ಬಾಲಿವುಡ್‌ ಬಾದ್‌ಷಾನೇ ನನ್ನ ಹೀರೋ: ಬೆಳ್ಳಿತೆರೆಯ ಮೇಲೆ ಮಿಂಚುವ ಆಸೆ ಮಿಸ್‌ ಯೂನಿವರ್ಸ್‌ಗೆ

harnaz
Published on

ಮುಂಬೈ: ಎರಡು ದಶಕಗಳ ನಂತರ ಭಾರತಕ್ಕೆ ಭುವನ ಸುಂದರಿ ಕಿರೀಟ ತಂದುಕೊಟ್ಟ ಹರ್ನಾಜ್‌ ಸಂಧು ಅವರು ಬಾಲಿವುಡ್‌ನಲ್ಲಿ ಮಿಂಚುವ ಆಸೆ ವ್ಯಕ್ತಪಡಿಸಿದ್ದಾರೆ. ತಾವೂ ಸಿನಿಮಾದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಅಭಿಲಾಷೆ ಹೊಂದಿರುವ ನಟಿ, ಹಾಗೊಂದು ವೇಳೆ ತಾವು ನಟಿಯಾದರೆ ಯಾರು ತಮ್ಮ ಹೀರೋ ಆಗಿರಬೇಕು ಎಂದು ಹೇಳಿದ್ದಾರೆ.

ನನಗೂ ಸಿನಿಮಾದಲ್ಲಿ ನಟಿಸುವ ಆಸೆ. ಬಾಲಿವುಡ್‌ನಲ್ಲಿ ಅವಕಾಶ ಸಿಗುತ್ತದೆಯೋ ಎಂದು ಗೊತ್ತಿಲ್ಲ. ಮುಂದಿನ ದಿನಗಳ ಬಗ್ಗೆ ನನಗೆ ತಿಳಿದಿಲ್ಲ. ಯಾಕೆಂದರೆ ನಾನು ಬದುಕಿನ ಬಗ್ಗೆ ಯಾವ ಯೋಜನೆಗಳನ್ನೂ ಹಾಕಿಕೊಳ್ಳದ ವ್ಯಕ್ತಿ. ಅವಕಾಶ ಸಿಕ್ಕರೆ ಮಾತ್ರ ಬಾಲಿವುಡ್‌ಗೆ ಬರುವೆ. ಇದು ನನ್ನ ಕನಸು ಕೂಡ ಹೌದು ಎನ್ನುವ ಮೂಲಕ ತಮ್ಮ ನೆಚ್ಚಿನ ಹೀರೋ ಬಗ್ಗೆ ಬಹಿರಂಗಪಡಿಸಿದ್ದಾರೆ.

ಬಾಲಿವುಡ್ ಬಾದ್‌ಷಾ ಎಂದು ಕರೆಸಿಕೊಳ್ಳುವ ನಟ ಶಾರುಖ್‌ ಖಾನ್‌ ನನ್ನ ಹೀರೋ ಆಗಬೇಕು. ಅವರೊಂದಿಗೆ ನಟಿಸುವ ಕನಸು ಕಂಡಿದ್ದೇನೆ. ಅವರು ನನ್ನ ಫೆವರೆಟ್‌ ಹೀರೋ. ಹಾಗೆಯೇ ಬಾಲಿವುಡ್‌ನಲ್ಲಿ ನನ್ನ ಮೊದಲ ಸಿನಿಮಾವನ್ನು ಸಂಜಯ್‌ ಲೀಲಾ ಭನ್ಸಾಲಿ ನಿರ್ದೇಶಿಸಬೇಕು ಎಂಬ ಆಸೆಯಿದೆ ಎಂದಿದ್ದಾರೆ.

‘ನಟ ಶಾರುಖ್‌ ಖಾನ್‌ ಬಗ್ಗೆ ನನಗೆ ತುಂಬಾ ಗೌರವ ಮತ್ತು ಪ್ರೀತಿ ಇದೆ. ಸಿನಿಮಾ ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆ ಅಪಾರ. ಈಗಲೂ ಅವರಿಗೆ ಬಹಳ ಡಿಮಾಂಡ್‌ ಇದೆ. ಅವರು ಹಾರ್ಡ್‌ವರ್ಕ್ ಮಾಡುತ್ತಾರೆ. ಆದ್ದರಿಂದ ಅವರನ್ನು ಬಾಲಿವುಡ್‌ ಬಾದ್‌ಷಾ ಎಂದು ಎಲ್ಲರೂ ಕರೆಯುತ್ತಾರೆ ಎಂದು ತಮ್ಮ ನೆಚ್ಚಿನ ನಟನನ್ನು ಹಾಡಿ ಕೊಂಡಾಡಿದ್ದಾರೆ.

ಶಾರುಖ್‌ ಖಾನ್‌ ಅವರು ತುಂಬಾ ಪ್ರಸಿದ್ಧಿಗೆ ಬಂದಿದ್ದರೂ ಸಾಮಾನ್ಯ ವ್ಯಕ್ತಿಯಂತೆಯೇ ಇದ್ದಾರೆ ಮತ್ತು ಯಶಸ್ಸನ್ನು ತಲೆಗೇರಿಸಿಕೊಳ್ಳದೆ ಅದನ್ನು ಸೂಕ್ತವಾಗಿ ನಿರ್ವಹಿಸುತ್ತಾರೆ. ಅವರು ಪ್ರತಿ ಸಂದರ್ಶನದಲ್ಲಿ ಮಾತನಾಡುವ ರೀತಿಯೂ ನನ್ನನ್ನು ಪ್ರಭಾವಿತಗೊಳಿಸಿದೆ. ಅವರ ಆ್ಯಟಿಟ್ಯೂಡ್‌ ತುಂಬಾ ಗೌರವ ತರುವಂಥದ್ದು. ಅವರೊಬ್ಬ ಅದ್ಭುತ ಕಲಾವಿದ ಜತೆಗೆ ಅಷ್ಟೇ ಅದ್ಭುತ ಮನುಷ್ಯ ಕೂಡ ಎಂದಿದ್ದಾರೆ ಸಂಧು.

ಅಂದಹಾಗೆ ಸಂಧು ಅವರು, ಐದು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಸಿಕೊಂಡವರು. ನಟನೆಯ ಮೂಲಕವೂ ಜನರು ಮಹಿಳೆಯರ ಬಗ್ಗೆ ಹೊಂದಿರುವ ಒಂದೇ ರೀತಿಯ ಧೋರಣೆಯನ್ನು ಬದಲಾಯಿಸಲು ಸಾಧ್ಯವಿದೆ ಎನ್ನುವುದು ಅವರ ಅಭಿಮತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net