ಸರ್‌... ನಿಮ್ಮ ಫಿಲ್ಮ್‌ ಅಂತಾರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ಕಳಿಸಲಾಗ್ತಿದೆ... ಪ್ರಸಿದ್ಧ ಡೈರೆಕ್ಟರ್‌ಗೆ ₹66 ಸಾವಿರ ಟೋಪಿ!

film
Published on

ಹೈದರಾಬಾದ್: ‘ಆನ್‌ಲೈನ್‌ ಫ್ರಾಡ್‌, ಸೈಬರ್‌ ವಂಚನೆ ಬಗ್ಗೆ ದಿನನಿತ್ಯ ಸುದ್ದಿಯಾಗುತ್ತಲೇ ಇದೆ. ಇಂಥ ವಂಚನೆಗೆ ಒಳಗಾಗುತ್ತಿರುವವರ ಪೈಕಿ ಹಲವರು ಒಳ್ಳೆಯ ಉದ್ಯೋಗದಲ್ಲಿ ಇರುವವರು, ಪ್ರಸಿದ್ಧರು ಹಾಗೂ ಸುಶಿಕ್ಷಿತರೇ ಆಗಿದ್ದಾರೆ! ಯಾವುದೋ ಆಮಿಷಕ್ಕೆ ಬಲಿಯಾಗಿ ಒಂದು ಕ್ಷಣ ಯೋಚನೆ ಮಾಡುವ ಶಕ್ತಿಯನ್ನೇ ಕಳೆದುಕೊಂಡು ಕೊನೆಗೆ ಲಕ್ಷ ಲಕ್ಷ ಹಣ ಕಳೆದುಕೊಳ್ಳುತ್ತಿರುವುದನ್ನು ದಿನನಿತ್ಯ ನೋಡುತ್ತಿದ್ದೇವೆ.

ಅಂಥದ್ದೇ ಒಂದು ಪ್ರಕರಣ ತೆಲುಗು ಸಿನಿಮಾದ ಪ್ರಸಿದ್ಧ ನಿರ್ದೇಶಕನಿಗೂ ಆಗಿದೆ. ಚಲೋ’, ಭೀಷ್ಮಾದಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ವೆಂಕಿ ಕುಡುಮುಲಾ ಇದೀಗ ಇಂಥ ವಂಚನೆಗೆ ಒಳಗಾಗಿದ್ದಾರೆ. ಇವರು ಕೂಡ ಒಂದು ರೀತಿಯಲ್ಲಿ ಆಮಿಷಕ್ಕೆ ಒಳಗಾಗಿ ಹಣ ಕಳೆದುಕೊಂಡಿದ್ದಾರೆ.

ವ್ಯಕ್ತಿಯೊಬ್ಬ ವೆಂಕಿ ಅವರಿಗೆ ಕರೆ ಮಾಡಿ ಅವರ ನಿರ್ದೇಶನದ ಭೀಷ್ಮಾ ಚಿತ್ರವನ್ನು ಅಂತಾರಾಷ್ಟ್ರೀಯ ಚಲನಚಿತ್ರೋತ್ಸಕ್ಕೆ ನಾಮನಿರ್ದೇಶನ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕೆ ಹಣ ನೀಡುವಂತೆ ಕೇಳಿದ್ದಾರೆ. ಈ ಚಿತ್ರ ಇದಾಗಲೇ ಸಾಕಷ್ಟು ಪ್ರಸಿದ್ಧಿಯಾಗಿದ್ದರಿಂದ ಈ ಮಾತನ್ನು ವೆಂಕಿ ಅವರು ನಂಬಿಬಿಟ್ಟಿದ್ದಾರೆ.

ಆ ವ್ಯಕ್ತಿ ಹೇಳಿದ ಬ್ಯಾಂಕ್‌ ಖಾತೆಗೆ ಹಣವನ್ನು ವರ್ಗಾಯಿಸಿದ್ದಾರೆ. ಮೊದಲು ಆತ ಹೇಳಿದಂತೆ 66 ಸಾವಿರ ರೂಪಾಯಿ ಕಳುಹಿಸಿದ್ದಾರೆ. ವೆಂಕಿ ಅವರು ತಮ್ಮ ಬಲೆಗೆ ಬಿದ್ದದ್ದು ತಿಳಿಯುತ್ತಲೇ ಆ ವ್ಯಕ್ತಿ ಪದೇ ಪದೇ ಹಣ ಕೇಳಲು ಶುರು ಮಾಡಿದ್ದಾನೆ. ಆಗ ವೆಂಕಿ ಅವರಿಗೆ ಇದರಲ್ಲಿ ಏನೋ ಮೋಸ ಇದೆ ಎನ್ನುವುದು ತಿಳಿದಿದೆ.

ನಂತರ ತಾವು ಮೋಸ ಹೋಗಿದ್ದು ತಿಳಿದು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net