

ಪಟ್ನಾ: ಆರ್‌ಜೆಡಿ ನಾಯಕ ಬಿಟ್ಟು ಸಿಂಗ್ ಅಲಿಯಾಸ್ ಅನಿಕೇತ್ ಸಿಂಗ್ ಅವರ ಸಹೋದರ ಬೆನಿಸಿಂಗ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆಗೈದ ಘಟನೆ ನಿನ್ನೆ ಶನಿವಾರ ನಡೆದಿದೆ.
ಬಿಹಾರದಲ್ಲಿ ಚುನಾವಣೆಯ ಕಾವು ಜೋರಾಗಿರುವಾಗಲೇ ಈ ಕೃತ್ಯ ನಡೆದಿರುವುದು ಹಲವು ಅನುಮಾನಗಳಿಗೆ ಈಡು ಮಾಡಿಕೊಟ್ಟಿದೆ. ಈ ಘಟನೆ ನಡೆದಿರುವುದು ದರ್ಧಾಹ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪುರ್ನಿಯಾದ ಸಾರ್ಸಿ ಪ್ರದೇಶದಲ್ಲಿ.
ಬಿಟ್ಟು ಸಿಂಗ್ ಅಲಿಯಾಸ್ ಅನಿಕೇತ್ ಸಿಂಗ್ ಅವರನ್ನು ಕಳೆದ ತಿಂಗಳು ಎಸ್‍ಟಿಎಫ್ ಬಂಧಿಸಿತ್ತು. ಅಕ್ರಮವಾಗಿ ಮದ್ದುಗುಂಡುಗಳನ್ನು ಸಂಗ್ರಹಿಸಿಟ್ಟುಕೊಂಡಿರುವ ಆರೋಪದ ಮೇಲೆ ಇವರನ್ನು ಬಂಧಿಸಲಾಗಿತ್ತು. ಅವರ ವಾಹನದಿಂದ ಎಕೆ-47, ಕಾರ್ಬೈನ್ ಮತ್ತು 66 ಸುತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಆದರೆ ಈ ಘಟನೆಗೂ, ಅದಕ್ಕೂ ಏನಾದರೂ ಸಂಬಂಧವಿದೆಯೇ ಅಥವಾ ಚುನಾವಣೆಗೂ ಈ ಹತ್ಯೆಗೂ ಸಂಬಂಧವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.