

ರಾಯ್ಪುರ್ (ಛತ್ತೀಸ್ಗಢ): ಛತ್ತೀಸಗಢದ ರಾಯ್ಪುರದ ಸ್ಟಾರ್ ಹೋಟೆಲ್ ಮೇಲೆ ದಾಳಿ ನಡೆಸಿರುವ ಅಪರಾಧ ನಿಗ್ರಹ ಮತ್ತು ಸೈಬರ್ ಘಟಕದ ಸಿಬ್ಬಂದಿ ಹೈ ಪ್ರೊಫೈಲ್ ವೇಶ್ಯಾವಾಟಿಕೆ ನಡೆಸುತ್ತಿರುವುದನ್ನು ಬಯಲಿಗೆ ಎಳೆದಿದ್ದಾರೆ. ಈ ಘಟನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬೆಂಗಳೂರಿನ ಯುವತಿ ಸೇರಿದಂತೆ 11 ಮಂದಿ ಯುವತಿಯರು ಹಾಗೂ ಒಬ್ಬ ಕಿಂಗ್ಪಿನ್ನನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಯುವತಿ ಹೊರತುಪಡಿಸಿ ಉಳಿದವರು ನೇಪಾಳ, ಮುಂಬೈ, ದೆಹಲಿ, ಗುಜರಾತ್ ಮೂಲದವರು ಎಂದು ತಿಳಿದುಬಂದಿದೆ. ಇವರ ಸ್ಮಾರ್ಟ್ಫೋನ್ಗಳನ್ನು ತನಿಖೆಗೆ ಒಳಪಡಿಸಿದಾಗ ಪೊಲೀಸರೇ ಶಾಕ್ ಆಗಿದ್ದಾರೆ. ಇದಕ್ಕೆ ಕಾರಣ, ಬೆಂಗಳೂರಿನ ಯುವತಿ ಸೇರಿದಂತೆ ಬಹುತೇಕ ಯುವತಿಯರ ಫೋನ್ನಲ್ಲಿ ದೊಡ್ಡ ದೊಡ್ಡ ರಾಜಕಾರಣಿಗಳ ಹೆಸರು ಸೇವ್ ಆಗಿದ್ದು, ಅವರಿಗೆ ಈ ಯುವತಿಯರು ಕರೆ ಮಾಡಿರುವುದು ತಿಳಿದುಬಂದಿದೆ. ಆದರೆ ಸದ್ಯ ತನಿಖೆಯ ಹಂತದಲ್ಲಿರುವ ಕಾರಣ, ಯಾರ ಹೆಸರನ್ನೂ ಪೊಲೀಸರು ಬಹಿರಂಗಪಡಿಸಲಿಲ್ಲ.
ಹೋಟೆಲ್ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಪೊಲೀಸ್ ಇಲಾಖೆಗೆ ದೂರು ಬಂದಿತ್ತು. ಅದರ ಅನ್ವಯ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೋಸ್ಕರ ಎಸ್ಎಸ್ಪಿ ಅಭಿಷೇಕ್ ಮಹೇಶ್ವರಿ ಸೂಚನೆ ಮೇರೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಹೋಟೆಲ್ ಮೇಲೆ ದಾಳಿ ನಡೆಸಿದಾಗ ದಂಧೆ ನಡೆಯುತ್ತಿರುವುದು ಕಂಡು ಬಂದಿದೆ. ಬಂಧಿತ ಯುವತಿಯರ ಚಾಟ್ ಸಂದೇಶ ಹಾಗೂ ಕರೆ ಮಾಡಿದ ದಾಖಲೆಗಳನ್ನು ಸಂಗ್ರಹಿಸಲಾಗಿದ್ದು, ಇವುಗಳಲ್ಲಿ ರಾಜಕಾರಣಿಗಳ ಹೆಸರು ಇರುವುದು ತಿಳಿದುಬಂದಿದೆ ಎಂದಿದ್ದಾರೆ ಪೊಲೀಸರು.
ಈ ದಂಧೆಯಲ್ಲಿ ಭಾಗಿಯಾಗಿರುವ ಯುವತಿಯರು ಅನೇಕ ರಾಜಕೀಯ ನಾಯಕರೊಂದಿಗೆ ಸಂಪರ್ಕ ಹೊಂದಿರುವುದು ಮೊಬೈಲ್ ಫೋನ್ನಿಂದ ಪತ್ತೆಯಾಗಿದೆ. ಸದ್ಯ ಯಾರ ಹೆಸರನ್ನೂ ಬಹಿರಂಗಪಡಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)