

ಮುಂಬೈ: ಬಾಂಬ್ ಸ್ಫೋಟ, ಆತ್ಮಹತ್ಯೆ ಪ್ರಕರಣ ಸೇರಿದಂತೆ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಅವರನ್ನು ಹುದ್ದೆಯಿಂದ ವಜಾ ಮಾಡಬೇಕು ಎಂಬ ಒತ್ತಡ ಇದೀಗ ಬಲು ಜೋರಾಗಿ ಕೇಳಬರತೊಡಿಗಿದೆ.
ಮೊದಲು ಇವರ ವಿರುದ್ಧ ಗಂಭೀರ ಆರೋಪ ಕೇಳಿಬಂದದ್ದು, ಸಂಸದ ಮೋಹನ್ ದೇಲ್ಕರ್ ಆತ್ಮಹತ್ಯೆ ಪ್ರಕರಣದಲ್ಲಿ. ಖಾಸಗಿ ಹೋಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಮೋಹನ್ ಅವರ ಸಾವಿನಲ್ಲಿ ಅನಿಲ್ ದೇಶ್ಮುಖ್ ಅವರ ಹೆಸರು ಕೇಳಿಬಂದಿತ್ತು.
ನಂತರ ಉದ್ಯಮಿ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಹೊತ್ತಿದ್ದ ಕಾರು ಪತ್ತೆ ಪ್ರಕರಣದಲ್ಲಿಯೂ ಇವರ ಹೆಸರು ಕೇಳಿಬಂದಿದೆ. ಈ ಪ್ರಕರಣದಲ್ಲಿ ಅಮಾನತುಗೊಂಡಿರುವ ಎನ್ಕೌಂಟರ್ ಸ್ಪೆಷಲಿಸ್ಟ್ ಸಚಿನ್ ವಾಜೆ ಬಳಿ ದೇಶ್ಮುಖ್ ಅವರು ಬಾರ್ ಹಾಗೂ ರೆಸ್ಟೋರೆಂಟ್ಗಳಿಂದ ಪ್ರತಿ ತಿಂಗಳು 100 ಕೋಟಿ ಹಣ ವಸೂಲಿ ಮಾಡುವಂತೆ ಒತ್ತಡ ಹೇರಿದ್ದರು ಎಂದು ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ಬೀರ್ ಸಿಂಗ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದರು.
ನಂತರ ಮಹಾರಾಷ್ಟ್ರ ಸರ್ಕಾರ ಮತ್ತು ಶಿವಸೇನೆ 'ಅದು ಪರಮ್ವೀರ್ ಸಿಂಗ್ ಬರೆದ ಪತ್ರವಲ್ಲ ಎಂದು ಹೇಳಿ ನುಣುಚಿಕೊಳ್ಳುವ ಪ್ರಯತ್ನ ಮಾಡಿತ್ತು. ಆದರೆ ಇಂದು ಬೆಳಗ್ಗೆ ಪರಮ್ವೀರ್ ಸಿಂಗ್ ಖುದ್ದಾಗಿ ತಾವೇ ಪತ್ರ ಬರೆದಿದ್ದಾಗಿ ಖಚಿತಪಡಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಭಾರಿ ಮುಜುಗರ ಅನುಭವಿಸುವಂತಾಗಿದೆ.
ಈ ಹಿನ್ನೆಲೆಯಲ್ಲಿ ಅವರನ್ನು ಹುದ್ದೆಯಿಂದ ಕೆಳಕ್ಕೆ ಇಳಿಸಬೇಕು ಎಂಬ ಭಾರಿ ಒತ್ತಡ ಕೇಳಿಬರುತ್ತಿದೆ. ಈ ನಡುವೆ, ಇಂದು ಸಂಜೆ ಶಿವಸೇನಾ ನಾಯಕರೊಂದಿಗೆ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಅವರೊಂದಿಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಇವೆಲ್ಲ ಬೆಳವಣಿಗೆಗಳ ನಡುವೆಯೇ ಪರಮ್ವೀರ್ ಸಿಂಗ್ ಮಾಡಿರುವ ಆರೋಪಗಳು ಸಂಪೂರ್ಣ ಸುಳ್ಳು. ಹಾಗೂ ನಾನು ಮಾನಹಾನಿ ಪ್ರಕರಣ ದಾಖಲಿಸುತ್ತಿರುವ ಕಾರಣ ಅವರು ಮಾಡಿರುವ ಆರೋಪಗಳನ್ನು ಸಾಕ್ಷೀಕರಿಸಬೇಕು ಎಂದು ಅನಿಲ್ ದೇಶ್ಮುಖ್ ತಿಳಿಸಿದ್ದಾರೆ.