VIDEO: ಹೊಡಿಮಗ... ಹೊಡಿಮಗ... ಗ್ರಾಹಕರಿಗಾಗಿ ಚಾಟ್‌ ಅಂಗಡಿಯ ಮಾಲೀಕರ ಫಿಲ್ಮಿಸ್ಟೈಲ್‌ ಫೈಟಿಂಗ್‌

fighting
Published on

ನೋಯ್ಡಾ: ಗ್ರಾಹಕರನ್ನು ಸೆಳೆಯಲು ವ್ಯಾಪಾರಸ್ಥರು ಏನೆಲ್ಲಾ ಸರ್ಕಸ್‌ ಮಾಡುವುದು ಇದ್ದೇ ಇದೆ. ಅದರಲ್ಲಿಯೂ ಈ ಕರೊನಾ ಹಲವಾರು ವ್ಯಾಪಾರಿಗಳನ್ನು ಅದರಲ್ಲಿಯೂ ಬೀದಿ ವ್ಯಾಪಾರಿಗಳನ್ನು ಕಂಗೆಡಿಸಿದೆ. ಅದೇ ಇನ್ನೊಂದೆಡೆ ಬೇರೆ ಬೇರೆ ಉದ್ಯೋಗ ಕಳೆದುಕೊಂಡಿರುವವರು ಬೀದಿ ವ್ಯಾಪಾರ ಶುರುಮಾಡಿದ್ದಾರೆ. ಇದೇ ಕಾರಣದಿಂದ ಬೀದಿಬೀದಿಗಳಲ್ಲಿ ಒಂದೇ ತೆರನಾದ ವ್ಯಾಪಾರ ಶುರುವಾಗಿದ್ದು, ಗ್ರಾಹಕರು ತಮ್ಮೆಡೆ ಬಿಟ್ಟು ಬೇರೆ ಕಡೆ ಹೋಗುವುದನ್ನು ನೋಡಲು ವ್ಯಾಪಾರಸ್ಥರಿಗೆ ಸಾಧ್ಯವಾಗುತ್ತಿಲ್ಲ.

ಇದೇ ಕಾರಣಕ್ಕೆ, ಉತ್ತರ ಪ್ರದೇಶದ ಬಾಗಪತ್ ಜಿಲ್ಲೆಯ ಬರಾತ್ ಪ್ರದೇಶದಲ್ಲಿ ಮಾರಾಮಾರಿಯೇ ನಡೆದುಬಿಟ್ಟಿದೆ. ಒಂದೇ ಕಡೆಗಳಲ್ಲಿ ಎರಡು ಚಾಟ್‌ ಅಂಗಡಿ ಇಟ್ಟುಕೊಂಡಿದ್ದೇ ಈ ಮಾರಾಮಾರಿಗೆ ಕಾರಣ.

ಇಂಥ ಫೈಟಿಂಗ್‌ ದೃಶ್ಯಗಳು ಎಲ್ಲೆಡೆ ಮಾಮೂಲು. ಆದರೆ ಗ್ರಾಹಕರು ತಮ್ಮ ಅಂಗಡಿಗೇ ಬರಬೇಕು, ಬೇರೆ ಅಂಗಡಿಗೆ ಹೋಗಬಾರದು ಎನ್ನುವ ಕಾರಣಕ್ಕೆ ಕುಪಿತಗೊಂಡ ಇಬ್ಬರು ವ್ಯಾಪಾರಸ್ಥರು ದೊಣ್ಣೆ ಹಿಡಿದು ಬಡಿದಾಡಿದ್ದಾರೆ. ಅವರಿಗೆ ಅನೇಕ ಮಂದಿ ‘ಸಾಥ್‌‘ ನೀಡಿದ್ದಾರೆ. ಈ ಫೈಟಿಂಗ್‌ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯದ ರೂಪದಲ್ಲಿ ವೈರಲ್‌ ಆಗುತ್ತಿದೆ.

ಅಷ್ಟಕ್ಕೂ ಆಗಿರುವುದು ಏನೆಂದರೆ, ಬರಾತ್‌ ಪ್ರದೇಶದಲ್ಲಿ ಒಂದೇ ಕಡೆ ಇಬ್ಬರು ಚಾಟ್‌ ಅಂಗಡಿ ಇಟ್ಟುಕೊಂಡಿದ್ದಾರೆ. ಒಬ್ಬ ಹಳೆಯ ವ್ಯಾಪಾರಸ್ಥನಾದರೆ, ಇನ್ನೊಬ್ಬ ಇದೀಗ ಶುರು ಮಾಡಿರುವ ವ್ಯಾಪಾರಸ್ಥ. ಹೊಸದಾಗಿ ದಂಧೆ ಶುರು ಮಾಡಿದವ ಹೊಸಹೊಸ ವಿಧದ ಚಾಟ್‌ ಇಟ್ಟುಕೊಂಡಿರುವ ಕಾರಣ, ಗ್ರಾಹಕರು ಸಹಜವಾಗಿ ಆತನ ಅಂಗಡಿಯತ್ತ ಆಕರ್ಷಿತರಾಗಿದ್ದು, ಇದು ಹಳೆಯ ವ್ಯಾಪಾರಸ್ಥನಿಗೆ ಸಹಿಸದಾಗಿದೆ.

ಇದೇ ಕಾರಣಕ್ಕೆ ಹಳೆಯ ವ್ಯಾಪಾರಸ್ಥ ಕ್ಯಾತೆ ತೆಗೆದಿದ್ದಾನೆ. ಈ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಆಗಿದೆ. ಅದೂ ಬಡಿಗೆ ಹಿಡಿದುಕೊಂಡು. ಬಿಜಿ ಮಾರುಕಟ್ಟೆ ಪ್ರದೇಶವಾಗಿರುವ ಇಲ್ಲಿ ರಸ್ತೆಯ ನಡುವೆಯೇ ಹೊಡೆದಾಟ ಆಗಿರುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ.
ಈ ವಿಡಿಯೋಗೆ ಹಾಡನ್ನು ಸೇರಿಸಿ ಫಿಲ್ಮಿಸ್ಟೈಲ್‌ ಹೊಡೆದಾಟ ಎನ್ನುವ ಕ್ಯಾಪ್ಟನ್‌ ನೀಡಿದ್ದಾರೆ. ಸುಮಾರು ಅರ್ಧ ಗಂಟೆ ಇದೇ ರೀತಿ ಹೊಡೆದಾಟ ನಡೆದಿದೆ. ನಂತರ ಪೊಲೀಸರು ಮಧ್ಯ ಪ್ರವೇಶ ಮಾಡಿ ಎರಡೂ ಗುಂಪುಗಳನ್ನು ವಶಕ್ಕೆ ಪಡೆದಿದ್ದಾರೆ.

ಜಗಳ ಮಾಡಿದ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ಮುಂದುವರೆದಿದೆ. ಆದರೆ ಇದರ ಫೈಟಿಂಗ್‌ ಅನ್ನು ಮಾತ್ರ ಜನರು ಹಾಸ್ಯದ ರೂಪದಲ್ಲಿ ತೆಗೆದುಕೊಂಡಿದ್ದು, ವಿಡಿಯೋ ಶೇರ್‌ ಮಾಡುತ್ತಲಿದ್ದಾರೆ. ತಮ್ಮ ತಮ್ಮ ಭಾಗಗಳಲ್ಲಿ ಪ್ರಚಲಿತ ಇರುವ ಬಡಿದಾಟದ ಹಾಡುಗಳನ್ನು ಇದಕ್ಕೆ ಸೇರಿಸುತ್ತಿರುವವರೂ ಇದ್ದಾರೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net