ನಾನು ಜೀನ್ಸ್​ ಧರಿಸಿದ್ರೆ 4ನೇ ಮದ್ವೆಯಾಗ್ತೇನೆ ಎಂದು ಗಂಡನಿಂದ ಬೆದರಿಕೆ- ಪೊಲೀಸ್​ ಕಂಪ್ಲೇಂಟ್​

divorce
Published on

ಅಹಮದಾಬಾದ್: ದಂಪತಿ ನಡುವೆ ಚಿಕ್ಕಪುಟ್ಟ ವಿಷಯವೂ ವಿಕೋಪಕ್ಕೆ ಹೋಗಿ ವಿಚ್ಛೇದನವರೆಗೆ ಹೋಗಿರುವ ಸುದ್ದಿಗಳು ಮಾಮೂಲು. ಅದೇ ರೀತಿ ಇಲ್ಲೊಂದು ಪ್ರಕರಣದಲ್ಲಿ ಜೀನ್ಸ್​ ಕಾರಣಕ್ಕೆ ದಾಂಪತ್ಯ ಜೀವನ ಮುರಿಯುವ ಹಂತಕ್ಕೆ ಬಂದಿದೆ.

ಅಹಮದಾಬಾದ್​ನ ವೇಜಲ್​ಪುರದಲ್ಲಿ ಈ ಘಟನೆ ನಡೆದಿದ್ದು, ಪತಿ ರಹೀಮ್​ ವಿರುದ್ಧ ಪತ್ನಿ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾಳೆ. ಜೀನ್ಸ್ ಧರಿಸಿ ಕಚೇರಿಗೆ ಹೋದರೆ ವಿಚ್ಛೇದನ ನೀಡುವುದಾಗಿ ಪತಿ ಬೆದರಿಕೆ ಹಾಕುತ್ತಿದ್ದು, ಆತನ ಕುಟುಂಬದವರೂ ಗಂಡನಿಗೆ ಸಪೋರ್ಟ್​ ಮಾಡುತ್ತಿರುವುದಾಗಿ ಮಹಿಳೆ ದೂರಿದ್ದಾಳೆ.

ಸಂತ್ರಸ್ತ ಮಹಿಳೆಗಿದು ಎರಡನೇ ಮದುವೆಯಾಗಿದ್ದರೆ, ಆಕೆಯ ಪತಿ ರಹೀಂಗೆ ಇದು ಮೂರನೆಯ ಮದುವೆ. ಜೀನ್ಸ್​ ತೊಡುವ ಹೆಣ್ಣುಮಕ್ಕಳ ಬಗ್ಗೆ ತೀರಾ ಕೆಟ್ಟದಾಗಿ ಮಾತನಾಡುವ ತನ್ನ ಪತಿ, ನಾನು ಜೀನ್ಸ್​ ತೊಟ್ಟರೆ ಡಿವೋರ್ಸ್​ ಕೊಡುವುದಾಗಿ ಹೆದರಿಸುತ್ತಿದ್ದಾನೆ. ಇದರಿಂದ ನನ್ನ ಬದುಕೇ ದುಸ್ತರವಾಗಿದೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.

2017ರಲ್ಲಿ ಇವರಿಬ್ಬರ ಮದುವೆ ಆಗಿದೆ. ಮದುವೆಯಾದ ಮೊದಲ ಎರಡು ವರ್ಷಗಳಲ್ಲಿ ನಾವಿಬ್ಬರೂ ಸಂತೋಷವಾಗಿದ್ದೆವು. ನಾನು ಮದುವೆಗೆ ಮುಂಚೆ ಉದ್ಯೋಗ ಮಾಡುತ್ತಿದ್ದೆ. ಮದುವೆ ನಂತರವೂ ಅದನ್ನು ಮುಂದುವರೆಸುವುದಾಗಿ ಹೇಳಿದೆ. ಇದೇ ಕಾರಣಕ್ಕೆ ಮನೆಯನ್ನು ಬದಲಾಯಿಸಿದೆವು. ಉದ್ಯೋಗಕ್ಕೆ ಹೋಗುವ ವೇಳೆ ಜೀನ್ಸ್​ ಧರಿಸುತ್ತಿದ್ದೆ. ಆದರೆ ಪದೇ ಪದೇ ಎಲ್ಲರೂ ಸೇರಿ ನನಗೆ ಮಾನಸಿಕ ಹಿಂಸೆ ಕೊಡಲು ಶುರು ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಇದು ಪಿತೃಪ್ರಧಾನ ಸಮಾಜ. ಆದ್ದರಿಂದ ಗಂಡ ಏನು ಹೇಳುತ್ತಾನೋ ಹಾಗೆ ಕೇಳಬೇಕು ಎಂದು ಮಾವನೂ ಹಿಂಸೆ ನೀಡುತ್ತಿದ್ದಾರೆ. ಇದರಿಂದ ನನಗೆ ಯಾತನೆ ಆಗುತ್ತಿದೆ. ನನ್ನ ಗಂಡ ನಾಲ್ಕನೇ ಮದುವೆಯಾಗುವುದಾಗಿ ಹೆದರಿಸುತ್ತಿದ್ದಾನೆ ಎಂದು ಮಹಿಳೆ ದೂರಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net