ಹೈದರಾಬಾದ್‌ನಲ್ಲಿ ಸಂಚಲನ ಸೃಷ್ಟಿಸಿದ್ದ ಇಸ್ಪಿಟ್‌ ದಂಧೆ: ಪ್ರಖ್ಯಾತ ನಟ ನಾಗಶೌರ್ಯ ತಂದೆಯೇ ಕಿಂಗ್‌ಪಿನ್‌!

nagashourya
Published on

ಹೈದರಾಬಾದ್: ಹೈದರಾಬಾದ್ ಹೊರ ವಲಯದ ಮಂಚಿರೇವಾ ಪ್ರದೇಶದಲ್ಲಿ ಇಸ್ಪೀಟ್ ಅಡ್ಡೆ ನಡೆಸುತ್ತಿದ್ದ ಆರೋಪದ ಮೇರೆಗೆ ಟಾಲಿವುಡ್‌ನ ಸುಪ್ರಸಿದ್ಧ ನಟ ನಾಗಶೌರ್ಯ ಅವರ ತಂದೆಯನ್ನು ಬಂಧಿಸಲಾಗಿದೆ.

ಈ ಭಾಗದಲ್ಲಿ ಇಸ್ಪಿಟ್‌ ಜೂಜು ಭಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅದರ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ನಿನ್ನೆ ದಾಳಿ ಮಾಡಿದ್ದಾರೆ. ಎರಡು ವಾರಗಳ ಹಿಂದೆ ಹೈದರಾಬಾದ್​ನ ಹೊರ ವಲಯದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ವರದಿ ಆಗಿತ್ತು. ಆಗ ದಾಳಿ ಮಾಡಿದ್ದ ಪೊಲೀಸರು ಕೆಲವರನ್ನು ಬಂಧಿಸಿದ್ದರು. ಈ ಪ್ರಕರಣದ ಆಳಕ್ಕೆ ಹೋದಾಗ ಈ ಫಾರ್ಮ್​ ಹೌಸ್​ ನಟ ನಾಗಶೌರ್ಯ ತಂದೆ ಶಿವಲಿಂಗ ಪ್ರಸಾದ್​ಗೆ ಸೇರಿದ್ದು ಎಂಬುದು ತಿಳಿದು ಬಂದಿದೆ. ಈ ಅಕ್ರಮ ಚಟುವಟಿಕೆ ಹಿಂದೆ ಅವರ ಪಾತ್ರ ಕೂಡ ಇರುವ ಬಗ್ಗೆ ಅನುಮಾನ ಬಂದ ನಂತರದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವರು ಕ್ಯಾಸಿನೊ ಕಿಂಗ್‍ಪಿನ್ ಗುಟ್ಟಾ ಸುಮನ್ ಜೊತೆ ಇಸ್ಪೀಟ್ ಆಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಸ್ಪೀಟ್ ಅಡ್ಡೆ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಪಿಡಿ ಕಾಯ್ದೆಯಡಿ (ಅಪಾಯಕಾರಿ ಚಟುವಟಿಕೆಗಳ ನಿಯಂತ್ರಣ ಕಾಯ್ದೆ) ಕೇಸ್ ದಾಖಲಾಗಿದ್ದು ತೆಲಂಗಾಣ ಅಪರಾಧ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಎನ್ನಲಾಗಿದೆ. ಇದಾಗಲೇ ಈ ಪ್ರಕರಣದಲ್ಲಿ ಸುಮಾರು 30 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ ಗಣ್ಯ ವ್ಯಕ್ತಿಗಳಾಗಿದ್ದು, ಜೂಜಿನ ಜತೆ ಮದ್ಯಸೇವನೆ, ಭೋಜನ ಕೂಟ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಸದ್ಯ ಶಿವಲಿಂಗ ಪ್ರಸಾದ್ ಅವರನ್ನು ಹೈದರಾಬಾದ್‌ನ ಉಪ್ಪಾರಪಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇವರ ವಿರುದ್ಧ ಇದಾಗಲೇ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಸದ್ಯ ಅವರಿಗೆ ಕೋರ್ಟ್‌ ಜಾಮೀನು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net