VIDEO: ಹಿಂದೂ ಹೆಸರು ಹೇಳಿ ಮದ್ವೆಯಾದ ವಿವಾಹಿತ ವಕೀಲ: ದುರ್ಗೆಯ ಹಚ್ಚೆ ನೋಡಿ ಮೋಸ ಹೋದಾಕೆಗೆ ನರಕ ದರ್ಶನ!

1353244
Published on

ನವದೆಹಲಿ: ಹಿಂದೂ ಯುವತಿಯರನ್ನು ಮೋಸದಿಂದ ಪ್ರೀತಿಯ ಬಲೆಗೆ ಬಲೆಗೆ ಬೀಳಿಸಿ ಅವರನ್ನು ಮತಾಂತರಗೊಳಿಸುವ ಘಟನೆಗಳು ಇನ್ನೂ ಮುಗಿದಿಲ್ಲ. ಲವ್​ ಜಿಹಾದ್​ ಹೆಸರಿನಲ್ಲಿ ನಡೆಯುತ್ತಿರುವ ಒಂದೊಂದೇ ಭಯಾನಕ ಘಟನೆಗಳು ಬೆಳಕಿಗೆ ಬರುತ್ತಿವೆ. ಅಂಥದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ.

ತಾನು ಹಿಂದೂ ಎಂದು ನಂಬಿಸಿ, ಹಿಂದೂ ಯುವತಿಯನ್ನು ಪ್ರೇಮದ ಪಾಶಕ್ಕೆ ಬೀಳಿಸಿ ಆಕೆಯನ್ನು ಮದುವೆಯಾದ ಮುಸ್ಲಿಂ ವಿವಾಹಿತನೊಬ್ಬನ ದೌರ್ಜನ್ಯವನ್ನು ಯುವತಿ ಇದೀಗ ಬಹಿರಂಗಗೊಳಿಸಿದ್ದಾಳೆ. ತನಗೆ ವಕೀಲನಾಗಿರುವ ಗಂಡ ನೀಡಿರುವ ಚಿತ್ರಹಿಂಸೆಗಳನ್ನು ಆಕೆ ಎಳೆಎಳೆಯಾಗಿದ್ದ ಬಿಚ್ಚಿಟ್ಟಿದ್ದಾಳೆ.


ದೆಹಲಿಯ ಜ್ಯೋತಿನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಕೀಲನಾಗಿದ್ದ ಇರ್ಷಾದ್ ಅಲಿ ಬಳಿ ಯುವತಿ ಕೆಲಸಕ್ಕೆ ಬಂದಿದ್ದಾಳೆ. ಆತ ತನ್ನ ಹೆಸರನ್ನು ಗುಡ್ಡು ಚೌಧರಿ ಎಂದು ಹೇಳಿಕೊಂಡಿದ್ದಾನೆ. ನಂತರ ಯುವತಿಯ ಬಳಿ ಪ್ರೇಮ ನಿವೇದನೆ ಮಾಡಿದ್ದಾನೆ. ಇದಾಗಲೇ ಮದುವೆಯಾಗಿ ಮಕ್ಕಳನ್ನೂ ಹೊಂದಿರುವ ಇರ್ಷಾದ್​, ಕೊಲೆ ಪ್ರಕರಣವೊಂದರ ಆರೋಪಿ ಕೂಡ.

ಆದರೆ ಇದಾವುದರ ಪರಿವೇ ಇಲ್ಲದ ಯುವತಿ ಆತನ ಪ್ರೇಮ ಪಾಶಕ್ಕೆ ಸಿಲುಕಿದ್ದಾಳೆ. ಸಾಲದು ಎಂಬುದಕ್ಕೆ ಇರ್ಷಾದ್​ ತಾನು ಹಿಂದೂ ಎಂದು ಯುವತಿಯನ್ನು ನಂಬಿಸುವ ಸಲುವಾಗಿ ಕೈ ಮೇಲೆ ದುರ್ಗಾಮಾತೆಯ ಹಚ್ಚೆಯನ್ನೂ ಹಾಕಿಸಿಕೊಂಡಿದ್ದ! ಆತನ ಬಣ್ಣಬಣ್ಣದ ಮಾತುಗಳನ್ನು ನಂಬಿ 2015ರಲ್ಲಿ ಮದುವೆಯನ್ನೂ ಮಾಡಿಕೊಂಡಿದ್ದಾಳೆ. ಮದುವೆಯಾದ ಮೇಲೆ ಗಂಡನ ನಿಜ ಬಣ್ಣ ತಿಳಿದಿದೆ. ಈತ ಹಿಂದೂ ಅಲ್ಲ ಮುಸ್ಲಿಂ ಎಂದು ತಿಳಿಯುವಷ್ಟರಲ್ಲಿ ಸಮಯ ಮೀರಿ ಹೋಗಿತ್ತು. ಈಕೆಯನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಲು ಇನ್ನಿಲ್ಲದ ಹಿಂಸೆ ಕೊಟ್ಟಿದ್ದಾನೆ ಇರ್ಷಾದ್​.

ಮತಾಂತರಗೊಳ್ಳುವಂತೆ, ದಿನವೂ ನಮಾಜ್​ ಮಾಡುವಂತೆ ಪತ್ನಿಯನ್ನು ಒತ್ತಾಯಿಸುತ್ತಿದ್ದ ಇರ್ಷಾದ್​ ಆಕೆಯನ್ನು ದೈಹಿಕವಾಗಿಯೂ ಹಿಂಸಿಸಿದ್ದಾನೆ. ಆಕೆಯನ್ನು  ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಿದ್ದಾನೆ. ಆತನಿಂದ ತಪ್ಪಿಸಿಕೊಂಡು ಬಂದ ಯುವತಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ನಂತರ ವಕೀಲ ಇರ್ಷಾದ್​ನನ್ನು ಬಂಧಿಸಿದ್ದಾರೆ.

ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಕೆಯ ಶರೀರದಲ್ಲಿ 28 ಜಾಗಗಳಲ್ಲಿ ಗಾಯಗಳಾಗಿದ್ದು ಮತ್ತು ಥಳಿಸಿದ್ದರಿಂದ ಅವಳ ಕಾಲಿನ ಮೂಳೆ ಮುರಿದಿರುವುದು ತಿಳಿದುಬಂದಿದೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net