ಮಹಿಳೆಯಾಗುವ ಮುನ್ನ ವೀರ್ಯ ಸಂರಕ್ಷಿಸಿಟ್ಟ ದ್ವಿಲಿಂಗಿ ವೈದ್ಯೆ: ಭವಿಷ್ಯದಲ್ಲಿ ಅಮ್ಮನಾಗುವ ಯೋಚನೆ

doctor
Published on

ಗಾಂಧಿನಗರ (ಗುಜರಾತ್‌): ದ್ವಿಲಿಂಗಿಯಿಂದ ಸಂಪೂರ್ಣ ಪ್ರಮಾಣದ ಮಹಿಳೆಯಾಗಬಯಸಿರುವ ವೈದ್ಯೆಯೊಬ್ಬಳು, ಶಸ್ತ್ರಚಿಕಿತ್ಸೆಗೂ ಮುನ್ನ ತಮ್ಮ ವೀರ್ಯ ಸಂರಕ್ಷಿಸಿ ಇಟ್ಟಿರುವ ಅಪರೂಪದ ಘಟನೆ ಗುಜರಾತ್‌ನಲ್ಲಿ ನಡೆದಿದೆ.

ಗುಜರಾತ್‌ನ ಮೊದಲ ದ್ವಿಲಿಂಗಿ (ಟ್ರಾನ್ಸ್‌ಜೆಂಡರ್‌)ವೈದ್ಯೆಯಾಗಿರುವ ಡಾ.ಜೆಸ್ನೂರ್ ದಯಾರಾ ಇಂಥದ್ದೊಂದು ನಿರ್ಧಾರಕ್ಕೆ ಬಂದಿದ್ದಾರೆ. ದ್ವಿಲಿಂಗವನ್ನು ಹೊಂದಿರುವ ಇವರು, ಇದೀಗ ಮಹಿಳೆಯಾಗಬಯಸಿದ್ದಾರೆ. ಆದರೆ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ಖುದ್ದಾಗಿ ಮಗುವನ್ನು ಹೆರಲು ಅವರಿಂದ ಸಾಧ್ಯವಿಲ್ಲ. ಆದ್ದರಿಂದಲೇ ಈ ನಿರ್ಧಾರಕ್ಕೆ ಬಂದಿರುವುದಾಗಿ ಜೆಸ್ನೂರ್‌ ಹೇಳಿದ್ದಾರೆ.

ಬಾಡಿಗೆ ತಾಯ್ತನದ ಮೂಲಕ ಮಗುವನ್ನು ತಾನು ಹೆರಲಿದ್ದೇನೆ ಎಂದಿದ್ದಾರೆ (ಬಾಡಿಗೆ ತಾಯಿ ಎಂದರೆ ವೀರ್ಯವನ್ನು ಅಂಡಾಣು ಜತೆ ಸೇರಿಸಿ ಬೇರೆ ಮಹಿಳೆಯೊಬ್ಬರ ಗರ್ಭದಲ್ಲಿ ಇರಿಸಿ ಆನಂತರ ಆ ಮಹಿಳೆ ಮಗುವನ್ನು ಹೆರಿ ಅದನ್ನು ಇವರಿಗೆ ನೀಡುವುದು). ಈ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೆ ಮುನ್ನ ಸೋಮವಾರ ನಾಲ್ಕು ಬಾಟಲುಗಳ ವೀರ್ಯವನ್ನು ಕ್ರಯೋಪ್ರೆಸರ್ವ್ ಮಾಡಿದ್ದಾರೆ.

25 ವರ್ಷದ ಜೆಸ್ನೂರ್ ರಷ್ಯಾದ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ ಗಳಿಸಿದ್ದಾರೆ. ಗೋಧ್ರಾದಲ್ಲಿ ಜನಿಸಿರುವ ಇವರು, ದ್ವಿಲಿಂಗಿಯಾಗಿದ್ದಾರೆ. ಪುರುಷನ ದೇಹದಲ್ಲಿ ಸಿಕ್ಕಿಬಿದ್ದ ಮಹಿಳೆಯಂತೆ ಒದ್ದಾಡುತ್ತಿದ್ದೇನೆ. ಆದ್ದರಿಂದ ಹೊರಕ್ಕೆ ಬರಲು ನಿರ್ಧರಿಸಿದ್ದೇನೆ. ಅದಕ್ಕಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಬಯಸಿದ್ದೇನೆ ಎಂದು ಇವರು ಹೇಳಿದ್ದಾರೆ.

ನಾನು ಮುಂದೆ ಮಹಿಳೆಯಾಗಲು ಬಯಸಿದ್ದೇನೆ. ಮೊದಲೆಲ್ಲಾ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಭಯಪಡುತ್ತಿದ್ದೆ. ಆದ್ದರಿಂದ ಖುದ್ದು ಈ ಬಗ್ಗೆ ಅಧ್ಯಯನ ಮಾಡಬೇಕೆಂದುಕೊಂಡು ವಿದೇಶಕ್ಕೆ ಡಾಕ್ಟರೇಟ್‌ ಕಲಿಯಲು ಹೋದೆ. ಈಗ ನನಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಭಯವಿಲ್ಲ. ತಾಯ್ತನದ ಸಂಪೂರ್ಣ ಸುಖವನ್ನು ನಾನು ಪಡೆಯಲು ಬಯಸಿದ್ದೇನೆ ಎಂದಿದ್ದಾರೆ.

“ಕಾಳಿ ದೇವಿಯು ನನಗೆ ಮಹಿಳೆಯಾಗಲು ಶಕ್ತಿಯನ್ನು ನೀಡಿದ್ದಾಳೆ. ಅದಕ್ಕಾಗಿ ನಾನು ತಾಯಿಯಾಗುವೆ. ತಾಯಿಯಾಗಲು ಮಗು ನನ್ನ ಗರ್ಭದಲ್ಲಿಯೇ ಹುಟ್ಟಬೇಕೆಂದೇನೂ ಇಲ್ಲ. "ಗರ್ಭಾಶಯವು ತಾಯಿಯನ್ನು ಮಾಡುವುದಿಲ್ಲ, ಪ್ರೀತಿಯ ಹೃದಯವು ಮಾಡುತ್ತದೆ" ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net