ಗ್ರಾಹಕರಿಗೆ ಅಡುಗೆ ಸಿಲಿಂಡರ್‌ ಬರೆ: ಪುನಃ ಗಗನಕ್ಕೇರಿದ ಬೆಲೆ- ಎಲ್ಲೆಲ್ಲಿ ಎಷ್ಟೆಷ್ಟು?

cylinder
Published on

ನವದೆಹಲಿ: ಪೆಟ್ರೋಲಿಯಂ ಕಂಪನಿಗಳು ದರ ಏರಿಸಿದ ಹಿನ್ನೆಲೆ ಅಡುಗೆ ಅನಿಲ ದರ ಏರಿಕೆಯಾಗಿದೆ. ಪ್ರತಿ ತಿಂಗಳ ಆರಂಭದಲ್ಲಿ ಸಿಲಿಂಡರ್‌ ಬೆಲೆಯನ್ನು ನಿಗದಿ ಮಾಡಲಾಗುತ್ತಿದ್ದು, ಕಳೆದ ಕೆಲವು ತಿಂಗಳುಗಳಿಂದ ಇದರ ಬೆಲೆ ಏರುಮುಖವಾಗುತ್ತಲೇ ಸಾಗಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆ ಸತತ ಮೂರನೇ ಬಾರಿ ಏರಿಕೆ ಕಂಡಂತಾಗಿದೆ. ಕಳೆದ 15 ದಿನಗಳಲ್ಲಿಯೇ ಎರಡನೆಯ ಸಲ ದರ ಹೆಚ್ಚಳವಾಗಿದೆ.

ಸಬ್ಸಿಡಿ ರಹಿತ ಗೃಹ ಬಳಕೆ ಅಡುಗೆ ಅನಿಲ ದರ 25 ರೂಪಾಯಿ ಏರಿಕೆಯಾಗಿದ್ದು, ಇಂದಿನಿಂದ (ಸೆಪ್ಟೆಂಬರ್‌ 1ರಿಂದ) ಪರಿಷ್ಕೃತ ದರ ಜಾರಿಯಾಗಲಿದೆ.

14.2 ಕೆಜಿ ತೂಕದ ಸಬ್ಸಿಡಿ ರಹಿತ ಅಡುಗೆ ಅನಿಲ ದರ ರಾಜಧಾನಿ ನವದೆಹಲಿ ಮತ್ತು ಮುಂಬೈನಲ್ಲಿ 25 ರೂಪಾಯಿ ಏರಿಕೆ ಕಂಡು 884.50 ರೂಪಾಯಿಗೆ ತಲುಪಿದೆ. ಬೆಂಗಳೂರಿನಲ್ಲಿ ಎಲ್‌ಪಿಜಿ ದರ ಸದ್ಯ 862.50 ರೂಪಾಯಿ ಇದ್ದು, ಈಗ ಅದು 25 ರೂಪಾಯಿ ಮತ್ತಷ್ಟು ಏರಿದೆ.

ಜನವರಿ 1 ರಿಂದ ಆಗಸ್ಟ್ 17 ಅವಧಿಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ ದರ ತಲಾ 165 ರೂಪಾಯಿಯಷ್ಟು ಹೆಚ್ಚಳವಾಗಿದೆ. ಆ.17ರಂದು ಕೂಡ ಸಬ್ಸಿಡಿ ರಹಿತ ಅಡುಗೆ ಅನಿಲ ದರವನ್ನು 25.50 ರೂ ಏರಿಸಲಾಗಿತ್ತು. ಆಗಸ್ಟ್ 1ರಂದು 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಹೆಚ್ಚಿಸಲಾಗಿತ್ತು. ಈಗ 19 ಕೆಜಿ ಸಿಲಿಂಡರ್ ಬೆಲೆ 75 ರೂಪಾಯಿ ಹೆಚ್ಚಾಗಿದೆ.
2018-19ರಲ್ಲಿ ದೇಶದಲ್ಲಿ 26.54 ಕೋಟಿ ಎಲ್‌ಪಿಜಿ ಬಳಕೆದಾರರಿದ್ದರು. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಜಾರಿಗೆ ಬಂದ ಬಳಿಕ ಸಿಲಿಂಡರ್ ಬಳಕೆದಾರರ ಸಂಖ್ಯೆ ಹೆಚ್ಚಿದ್ದು, 2021ರ ಜುಲೈ 1ರ ವೇಳೆಗೆ 29.11 ಕೋಟಿ ಎಲ್‌ಪಿಜಿ ಬಳಕೆದಾರರಿದ್ದರು.

ಸೆಪ್ಟೆಂಬರ್ 1ರಂದು ಬೆಲೆ ಹೀಗಿದೆ ನೋಡಿ. ಆವರಣದಲ್ಲಿ ಇರುವುದು ಹಿಂದಿನ ಬೆಲೆ

ದೆಹಲಿ: 884.50 ರೂ (ಆಗಸ್ಟ್ ದರ 859.50)

ಬೆಂಗಳೂರು: 887.5 ರೂ (862.50 ರೂ)

ಮುಂಬೈ: 884.50 ರೂ (859.50 ರೂ)

ಕೋಲ್ಕತಾ: 911 ರೂ (886.00 ರೂ)

ಚೆನ್ನೈ: 900.50 ರೂ (875.50 ರೂ)

ತಿರುವನಂತಪುರಂ: 894 ರೂ (869.00)

ಹೈದರಾಬಾದ್: 937 ರೂ (912.00)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net