

ಲಡಾಖ್: ಚಳಿ, ಮಳೆ, ಬಿಸಿಲು ಎನ್ನದೇ ಗಡಿಕಾಯುವ ಯೋಧರ ದೇಶಪ್ರೇಮವೇ ಊಹೆಗೆ ನಿಲುಕದ್ದು. ಒಂದಿನಿತು ಚಳಿ, ಬಿಸಿಲು ಸ್ವಲ್ಪ ಹೆಚ್ಚಿಗೆ ಇದ್ದರೆ ಸಾಕು, ಮನೆಯಿಂದ ಹೊರಕ್ಕೆ ಹೋಗಲೂ ಆಗದೇ, ಮನೆಯ ಒಳಗೂ ಇರಲು ಆಗದ ಸಾಮಾನ್ಯ ಜನರೆಲ್ಲಿ, ಮೈನಸ್ ವಾತಾವರಣ ಇದ್ದರೂ, ಬಿರುಬಿಸಲೇ ಇದ್ದರೂ ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ಆ ಯೋಧರೆಲ್ಲಿ?
ಇಂದು ಕೂಡ ಮೈ ಕೊರೆಯುವ ಚಳಿಯ ನಡುವೆಯೇ ದೇಶಪ್ರೇಮವನ್ನು ಮೆರೆದಿದ್ದಾರೆ ಭಾರತೀಯ ಯೋಧರು. ಯಾವ ಕ್ಷಣವಾದರೂ ಕುತಂತ್ರ ಬುದ್ಧಿ ಉಪಯೋಗಿಸಿ ಭಾರತದ ಒಳಗೆ ನುಸುಳಲು ಕಾಯುತ್ತಿರುವ ಚೀನಾದ ಸೈನಿಕರ ಮೇಲೆ ಕಣ್ಣಿಡುತ್ತಲೇ ಲಡಾಖ್ ಗಡಿಯಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿ ಬಂದಿದ್ದಾರೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ).
ಅದೂ 16 ಸಾವಿರ ಅಡಿ ಮೇಲಕ್ಕೇರಿ ಬಾರ್ಡರ್ ಔಟ್ಪೋಸ್ಟ್ ಆಗಿರುವ ಲಡಾಖ್ ಬಳಿ ತ್ರಿವರ್ಣ ಧ್ವಜ ಹಾರಿಸಿ 72ನೇ ಗಣರಾಜ್ಯವನ್ನು ಆಚರಿಸಿದ್ದಾರೆ. ಕೆಳಭಾಗದಲ್ಲಿಯೇ ಈ ಪರಿಯಲ್ಲಿ ಚಳಿ ಇರುವಾಗ 16 ಸಾವಿರ ಅಡಿ ಮೇಲೆ ಹೇಗಿರಬಹುದು ಎಂದು ಊಹಿಸಬಲ್ಲಿರಾ? ಊಹಿಸಲೂ ಅಸಾಧ್ಯ ಎನಿಸುವ ಚಳಿ ಅಲ್ಲಿದ್ದು, ಅದನ್ನೂ ಲೆಕ್ಕಿಸದೇ ಬಾವುಟ ಹಾರಿಸಿ ದೇಶಪ್ರೇಮ ಮೆರೆದಿದ್ದಾರೆ ಈ ಯೋಧರು.
ಹಿಮದ ಮಧ್ಯೆಯೇ ಪರೇಡ್ಗಳನ್ನು ನಡೆಸಿ ಗಣರಾಜ್ಯವನ್ನು ಸಂಭ್ರಮಿಸಿದರು. ಭಾರತ ಮಾತಾ ಕೀ ಜೈ ಎನ್ನುವ ಘೋಷಣೆ ಕೂಗಿ ಸಂಭ್ರಮಿಸಿದರು.