ಮುಂದಿನ ನಾಲ್ಕು ದಿನ ವರುಣನ ಆರ್ಭಟ: ದಕ್ಷಿಣ ಒಳನಾಡಲ್ಲಿ ಯೆಲ್ಲೋ ಅಲರ್ಟ್

rain
Published on

ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮದಿಂದ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಬಿರುಸುಗೊಳ್ಳಲಿದೆ.

ಸೋಮವಾರ ಕೊಡಗಿನ ಗೋಣಿಕೊಪ್ಪದಲ್ಲಿ 34 ಮಿಮೀ, ಮಂಡ್ಯದ ಮಳವಳ್ಳಿಯಲ್ಲಿ 31 ಮಿಮೀ, ಕೆ.ಆರ್.ಪೇಟೆಯಲ್ಲಿ 26 ಮಿಮೀ ಹಾಗೂ ಬೆಂಗಳೂರು ನಗರದಲ್ಲಿ 21 ಮಿಮೀ ಮಳೆ ಸುರಿದಿದೆ.

ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮಂಡ,ಮೈಸೂರು, ಚಿತ್ರದುರ್ಗ, ಬಳ್ಳಾರಿ ಹಾಗೂ ದಾವಣಗೆರೆಯಲ್ಲಿ ಮೇ 3ರಿಂದ ಮೇ 6ರವರೆಗೆ ಗುಡುಗು ಮಿಂಚು ಸಹಿತ ಭಾರಿ ಮಳೆ ಬೀಳಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಹಾಗೂ ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆ ಸುರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

7 ಜಿಲ್ಲೆಗಳಲ್ಲಿ ತಾಪಮಾನ ಏರಿಕೆ: ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ದಕ್ಷಿಣ ಒಳನಾಡಿನ ಕೋಲಾರ ಹೊರತುಪಡಿಸಿದರೆ ಉಳಿದ ಜಿಲ್ಲೆಗಳಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ ತುಸು ಇಳಿಕೆಯಾಗಿದೆ. ಆದರೆ, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಉಷ್ಣಾಂಶ ಯಥಾಸ್ಥಿತಿ ಮುಂದುವರಿದಿದೆ. ಸೋಮವಾರ ಗರಿಷ್ಠ ತಾಪಮಾನದಲ್ಲಿ ಕಲಬುರಗಿಯಲ್ಲಿ 42.4, ಕೋಲಾರದ ಕೆಜಿಎ್ನಲ್ಲಿ 42.4, ರಾಯಚೂರಿನಲ್ಲಿ 42.0 ಯಾದಗಿರಿಯಲ್ಲಿ 41.8, ವಿಜಯಪುರದಲ್ಲಿ 40.1, ಬೀದರ್ 41.0 ಕೊಪ್ಪಳದಲ್ಲಿ 40.0, ಬಾಗಲಕೋಟೆಯಲ್ಲಿ 39.0, ಬಳ್ಳಾರಿಯಲ್ಲಿ 39.6 ಮತ್ತು ಬೆಂಗಳೂರಿನಲ್ಲಿ 33.6 ಡಿಗ್ರಿ ಸೆಲ್ಸಿಯಸ್ ಹಾಗೂ ಕೊಡಗಿನಲ್ಲಿ 26.0 ಕಡಿಮೆ ಉಷ್ಣಾಂಶ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net