

ಮುಂಬೈ: ಚಿತ್ರ ತಾರೆಯರು ಏನು ಮಾಡಿದರೂ ಅದು ಸುದ್ದಿಯಾಗುತ್ತಲೇ ಇರುತ್ತದೆ. ಅದರಲ್ಲಿಯೂ ಅವರು ಮದುವೆಯಾದ ಮೇಲೆ ಅವರ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿರುತ್ತದೆ. ಇಬ್ಬರೂ ತಾರಾ ದಂಪತಿಯಾದರಂತೂ ಮುಗಿದೇ ಹೋಯ್ತು.
ಅಂಥದ್ದೇ ಒಂದು ಬಹು ಕುತೂಹಲ ಎನಿಸುವ ಜೋಡಿ ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ. 2018ರ ನವೆಂಬರ್ 14ರಂದು ಮದುವೆಯಾಗಿರುವ ಈ ಜೋಡಿ ಕುರಿತು ಸಾಕಷ್ಟು ಕುತೂಹಲ ಕಾಡುತ್ತಿದೆ ಅಭಿಮಾನಿಗಳಲ್ಲಿ. ನಿನ್ನೆ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಇಬ್ಬರು ಮುಂಬೈನ ಹಿಂದುಜಾ ಆಸ್ಪತ್ರೆಗೆ ಗುಟ್ಟಾಗಿ ಭೇಟಿ ನೀಡಿದ್ದಾರೆ. ಈ ವೇಳೆ ಕ್ಯಾಮೆರಾ ಕಣ್ಣಿಗೆ ಬಿದ್ದಿರುವ ದೀಪಿಕಾ ಹಾಗೂ ರಣ್‍ವೀರ್ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದಾರೆ ಅಷ್ಟೇ.
ಇದರ ಫೋಟೋ ಭಾರಿ ವೈರಲ್ ಆಗಿದೆ. ಇದಕ್ಕೆ ಕಾರಣ, ಇವರಿಬ್ಬರೂ ಏಕೆ ಈ ಆಸ್ಪತ್ರೆಗೆ ಹೋದರು ಎಂಬುದೇ ಚರ್ಚೆ. ಅಭಿಮಾನಿಗಳಿಗೆ ಇದು ಆಹಾರದ ವಸ್ತುವಾಗಿದ್ದು, ದೀಪಿಕಾ ಗರ್ಭಿಣಿಯಾಗಿದ್ದಾರೆ ಎಂದು ಚರ್ಚೆ ಶುರುವಾಗಿದೆ! ಈ ವೈರಲ್ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುವ ಅಭಿಮಾನಿಗಳು ಇದರ ಬಗ್ಗೆ ಗುಸುಗುಸು ಶುರು ಮಾಡಿದ್ದು, ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎಂದು ಸುದ್ದಿ ಮಾಡಿದ್ದಾರೆ.
ದೀಪಿಕಾ ಹಾಗೂ ರಣ್‍ವೀರ್ ಒಟ್ಟಿಗೆ ಅಭಿನಯಿಸಿದ್ದ ರಾಮಲೀಲಾ ಸಿನಿಮಾ ಇಬ್ಬರಿಗೂ ಭಾರಿ ಹೆಸರು ತಂದುಕೊಟ್ಟಿತ್ತು. ನಂತರ ಬಾಜೀರಾವ್ ಮಸ್ತಾನಿ ಹಾಗೂ ಪದ್ಮಾವತ್ ಸಿನಿಮಾ ಕೂಡ ಸೂಪರ್ಹೊಟ್ ಆಗಿದ್ದು, ಇದೀಗ ಈ ಜೋಡಿಯ ಬಗ್ಗೆ ಅಭಿಮಾನಿಗಳ ಕಣ್ಣು ನೆಟ್ಟಿದೆ.