ಆಟವಾಡುತ್ತ ಧಾನ್ಯದ ಡಬ್ಬದೊಳಗೆ ಹೊಕ್ಕ ಐದು ಕಂದಮ್ಮಗಳು ಹೊರಬಂದರು ಶವವಾಗಿ!

grain
Published on

ಜೈಪುರ (ರಾಜಸ್ಥಾನ): ಧಾನ್ಯಗಳನ್ನು ತುಂಬಿಸಿ ಇಡುವ ಡಬ್ಬದೊಳಕ್ಕೆ ಆಡವಾಡುತ್ತ ಇಳಿದ ಮಕ್ಕಳು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ರಾಜಸ್ಥಾನದ ಬಿಕನೇರ್ ಎಂಬಲ್ಲಿ ನಡೆದಿದೆ.

ಮಾಲಿ, ಪೂನಮ್, ರವಿನಾ, ರಾಧಾ, ಸೇವರಾಂ ಎಂಬ ನಾಲ್ಕರಿಂದ ಐದು ವರ್ಷಗಳ ಒಳಗಿನ ಮಕ್ಕಳು ಈ ದುರಂತ ಸಾವು ಕಂಡಿದ್ದಾರೆ. ಆಗಿದ್ದೇನೆಂದರೆ, ಧಾನ್ಯಗಳನ್ನು ತುಂಬಲು ಇಟ್ಟಿರುವ ಡಬ್ಬಗಳ ಸಮೀಪ ಮಕ್ಕಳು ಆಟವಾಡುತ್ತಿದ್ದರು. ಆಗ ಎಲ್ಲಾ ಮಕ್ಕಳು ಒಬ್ಬರಾದ ಮೇಲೆ ಒಬ್ಬರು ಆ ಡಬ್ಬದೊಳಕ್ಕೆ ಆಟವಾಡುತ್ತಾ ಇಳಿದಿದ್ದಾರೆ.

ಆದರೆ ದುರದೃಷ್ಟಕ್ಕೆ ಆ ಡಬ್ಬವು ತಂತಾನೇ ಲಾಕ್​ ಆಗಿಬಿಟ್ಟಿದೆ. ಒಳಗಿರುವ ಮಕ್ಕಳು ಕೂಗಿಕೊಂಡರೂ ಸಮೀಪದಲ್ಲಿ ಯಾರೂ ಇರದ ಕಾರಣ, ಅವರು ಕೂಗಿದ್ದು ಯಾರಿಗೂ ಕೇಳಿಸಲೇ ಇಲ್ಲ.

ನಿನ್ನೆ ಮಧ್ಯಾಹ್ನದ ವೇಳೆ ಈ ದುರಂತ ಸಂಭವಿಸಿದೆ. ಸಂಜೆ ಮಕ್ಕಳನ್ನು ಹುಡುಕುತ್ತ ಪಾಲಕರು ಬಂದಾಗ ಮಕ್ಕಳು ಎಲ್ಲಿಯೂ ಕಾಣಿಸಲಿಲ್ಲ. ಮಕ್ಕಳು ಧಾನ್ಯ ತುಂಬುವ ಡಬ್ಬಗಳ ಸಮೀಪ ಆಡವಾಡುತ್ತಿರುವ ಬಗ್ಗೆ ಕೆಲವರು ಹೇಳಿದರು. ನಂತರ ಸಂದೇಹ ಬಂದು ಡಬ್ಬವನ್ನು ತೆಗೆದು ನೋಡಿದಾಗ ಅದಾಗಲೇ ಅಷ್ಟೂ ಮಕ್ಕಳು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಸೇರಿಸಿದರೂ ಅದಾಗಲೇ ಅವರು ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.

-

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net