

ನವದೆಹಲಿ: ಮುಂಗಾರು ಅಧಿವೇಶನದ ವೇಳೆ ಬೆಲೆ ಏರಿಕೆ ಖಂಡಿಸಿ ಸದನದೊಳಗೇ ಭಿತ್ತಿಪತ್ರ (ಪ್ಲಕಾರ್ಡ್) ಹಿಡಿದು ಪ್ರತಿಭಟನೆ ನಡೆಸಿದ ನಾಲ್ವರು ಕಾಂಗ್ರೆಸ್ ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ. ಎಚ್ಚರಿಕೆ ನೀಡಿದರೂ, ಬುದ್ಧಿ ಮಾತು ಹೇಳಿದರೂ, ಸಮಾಧಾನದಿಂದ ಚರ್ಚಿಸೋಣ ಎಂದು ಪದೇ ಪದೇ ಹೇಳಿದರೂ ಅದನ್ನು ಕಿವಿಯ ಮೇಲೆ ಹಾಕಿಕೊಳ್ಳದೇ ಪ್ರತಿಭಟನೆ ಮುಂದುವರೆಸಿದ್ದ ಈ ಸಂಸದರು ಈಗ ಅಮಾನತುಗೊಂಡಿದ್ದಾರೆ.
ಮಾಣಿಕಂ ಟ್ಯಾಗೋರ್, ಜ್ಯೋತಿಮಣಿ, ರಮ್ಯಾ ಹರಿದಾಸ್ ಮತ್ತು ಟಿ.ಎನ್ ಪ್ರತಾಪನ್ ಲೋಕಸಭೆಯ ಮಳೆಗಾಲ ಅಧಿವೇಶನದಿಂದ ಅಮಾನತುಗೊಂಡವರು. ಆಗಸ್ಟ್ 12ರ ವರೆಗೂ ನಡೆಯಲಿರುವ ಮುಂಗಾರು ಅಧಿವೇಶನದಿಂದ ಹೊರಗಿಡುವಂತೆ ಸಭಾಧ್ಯಕ್ಷ ಓಂ ಬಿರ್ಲಾ ಇವರಿಗೆ ಸೂಚಿಸಿದ್ದಾರೆ.
ಇವರು ಬೆಲೆ ಏರಿಕೆ, ಹಣದುಬ್ಬರ ಹಾಗೂ ಇತರ ವಿಚಾರಗಳನ್ನಿಟ್ಟುಕೊಂಡು ಅಧಿವೇಶನದೊಳಗೆ ಪ್ರತಿಭಟನೆ ನಡೆಸುತ್ತಿದ್ದರು. ಇವರಿಗೆ ಸ್ಪೀಕರ್ ಓಂ ಬಿರ್ಲಾ ಎಚ್ಚರಿಕೆ ನೀಡಿದರು. `ನಾನು ಚರ್ಚೆಗೆ ಸಿದ್ಧನಿದ್ದೇನೆ. ಇಲ್ಲಿ ಬೇರೆ ಬೇರೆ ಸಮಸ್ಯೆಗಳ ಬಗ್ಗೆ ಚರ್ಚೆಗಳು ಆಗಬೇಕಿದೆ. ನೀವು ಪ್ರತಿಭಟನೆ ಮಾಡುವುದಿದ್ದರೆ ಸದನದಿಂದ ಹೊರಗೆ ಮಾಡಿ. ಆದರೆ ನನ್ನ ಹೃದಯವಂತಿಕೆಯನ್ನು ದೌರ್ಬಲ್ಯ ಎಂದು ಭಾವಿಸಬೇಡಿ ಎಂದಿದ್ದರು. ಆದರೆ, ಅದನ್ನು ಕೇಳದ ಇವರು ಪ್ರತಿಭಟನೆ ಮುಂದುವರೆಸಿದರು. ಈ ಹಿನ್ನೆಲೆಯಲ್ಲಿ ಅಮಾನತು ಆದೇಶ ಹೊರಡಿಸಲಾಗಿದೆ.
ಲೋಕಸಭೆ ಕಲಾಪ ಆರಂಭವಾದಾಗಿನಿಂದಲೂ ಹೀಗೆ ಗಲಾಟೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸದನ ನಡೆಯುತ್ತಿಲ್ಲ. ಇದೇ ವಿಚಾರವಾಗಿ ಸ್ಪೀಕರ್ ಇಂದು ವಿರೋಧ ಪಕ್ಷದ ಸದಸ್ಯರಿಗೆ ಈ ಹಿಂದಿನಿಂದಲೂ ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ. ಸಮಾಧಾನದಿಂದ ಮಾತನಾಡಿದರೆ ಕೇಂದ್ರ ಸರ್ಕಾರ ಚರ್ಚೆಗೆ ಸಿದ್ಧವಿದೆ ಎಂಬ ಮಾತನ್ನೂ ಹೇಳಿದ್ದಾರೆ. ಆದರೆ, ಪ್ರತಿಪಕ್ಷಗಳು ತಮ್ಮ ಪಟ್ಟು ಸಡಿಲಿಸದೇ ಗದ್ದಲ-ಗಲಾಟೆ ಮುಂದುವರೆಸಿವೆ.
ಸ್ಪೀಕರ್ ಕ್ರಮದ ನಂತರವೂ ನಾಲ್ವರು ಸಂಸದರು ಸಂಸತ್ ಮೈದಾನದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ತೆರಳಿ ಘೋಷಣೆಗಳನ್ನು ಕೂಗಿದ್ದಾರೆ. ಕಾಂಗ್ರೆಸ್ ಸಂಸದರು ಪ್ರಮುಖ ಸಮಸ್ಯೆಗಳನ್ನು ಎತ್ತಲು ಪ್ರತ್ನಿಸುತ್ತಿದ್ದಾರೆ. ಆದರೆ ಕೆಲವರನ್ನು ಅಮಾನತು ಮಾಡುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಸದರನ್ನು ಬೆದರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್)