ಕಾರಿನೊಳಗೆ ಪ್ರೇಯಸಿ ಜತೆ... ಪತ್ನಿ ಕೈಲಿ ಸಿಕ್ಕಿಬಿದ್ದ ಇಂಜಿನಿಯರ್! ಮುಂದೆ?

dose
Published on

ಬಾಂಡಾ (ಉತ್ತರ ಪ್ರದೇಶ): ಪತ್ನಿಗೆ ಕಣ್ಣಿಗೆ ಬೀಳದಂತೆ ಇಲ್ಲೊಬ್ಬ ಇಂಜಿನಿಯರ್​ ಪತಿ ಪ್ರೇಯಸಿಯ ಜತೆ ಜಾಲಿಯಾಗಿ ಸುತ್ತುತ್ತಲೇ ಇದ್ದ. ಈ ಬಗ್ಗೆ ಪತ್ನಿಗೆ ತಿಳಿದಿದ್ದರೂ ರೆಡ್​ಹ್ಯಾಂಡ್​ ಆಗಿ ಪತಿ ಸಿಕ್ಕಿಬಿದ್ದಿರಲಿಲ್ಲ. ಅದಕ್ಕಾಗಿ ಕಾದು ಕುಳಿತಿದ್ದಳು.

ನಿನ್ನೆ ಆ ಅವಕಾಶ ಪತ್ನಿಗೆ ಸಿಕ್ಕಿಯೇ ಬಿಟ್ಟಿತು. ಅದೂ ಎಲ್ಲಿ ಅಂತೀರಾ? ದೇವಸ್ಥಾನದ ಎದುರು! ದೇವರು ತನ್ನನ್ನು ಕಾಪಾಡುತ್ತಾನೆ ಅಂದುಕೊಂಡೋ ಏನೋ ಈ ಪತಿರಾಯ, ಸ್ನೇಹಿತೆಯ ಜತೆ ಕಾರಿನಲ್ಲಿ ಜಾಲಿಯಾಗಿ ಇದ್ದ. ಅಷ್ಟಕ್ಕೂ ಆತ ಮಾಡಬಾರದ್ದೇನೂ ಮಾಡುತ್ತಿರಲಿಲ್ಲ. ಸ್ನೇಹಿತೆಯ ಜತೆ ಕುಳಿತು ದೋಸೆ ತಿನ್ನುತ್ತಿದ್ದ ಅಷ್ಟೇ.

ಆದರೆ ಪತಿಯ ಮೇಲೆ ಕಣ್ಣಿಟ್ಟಿದ್ದ ಪತ್ನಿಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿಟ್ಟ! ತನ್ನ ಸಹೋದರರನ್ನೂ ಕರೆದುಕೊಂಡು ಸ್ಥಳಕ್ಕೆ ಧಾವಿಸಿದ ಪತ್ನಿಯನ್ನು ನೋಡಿ ಈ ಇಂಜಿನಿಯರ್​ ಪತಿ ದಂಗಾಗಿ ಹೋದ. ತನ್ನನ್ನು ಸಮರ್ಥಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಅದು ಸಾಧ್ಯವಾಗಲಿಲ್ಲ.

ಮಹಿಳೆ ಪತಿ ಹಾಗೂ ಆತನ ಸ್ನೇಹಿತೆಯನ್ನು ಕರೆದುಕೊಂಡು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದಳು. ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯ ಮಹಿಳಾ ಪೊಲೀಸ್​ ಠಾಣೆಗೆ ಆಕೆ ಧಾವಿಸಿದಳು. ಆದರೆ ಇದು ತೀರಾ ಕೌಟುಂಬಿಕ ಸಮಸ್ಯೆಯಾಗಿದ್ದು, ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳುವಂತೆ ಪೊಲೀಸರು ಹೇಳಿದರು.

ಆದರೆ ತನ್ನ ಪತಿ ವಿವಾಹೇತರ ಸಂಬಂಧ ಹೊಂದಿರುವ ಕಾರಣ, ಇದು ಕಾನೂನುಬಾಹಿರವಾಗಿದ್ದು, ಈ ತಪ್ಪಿಗೆ ಪತಿಗೆ ಶಿಕ್ಷೆಯಾಗಲೇಬೇಕು ಎಂದು ಪತ್ನಿ ಪಟ್ಟುಹಿಡಿದಳು. ಆಕೆಯ ಜತೆ ಪತಿ ತಿರುಗುತ್ತಲೇ ಇರುತ್ತಾನೆ, ಇದರಿಂದ ತನ್ನನ್ನು ನಿರ್ಲಕ್ಷಿಸುತ್ತಾನೆ ಎಂದಳು.

ಆದರೆ ಪೊಲೀಸರು ಎಫ್​ಐಆರ್​ ದಾಖಲು ಮಾಡಿಕೊಳ್ಳದೇ ಪತಿಗೆ ಎಚ್ಚರಿಕೆಯನ್ನು ಕೊಟ್ಟು ಕಳುಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net