ಭೂಕಂಪಕ್ಕೆ ಮೃತ್ಯಕೂಪವಾದ ಹೈಟಿ: ಬೀದಿಬೀದಿಗಳಲ್ಲಿ ಹೆಣಗಳ ರಾಶಿ- ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಳ

haiti
Published on

ಜೆರೆಮಿ: ಪುಟ್ಟ ದೇಶವಾಗಿರುವ ಹೈಟಿಯಲ್ಲಿ ಪ್ರಬಲ ಭೂಕಂಪ ಉಂಟಾಗಿದ್ದು, ಇದರಲ್ಲಿ ಸಾವಿನ ಸಂಖ್ಯೆ 1200 ದಾಟಿದೆ. ಐದು ಲಕ್ಷಕ್ಕೂ ಅಧಿಕ ಮಂದಿ ನಿರ್ಗತಿಕರಾಗಿದ್ದು, ಬೀದಿಗೆ ಬಂದಿದ್ದಾರೆ. ಸಂಪೂರ್ಣ ದೇಶ ನಲುಗಿ ಹೋಗಿದೆ. ಪ್ರಧಾನಿ ಏರಿಯಲ್ ಹೆನ್ರಿ ಒಂದು ತಿಂಗಳ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ.

ಹೈಟಿ ರಾಜಧಾನಿ ಪೋರ್ಟ್-ಅವು-ಪ್ರಿನ್ಸ್​ನ ಪಶ್ಚಿಮಕ್ಕೆ 160 ಕಿಮೀ ದೂರದಲ್ಲಿ ಸಂಭವಿಸಿದ ಭೂಕಂಪದಿಂದ ವ್ಯಾಪಕ ಹಾನಿಯಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.2ರಷ್ಟು ದಾಖಲಾಗಿತ್ತು.

ಸುಮಾರು 2 ಲಕ್ಷ ಜನರು ವಾಸಿಸುವ ಜೆರೆಮಿ ನಗರದಲ್ಲಿ ಹೆಚ್ಚಿನ ಹಾನಿಯಾಗಿದ್ದು, ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಲೇ ಸಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಂತೆ ಪತ್ತೆಯಾಗುತ್ತಿರುವ ಶವಗಳ ಸಂಖ್ಯೆ ಹೆಚ್ಚುತ್ತಿದೆ. ಬಹುತೇಕ ಕಟ್ಟಡಗಳು ನೆಲಸಮವಾಗಿದ್ದು, ಇವುಗಳ ಅಡಿಗೆ ಸಿಲುಕಿರುವ ಜನರ ಮೃತದೇಹ ತೆರೆಯುವುದುದೇ ದೊಡ್ಡ ಸವಾಲಾಗಿದೆ.

ಹೈಟಿ ಅಧ್ಯಕ್ಷ ಜೊವೆನೆಲ್ ಮೋಯ್ಸ್​ ಅವರನ್ನು ಒಂದು ತಿಂಗಳ ಹಿಂದೆ ಅವರ ಮನೆಯಲ್ಲಿಯೇ ಬಂದೂಕುಧಾರಿಗಳು ಕೊಂದಿದ್ದರು. ಬಡತನ ಮತ್ತು ಗುಂಪು ಘರ್ಷಣೆಗಳಿಂದ ನಲುಗಿರುವ ಹೈಟಿ ದೇಶವು ಇನ್ನೂ ಅಧ್ಯಕ್ಷರ ಕೊಲೆಯ ಆಘಾತದಿಂದ ಚೇತರಿಸಿಕೊಂಡಿರಲಿಲ್ಲ. ಅಷ್ಟರಲ್ಲಿಯೇ ಭೀಕರ ಭೂಕಂಪ ಅಪ್ಪಳಿಸಿದೆ.

ಜೆರೆಮಿ ನಗರದಲ್ಲಿ ಭೂಕಂಪದ ತೀವ್ರತೆ ಹೆಚ್ಚಿದ್ದರೂ ಇಲ್ಲಿ ಜನರ ವಾಸ ಅಷ್ಟೊಂದು ಇರದ ಕಾರಣ, ಸಾವುನೋವಿನ ಪ್ರಮಾಣ ಕಡಿಮೆಯಾಗಿದೆ. ಲೆಸ್ ಕೆಯೆಸ್ ನಗರದಲ್ಲಿ ಬಹುಅಂತಸ್ತಿನ ಕಟ್ಟಡಗಳು ಹೆಚ್ಚಿದ್ದು, ಇಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ. ಇದರ ನಡುವೆಯೇ ಚಂಡಮಾರುತ ಬೀಸುವ ಮುನ್ಸೂಚನೆಯನ್ನೂ ಹವಾಮಾನ ಇಲಾಖೆ ನೀಡಲಾಗಿದ್ದು, ಜನರ ಸ್ಥಿತಿ ಅಯೋಮಯವಾಗಿದೆ.

ಅಮೆರಿಕ ಸೇರಿದಂತೆ ವಿಶ್ವದ ಹಲವು ದೇಶಗಳು ಹೈಟಿ ನೆರವಿಗೆ ಧಾವಿಸಿವೆ. 65 ತಜ್ಞರನ್ನು ಹೈಟಿಗೆ ಕಳುಹಿಸಿರುವ ಅಮೆರಿಕ ವಿಶೇಷ ಉಪಕರಣಗಳು ಹಾಗೂ ವೈದ್ಯಕೀಯ ನೆರವನ್ನು ಕಳುಹಿಸಿಕೊಟ್ಟಿದೆ. ಡೊಮಿನಿಕನ್ ರಿಪಬ್ಲಿಕ್ 10 ಸಾವಿರ ಮಂದಿಗೆ ಬೇಕಾಗುವಷ್ಟು ಆಹಾರ ಪದಾರ್ಥಗಳನ್ನು ಹಾಗೂ ಔಷಧಿರವಾನಿಸಿದೆ. ಕ್ಯೂಬಾ ಮತ್ತು ಈಕ್ವೆಡಾರ್ ದೇಶ ವೈದ್ಯಕೀಯ ಹಾಗೂ ರಕ್ಷಣಾ ಸಿಬ್ಬಂದಿಯನ್ನು ಕಳುಹಿಸಿಕೊಟ್ಟಿದೆ. ಮೆಕ್ಸಿಕೊ, ಚಿಲಿ, ಅರ್ಜಂಟೀನಾ, ಪರು ಮತ್ತು ವೆನೆಜುವೆಲಾ ದೇಶಗಳೂ ನೆರವು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net