

ಕರಾಚಿ: ಪಾಕಿಸ್ತಾನದಲ್ಲಿ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುವ ಕೃತ್ಯ ಮತ್ತೆ ಮುಂದುವರೆದಿದೆ. ಕರಾಚಿಯ ರಾಂಚೋರ್ ಲೈನ್ ಪ್ರದೇಶದಲ್ಲಿರುವ ಹಿಂದೂ ದೇಗುಲವೊಂದನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ. ಇಲ್ಲಿರುವ ಗರ್ಭಗುಡಿಯಲ್ಲಿದ್ದ ಜೋಗ್ ಮಾಯಾ(ದೇವಿ) ಮೂರ್ತಿಯನ್ನು ಸುತ್ತಿಗೆಯಿಂದ ಕುಟ್ಟಿ ಒಡೆದು ಹಾಕಲಾಗಿದೆ.
ಈ ಕುರಿತು ಖುದ್ದು ಪಾಕಿಸ್ತಾನದ ಉರ್ದು ಚಾನಲ್ ವರದಿ ಮಾಡಿದೆ. ಈ ಸುದ್ದಿ ಹರಡುತ್ತಲೇ ಧ್ವಂಸ ಮಾಡಿದ ವ್ಯಕ್ತಿಗಳನ್ನು ಖುದ್ದು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈತನ ವಿರುದ್ಧ ಧರ್ಮ ನಿಂದನೆ ಕೇಸ್‌ಗಳು ದಾಖಲಾಗಿವೆ.
ಅಕ್ಟೋಬರ್ನಲ್ಲಿ ಸಿಂಧ್ ಪ್ರಾಂತ್ಯದಲ್ಲಿರುವ ಹನುಮಾನ್ ದೇವಿ ಮಠ ಮಂದಿರವನ್ನು ದುಷ್ಕರ್ಮಿಗಳು ಅಪವಿತ್ರಗೊಳಿಸಿದ್ದರು. ಮಂದಿರದ ಬೀಗ ಮುರಿದು ನಗದು, ಆಭರಣಗಳನ್ನು ಕಳವು ಮಾಡಿದ್ದರು. ದೇವಿಯ ಕುತ್ತಿಗೆಯಲ್ಲಿದ್ದ ಬೆಳ್ಳಿ ನೆಕ್ಲೆಸ್ನ್ನು ಕೂಡ ಕಳವು ಮಾಡಿದ್ದರು. ಕಾಣಿಕೆ ಡಬ್ಬವನ್ನು ಹೊತ್ತೊಯ್ದಿದ್ದರು. ಆಗಸ್ಟ್ನಲ್ಲಿ ರಹೀಮ್ ಖಾನ್ ಯಾರ್ ಖಾನ್ ಜಿಲ್ಲೆಯಲ್ಲಿರುವ, ಭೋಂಗ್ ನಗರದಲ್ಲಿದ್ದ ಈ ಸಿದ್ಧಿವಿನಾಯಕ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿತ್ತು. ವಿಗ್ರಹವನ್ನು ಗರ್ಭಗುಡಿಯಿಂದ ತೆಗೆದು, ಅದನ್ನು ಬೆಂಕಿಯಿಂದ ಸುಟ್ಟಿದ್ದರು.
ಈ ಘಟನೆಯನ್ನು ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ತೀವ್ರವಾಗಿ ಖಂಡಿಸಿದ್ದಾರೆ. ಇದು ಅಲ್ಲಿನ ಸರ್ಕಾರ ಬೆಂಬಲಿತ ಕೃತ್ಯವಾಗಿದೆ. ಧ್ವಂಸಗೊಳಿಸಿರುವ ದೇವಸ್ಥಾನವಿದ್ದ ಜಾಗ ಪೂಜಾ ಸ್ಥಳವಾಗಲು ಯೋಗ್ಯವಾದುದ್ದಲ್ಲ ಎಂದು ಅದನ್ನು ನಾಶ ಮಾಡಿದವರು ಸಮರ್ಥನೆ ಬೇರೆ ಮಾಡಿಕೊಳ್ಳುತ್ತಿದ್ದಾರೆ. ಇದು ಅಲ್ಪಸಂಖ್ಯಾತರ ವಿರುದ್ಧ ಪಾಕಿಸ್ತಾನ ಸರ್ಕಾರ ಬೆಂಬಲಿತ ಭಯೋತ್ಪಾದನೆ ಎಂದು ಅವರು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋಗಳು ಇಲ್ಲಿವೆ ನೋಡಿ: