ಕರ್ಟನ್‌ ಸುತ್ತಿಸಿ ಪರೀಕ್ಷೆ ಬರೆಸಿದರು! ಚಡ್ಡಿಯಲ್ಲೇನು ಸಮಸ್ಯೆ ಎಂದು ಕೆಂಡಾಮಂಡಲವಾದ ಯುವತಿ

exam
Published on

ತೇಜ್‌ಪುರ (ಅಸ್ಸಾಂ): ಕೆಲವೊಂದು ಪರೀಕ್ಷೆಗಳಿಗೆ ಅದರದ್ದೇ ಆದ ವಿಶೇಷತೆಗಳು ಇರುತ್ತವೆ. ಅಂದರೆ ಡ್ರೆಸ್‌ಕೋಡ್‌ ಸೇರಿದಂತೆ ಕೆಲವೊಂದು ನಿಯಮ, ಷರತ್ತುಗಳನ್ನು ಅನ್ವಯ ಮಾಡಲಾಗುತ್ತದೆ. ಅದೇ ರೀತಿ ಇನ್​ಸ್ಟಿಟ್ಯೂಟ್ ಆಫ್​ ಫಾರ್ಮಾಸ್ಯುಟಿಕಲ್ ಸೈನ್ಸಸ್ ನಡೆಸಿರುವ ಪರೀಕ್ಷೆಯಲ್ಲಿ ಡ್ರೆಸ್‌ಕೋಡ್ ಇಡಲಾಗಿತ್ತು. ಆದರೆ ಇದರ ಬಗ್ಗೆ ಅರಿವಿಲ್ಲದ ಯುವತಿಯೊಬ್ಬಳು ಚಡ್ಡಿ (ಷಾರ್ಟ್ಸ್‌) ಹಾಕಿಕೊಂಡು ಬಂದು ಇದೀಗ ದೇಶವ್ಯಾಪಿ ಸುದ್ದಿಯಾಗಿದ್ದಾಳೆ.

ಅಷ್ಟಕ್ಕೂ ಅವಳು ಷಾರ್ಟ್ಸ್‌ ಧರಿಸಿ ಬಂದಿರುವುದು ಸುದ್ದಿಯಲ್ಲಿ, ಬದಲಿಗೆ ಮುಂದೇನಾಯ್ತು ಎನ್ನುವುದೇ ಕುತೂಹಲ. ಜುಬಲಿ ತಮೂಲಿ ಎಂಬ 19 ವರ್ಷದ ಅಸ್ಸಾಂ ವಿದ್ಯಾರ್ಥಿನಿ ಜೋಹರ್ತ್​​ನ ಅಸ್ಸಾಂ ಕೃಷಿ ವಿಶ್ವವಿದ್ಯಾಲಯದಕ್ಕೆ ಪರೀಕ್ಷೆ ಬರೆಯಲು ಬಂದಿದ್ದಳು. ತನ್ನ ತಂದೆಯೊಂದಿಗೆ ತಮ್ಮ ಊರಾದ ಬಿಸ್ವನಾಥ ಚರಿಯಾಲಿಯಿಂದ 70 ಕಿ.ಮೀ. ದೂರದ ತೇಜಪುರಕ್ಕೆ ಬಂದಿದ್ದಳು. ಆದರೆ ಅವಳು ಷಾರ್ಟ್ಸ್‌ ಧರಿಸಿದ್ದಳು. ಹೀಗೆ ಪರೀಕ್ಷೆ ಬರೆಯಲು ಅವಕಾಶ ಇರಲಿಲ್ಲ. ಆದರೆ ಅದಾಗಲೇ ಪರೀಕ್ಷೆಯ ಅವಧಿ ಸಮೀಪಿಸುತ್ತಿದ್ದುದರಿಂದ ಅವಳಿಗೆ ಡ್ರೆಸ್‌ ಬೇರೆ ಹಾಕಿಕೊಂಡು ಬಾ ಎನ್ನುವಂತೆಯೂ ಇರಲಿಲ್ಲ.

ಏನು ಮಾಡಬೇಕು ಎಂದು ತೋಚದ ಭದ್ರತಾ ಸಿಬ್ಬಂದಿ ಪರೀಕ್ಷಾ ಕೇಂದ್ರದೊಳಗೆ ಹೋಗಲು ಅನುಮತಿ ನೀಡಿದರು. ಆದರೆ ಇನ್ವಿಜಿಲೇಜರ್​ ಮಾತ್ರ ಆಕೆ ಪರೀಕ್ಷೆ ಬರೆಯಲು ಒಪ್ಪಲೇ ಇಲ್ಲ. ಪರೀಕ್ಷಾ ಕೊಠಡಿಯೊಳಗೆ ಹೋಗುವುದನ್ನು ತಡೆದರು. ಶಾರ್ಟ್ಸ್​ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡುವುದಿಲ್ಲ. ಹೀಗಾಗಿ ಎಕ್ಸಾಂ ಹಾಲ್​ಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಹೇಳಿದರು.

ಆಗ ಅಳುತ್ತಾ ಹೊರಗೆ ನಿಂತಳು ಯುವತಿ. ಎಲ್ಲಿಂದಾದರೂ ಪ್ಯಾಂಟ್‌ ಧರಿಸಿ ಬಾ ಎಂದರು ಅಲ್ಲಿಯ ಸಿಬ್ಬಂದಿ. ತಂದೆ ಅಲ್ಲಿಂದ 8 ಕಿಮೀ ದೂರದಲ್ಲಿ ಇರುವ ಅಂಗಡಿಗೆ ಹೋಗುವಷ್ಟರಲ್ಲಿ ಪರೀಕ್ಷೆ ಸಮೀಪಿಸಿತ್ತು. ನಂತರ ಈಕೆಯ ದುಃಸ್ಥಿತಿ ನೋಡಲಾಗದ ಅಲ್ಲಿಯ ಸಿಬ್ಬಂದಿಯೊಬ್ಬರು ಅಲ್ಲಿಯೇ ಇದ್ದ ಕರ್ಟನ್‌ ಒಂದನ್ನು ತೆಗೆದು ಯುವತಿಯ ಕಾಲುಗಳನ್ನು ಮುಚ್ಚಿ ಒಳಗೆ ಕಳುಹಿಸಿ ಪರೀಕ್ಷೆ ಬರೆಯಲು ಅನುಮತಿ ಕೊಟ್ಟರು. ಅಂತೂ ಸಮಸ್ಯೆ ಬಗೆಹರಿಯಿತು.

ಪ್ರವೇಶ ಪತ್ರದಲ್ಲಿ ಡ್ರೆಸ್​ ಕೋಡ್ ಬಗ್ಗೆ ಏನನ್ನೂ ಹೇಳಿಲ್ಲ. ಕೆಲವು ದಿನಗಳ ಹಿಂದೆ ನಾನು ನೀಟ್​ ಪರೀಕ್ಷೆ ಬರೆಯಲು ಇಂತಹದ್ದೇ ಡ್ರೆಸ್​ ತೊಟ್ಟು ಅದೇ ನಗರಕ್ಕೆ ಹೋಗಿದ್ದೆ. ಆದರೆ ಅಲ್ಲಿ ನಾನು ಧರಿಸಿದ್ದ ಡ್ರೆಸ್​ ಬಗ್ಗೆ ಈ ರೀತಿಯಾದ ಘಟನೆ ಸಂಭವಿಸಿರಲಿಲ್ಲ, ನಮ್ಮ ತಂದೆ ಕೂಡ ತುಂಬಾ ಹಿಂಸೆ ಅನುಭವಿಸಬೇಕಾಯಿತು. ಹುಡುಗರು ಯಾವ ಉಡುಪು ಧರಿಸಿದರೂ ಯಾರೂ ಏನನ್ನೂ ಕೇಳುವುದಿಲ್ಲ. ಆದರೆ ಒಂದು ಹುಡುಗಿ ಶಾರ್ಟ್ಸ್​ ಧರಿಸಿದರೆ ಜನರು ಬೆರಳು ಮಾಡಿ ತೋರಿಸುತ್ತಾರೆ ಎಂದು ಪರೀಕ್ಷೆ ಮುಗಿದ ಮೇಲೆ ಜುಬಿಲಿ ಆಕ್ರೋಶ ಹೊರಹಾಕಿದಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net