ಸರ್ಕಾರಿ ನೌಕರಿಯಲ್ಲಿ ರಾಜ್ಯದವರಿಗೆ ಮಾತ್ರ ಸ್ಥಾನ: ಹೀಗೆಂದ ಸಿಎಂ ಯಾರು ಗೊತ್ತಾ?

job
Published on

ಭೋಪಾಲ್: ಇನ್ನುಮುಂದೆ ರಾಜ್ಯದ ಜನರಿಗೆ ಮಾತ್ರ ರಾಜ್ಯ ಸರ್ಕಾರದ ನೌಕರಿಯಲ್ಲಿ ನೇಮಕ ಮಾಡಿಕೊಳ್ಳಲಾಗುವುದು...

ಹೀಗೆಂದು ಘೋಷಣೆ ಮಾಡಿರುವವರು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್. ಈ ಕುರಿತು ಹೇಳಿಕೆ ನೀಡಿರುವ ಸಿಂಗ್‌ ಅವರು, ಸರ್ಕಾರಿ ಉದ್ಯೋಗ ರಾಜ್ಯದ ಜನತೆಗೆ ಮಾತ್ರ ಮೀಸಲಿಡಲಾಗುವುದು. ಈ ಬಗ್ಗೆ ಶೀಘ್ರವೇ ಕಾನೂನು ರೂಪಿಸಲಾಗುವುದು ಎಂದಿದ್ದಾರೆ.

ಮೊನ್ನೆ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಭಾಷಣ ಮಾಡುವಾಗಲೂ ಹೇಳಿಕೆ ನೀಡಿದ್ದ ಮುಖ್ಯಮಂತ್ರಿಗಳು, ಮಧ್ಯಪ್ರದೇಶದಲ್ಲಿನ ಉದ್ಯೋಗದಲ್ಲಿ ಯುವಕರಿಗೆ ಆದ್ಯತೆ ನೀಡಲಾಗುವುದು. ಮಧ್ಯಪ್ರದೇಶ ಸರ್ಕಾರಿ ಉದ್ಯೋಗದಲ್ಲಿ ಯುವಕರಿಗೆ ಆದ್ಯತೆ. ನಮ್ಮ ರಾಜ್ಯದ ಯುವಕರಿಗೆ ಉದ್ಯೋಗ ಮೀಸಲಿಡುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದ್ದರು.

ಅದನ್ನೇ ಇದೀಗ ಕಾನೂನು ಮಾಡುವುದಾಗಿ ಹೇಳಿದ ಚೌಹಾಣ್‌ ಅವರು, ಮಧ್ಯಪ್ರದೇಶ ಸರ್ಕಾರ ಇಂದು ಮುಖ್ಯವಾದ ನಿರ್ಧಾರವನ್ನು ಕೈಗೊಂಡಿದೆ. ಮಧ್ಯಪ್ರದೇಶದಲ್ಲಿ ಕೇವಲ ರಾಜ್ಯದ ಯುವಕರಿಗೆ ಮಾತ್ರ ಸರ್ಕಾರಿ ಉದ್ಯೋಗ ನೀಡುವಂತೆ ಬೇಕಾದ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ. ಮಧ್ಯಪ್ರದೇಶದ ಯುವ ಸಂಪನ್ಮೂಲ ಮಧ್ಯಪ್ರದೇಶಕ್ಕೆ ಬಳಕೆಯಾಗಬೇಕು ಎಂದು ವಿಡಿಯೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಸಾವಿರಾರು ಮಂದಿ ಉದ್ಯೋಗ ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರ ಬಂದಿರುವುದು ರಾಜ್ಯದ ನಿರುದ್ಯೋಗಿಗಳಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಇದೇ ಸಮಯದಲ್ಲಿ ಕೆಲವರು ಇದಕ್ಕೆ ವಿರೋಧವನ್ನೂ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net