

ಜಬಲ್ಪುರ (ಮಧ್ಯಪ್ರದೇಶ): ಈಗಿನ ಕಾಲದಲ್ಲಿ ಗಂಡ-ಹೆಂಡತಿ ಇಬ್ಬರ ದುಡಿಮೆಯೂ ಅನಿವಾರ್ಯವಾಗಿದೆ. ಕೆಲವೊಮ್ಮೆ ಅನಿವಾರ್ಯ ಅಲ್ಲದಿದ್ದರೂ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೋ ಅಥವಾ ಸ್ವಂತ ದುಡಿಮೆ ಇರಬೇಕು ಎನ್ನುವ ಕಾರಣದಿಂದಲೋ ಮಹಿಳೆಯರೂ ನೌಕರಿಗೆ ಹೋಗುವುದು ಮಾಮೂಲು. ಇಂಥ ಸಂದರ್ಭಗಳಲ್ಲಿ ತಮ್ಮ ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು ಆಯಾಗಳನ್ನು ನೇಮಿಸಿಕೊಳ್ಳುತ್ತಾರೆ. ಆದರೆ ಇಂಥ ಪಾಲಕರು ಭಯ ಬೀಳುವಂಥ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಎರಡು ವರ್ಷದ ಕಂದಮ್ಮನ ಮೇಲೆ ಆಯಾ ಒಬ್ಬಳು ಅಮಾನುಷವಾಗಿ ನಡೆದುಕೊಳ್ಳುತ್ತಿರುವ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ. ಮಗುವನ್ನು ಮನಬಂದಂತೆ ಥಳಿಸುತ್ತಿರುವುದು ಇದರಿಂದ ತಿಳಿದು ಬಂದಿದೆ.
ಮುಖೇಶ್ ವಿಶ್ವಕರ್ಮ ದಂಪತಿಯ ಮಗು ರಜನಿ ಚೌಧರಿ ಎಂಬ ಆಯಾಳಿಂದ ದೌರ್ಜನ್ಯಕ್ಕೆ ಒಳಗಾಗಿರುವ ಆಘಾತಕಾರಿ ಘಟನೆ ಇದು. ಮುಖೇಶ್ ಅವರು ವಿದ್ಯುತ್ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಅವರ ಪತ್ನಿಯೂ ಉದ್ಯೋಗಸ್ಥೆ. ಈ ದಂಪತಿ ಎರಡು ತಿಂಗಳ ಹಿಂದೆ ರಜನಿ ಚೌಧರಿ ಎಂಬ ಆಯಾಳನ್ನು ಮಗು ನೋಡಿಕೊಳ್ಳಲು ನೇಮಿಸಿಕೊಂಡಿದ್ದರು.
ಮಗು ದಿನದಿಂದ ದಿನಕ್ಕೆ ಅನಾರೋಗ್ಯಪೀಡಿತವಾಗುವುದನ್ನು ಕಂಡ ದಂಪತಿಗೆ ಅನುಮಾನ ಬಂದು ಸಿಸಿಟಿವಿ ಪರಿಶೀಲಿಸಿದಾಗ ಹೌಹಾರಿ ಹೋಗಿದ್ದಾರೆ. ಮಗುವನ್ನು ಆಯಾ ಥಳಿಸುವುದು, ಕೂದಲು ಹಿಡಿದು ಎಳೆದಾಡಿದ್ದು, ಬಾತ್ ರೂಂನಲ್ಲಿ ಬೀಗ ಹಾಕಿ ಕೂಡಿ ಹಾಕಿರುವುದು, ಬೆನ್ನು ಮತ್ತು ಹೊಟ್ಟೆಗೆ ಬಲವಾಗಿ ಗುದ್ದುವುದು, ಹಾಸಿಗೆಯ ಮೇಲೆ ಕುಳಿತ ಅಮಾಯಕ ಮಗುವಿನ ಕತ್ತು ಹಿಸುಕುವುದು ಎಲ್ಲವೂ ಸಿಸಿಟಿವಿಯಲ್ಲಿ ದಾಖಲಾಗಿದೆ.
ಇದನ್ನು ಕಂಡು ಬೆಚ್ಚಿಬಿದ್ದಿರುವ ಪಾಲಕರು ಮಗುವನ್ನು ಆಸ್ಪತ್ರೆಗೆ ತೋರಿಸಿದಾಗ ಮಗುವಿನ ಕರುಳಿನಲ್ಲಿ ಸೋಂಕು ತಗುಲಿರುವುದು ಕಂಡಿದೆ. ಇದನ್ನು ನೋಡಿದ ಬಳಿಕ ಕೆಲಸದಿಂದ ತೆಗೆದುಹಾಕಲು ಪಾಲಕರು ಹೊರಟಿದ್ದಾರೆ. ಆದರೆ ಎಸ್‌ಟಿ/ಎಸ್‌ಸಿ ದೌರ್ಜನ್ಯ ಕಾಯ್ದೆಯಡಿ ಇಡೀ ಕುಟುಂಬವನ್ನು ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ದಂಪತಿ ದೂರಿದ್ದಾಳೆ.
ಆದರೂ ಜಗ್ಗದ ದಂಪತಿ, ಪೊಲೀಸರಿಗೆ ದೂರು ನೀಡಿ ಸಿಸಿಟಿವಿ ತೋರಿಸಿದ್ದಾರೆ.ರಜನಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ ಪೊಲೀಸರು. ಓಡಿ ಹೋಗಲು ಯತ್ನಿಸಿದಾಕೆಯನ್ನು ಹಿಡಿದು ಬಂಧಿಸಿದ್ದಾರೆ.