಡೆಯಲು ಹಕ್ಕಿಯ ಹಸಿವೆಯ ಶಕ್ತಿ ಜೊತೆಗೆ ಜೀರ್ಣ ಶಕ್ತಿಯೂ ನೂರ್ಮಡಿಯಾಗಿರಲೇಬೇಕಲ್ಲವೆ? ಪ್ರಕೃತಿಯೆಂಬ ಅದೃಶ್ಯ ಕಲಾಕಾರನ ಕೈಚಳಕವನ್ನು ಕಲ್ಪಿಸಿಕೊಂಡರೇ ಮೈ ಝುಂ ಎನ್ನುತ್ತದೆ!

ಪ್ರಪಂಚದ ಜೀವಿ ಸೃಷ್ಠಿಯಲ್ಲಿ ಸಾಮಾನ್ಯವಾಗಿ ಗಂಡು ಜೀವಿ ಹೆಚ್ಚಾಗಿ ಹೆಣ್ಣು ಜೀವಿಗಿಂತ ದೈಹಿಕವಾಗಿ ದೊಡ್ಡದು ಮತ್ತು ಬಲಿಷ್ಠ. ಆದರೆ, ವಿಧವೆ ಜೇಡ, ಆನಕೊಂಡಾ ಮೊದಲಾದ ಜೀವಿಗಳಲ್ಲಿ ಇದು ತದ್ವಿರುದ್ಧ. ಹಮ್ಮಿಂಗ್ಬರ್ಡ್ ಕೂಡಾ ಇದೇ ಜಾತಿಗೆ ಸೇರಿದ್ದು. ಗಂಡುಹಕ್ಕಿಗಿಂತ ಹೆಣ್ಣು ದೈಹಿಕವಾಗಿ ಬಲಶಾಲಿ ಮತ್ತು ಗಾತ್ರದಲ್ಲಿ ದೊಡ್ಡದು. ಮೊಟ್ಟೆಗಳನ್ನು ಇಡುವುದಕ್ಕೆ ಮತ್ತು ಅವುಗಳಿಗೆ ಕಾವು ಕೊಡುವುದಕ್ಕೆ ಗಂಡಿಗಿಂತ ಹೆಣ್ಣು ಹೆಚ್ಚು ಶಕ್ತಿಶಾಲಿ ಆಗಿರಲೇಬೇಕಿರುವ ಈ ಪುಟ್ಟ ಹಕ್ಕಿಗಳ ವಿಚಾರದಲ್ಲಿ ಪ್ರಕೃತಿಯ ಜಾಣ್ಮೆ ಒಮ್ಮೊಮ್ಮೆ ನಮ್ಮನ್ನು ದಂಗು ಬಡಿಸುತ್ತದೆ. ಶೃಂಗಾರದ ವಿಚಾರದಲ್ಲಿ ಹಮ್ಮಿಂಗ್ಬರ್ಡ್ಗಳು ವಿರಕ್ತರ ಹಾಗೆ! ಮೂಲತಃ ಹಮ್ಮಿಂಗ್ಬರ್ಡ್ಗಳು ಒಂಟಿ ಹಕ್ಕಿಗಳು. ಗಂಡು-ಹೆಣ್ಣು ಒಂದಾದ ಮೇಲೆ, ಗೂಡು ಕಟ್ಟುವುದು, ಮೊಟ್ಟೆಗೆ ಕಾವು ಕೊಡುವುದು, ಮರಿಗಳಿಗೆ ರಕ್ಷಣೆ ನೀಡುವುದು- ಎಲ್ಲವೂ ಹೆಣ್ಣಿನ ಕೆಲಸ! ಗಂಡು ಹೆಸರಿಗೆ ಮಾತ್ರ ಅಪ್ಪ! ಬಹುತೇಕ ಒಮ್ಮೆಗೆ ಎರಡು ಮೊಟ್ಟೆಗಳನ್ನು ಇಟ್ಟು ಹೆಣ್ಣು ಹಕ್ಕಿ ಹನ್ನೊಂದರಿಂದ ರಿಂದ ಹದಿನಾರು ದಿನಗಳ ಕಾಲ ಕಾವು ನೀಡುತ್ತದೆ. ಹುಟ್ಟಿದ ಮರಿ ಸುಮಾರು ಅರ್ಧ ಗ್ರಾಂ ತೂಗುತ್ತವೆ. ಹುಟ್ಟಿದ ಇಪ್ಪತ್ತೊಂದು ದಿನಗಳ ನಂತರ ಹಾರಾಡಲು ಕಲಿಯುತ್ತವೆ.

ಪ್ರಪಂಚದ ಕೆಲವೇ ಬುದ್ಧಿಶಾಲಿ ಹಕ್ಕಿಗಳಲ್ಲಿ ಹಮ್ಮಿಂಗ್ಬರ್ಡ್ಗಳು ಕೂಡಾ ಒಂದು ಹೌದು! ತಾನು ಹಾರಾಡುವ ಪ್ರದೇಶದ ಪ್ರತೀ ಹೂವನ್ನೂ ಅವು ನೆನಪಿನಲ್ಲಿ ಇಟ್ಟುಕೊಳ್ಳಬಲ್ಲವು! ಪ್ರತಿಯೊಂದು ಜಾತಿಯ ಗಿಡದ ಹೂವಿನೊಳಗೆ ಒಮ್ಮೆ ಖಾಲಿಯಾದ ಮಕರಂದ ಪುನಃ ತುಂಬಲು ಎಷ್ಟು ಕಾಲ ಬೇಕಾಗುವುದೆಂಬ ಕರಾರುವಕ್ಕಾದ ಲೆಕ್ಕಾಚಾರವೂ ಇವುಗಳ ಪುಟ್ಟ ಮಿದುಳಿನಲ್ಲಿ ಮುದ್ರಿತವಾಗಿರುತ್ತದೆ! ಲೇಖನ ಮುಗಿಸುವ ಮೊದಲು ಹಮ್ಮಿಂಗ್ಬರ್ಡ್ನ ವಿಚಿತ್ರ ಸ್ವಭಾವವೊಂದನ್ನು- ಅದು ಪ್ರಕೃತಿದತ್ತವೇ ಆಗಿದೆ- ಇಲ್ಲಿ ಉಲ್ಲೇಖಿಸುವುದು ಸೂಕ್ತ. ಸದಾ ಪಾದರಸದಂತೆ ಚಟುವಟಿಕೆಯಲ್ಲಿರುವ ಈ ಹಕ್ಕಿಗಳು ಕೆಲವೊಮ್ಮೆ ‘ಟಾರ್ಪರ್’ (Torpor) ಎಂಬ ಅಸಾಮಾನ್ಯ ನಿದ್ರಾ ಸ್ಥಿತಿಗೆ ಬೀಳುತ್ತವೆ. ಇದನ್ನು ನಾವು ಕೋಮಾ ಸ್ಥಿತಿಗೆ ಹತ್ತಿರವಾದ (ಆದರೆ ಅದು ಕೋಮಾ ಸ್ಥಿತಿ ಅಲ್ಲ) ಸ್ಥಿತಿ ಎನ್ನಬಹುದೇನೊ. ಈ ಘಟ್ಟದಲ್ಲಿ ಹಕ್ಕಿಯು ಸಂಪೂರ್ಣವಾಗಿ ಉಸಿರಾಟವನ್ನೇ ನಿಲ್ಲಿಸಿದ ಹಾಗೆ ಕಾಣುತ್ತದೆ. ಪ್ರಚಂಡ ವೇಗದಲ್ಲಿ ಬಡಿದುಕೊಳ್ಳುವ ಅದರ ಹೃದಯ ಕೂಡಾ ನಿಮಿಷಕ್ಕೆ ಐವತ್ತಕ್ಕೆ ಇಳಿಯುತ್ತದೆ. ದೇಹದ ಉಷ್ಣತೆ ಗಣನೀಯವಾಗಿ ಇಳಿಯುತ್ತದೆ. ಜೊತೆಗೆ ಹಕ್ಕಿಯ ಪಚನಕ್ರಿಯೆ ಅದರ ಎಚ್ಚರದ ಸ್ಥಿತಿಯ ಹದಿನೈದನೇ ಒಂದು ಭಾಗದಷ್ಟು ಇಳಿಯುತ್ತದೆ. ಈ ರೀತಿ ಹಮ್ಮಿಂಗ್ಬರ್ಡ್ ಟಾರ್ಪರ್ ಸ್ಥಿತಿಗೆ ಹೋಗುವುದರಿಂದ ಹಕ್ಕಿ ತನ್ನ ದೇಹದ ಶೇಕಡಾ ಅರವತ್ತರಷ್ಟು ಶಕ್ತಿಯನ್ನು ಉಳಿತಾಯ ಮಾಡುತ್ತದೆ! ಈ ನಿದ್ರೆ ಸುಮಾರು ಇಪ್ಪತ್ತು ನಿಮಿಷಗಳಿಂದ ಒಂದು ಗಂಟೆಯವರೆಗೂ ಮುಂದುವರಿಯಬಹುದು. ಈ ಸ್ಥಿತಿಯಲ್ಲಿ ಹಕ್ಕಿಯನ್ನು ಹಿಡಿದರೂ ಕೂಡಾ ಅದು ಎಚ್ಚರವಾಗುವುದಿಲ್ಲ!!

ಇದನ್ನು ಬರೆಯುವಾಗ ನನಗನ್ನಿಸುವುದು, ಚಿಕ್ಕಂದಿನಲ್ಲಿ ದಾಸವಾಳದ ಹೂವಿನ ಮೇಲೆ ಹಾರುತ್ತಿದ್ದ ಹಕ್ಕಿಯನ್ನು ಹಿಡಿಯಲು ಸರ್ಕಸ್ ಮಾಡುತ್ತಿದ್ದ ನನಗೆ, ಆ ಸೂರಕ್ಕಿಯೂ ಹಮ್ಮಿಂಗ್ಬರ್ಡ್ನಂತೆ ಟಾರ್ಪರ್ ಸ್ಥಿತಿಗೆ ಹೋಗುತ್ತದೆ ಎಂಬ ವಿಚಾರ ಆ ಕಾಲದಲ್ಲೇ ತಿಳಿದಿದ್ದರೆ, ಅದು ಟಾರ್ಪರ್ ಸ್ಥಿತಿಯಲ್ಲಿ ಇರುವಾಗಲೇ ಆರಾಮವಾಗಿ ಹಿಡಿಯುತ್ತಿದ್ದೆ ಎಂಬ ಭರವಸೆ ನನ್ನಲ್ಲಿ ಉಂಟಾಗುತ್ತಿದೆ!! ಆದರೆ ನನ್ನ ಸಾಕುವ ನರಕಯಾತನೆಯನ್ನು ತಾಳಿಕೊಂಡು ಅದು ಬದುಕುತ್ತಿತ್ತೇ?, ಈ ಪ್ರಶ್ನೆಗೆ ಮಾತ್ರ ಉತ್ತರ ನೀಡಲಾರೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net