

ನೋಯ್ಡಾ (ಉತ್ತರ ಪ್ರದೇಶ): ಪ್ರೀತಿಸಿ ಮದುವೆಯಾದ ಜೋಡಿಯೊಂದು ದಾರುಣವಾಗಿ ಅಂತ್ಯ ಕಂಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 22 ಪ್ರದೇಶದಲ್ಲಿ ನಡೆದಿದೆ. ಮೂರು ವರ್ಷಗಳ ಹಿಂದೆ ಮದುವೆಯಾಗಿರುವ ಶಶಿಕಲಾ ಮತ್ತು ಅರುಣ್ ದಂಪತಿ ಡೆತ್ನೋಟ್ ಬರೆದಿಟ್ಟು ಸಾವಿನ ಹಾದಿ ಹಿಡಿದಿದ್ದಾರೆ.
ಖಾಸಗಿ ಕಂಪನಿವೊಂದರಲ್ಲಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ ಅರುಣ್ ಅವರಿಗೆ ಕ್ಯಾನ್ಸರ್ ಕಾಣಿಸಿಕೊಂಡಿದ್ದೇ ಈ ಅಂತ್ಯಕ್ಕೆ ಕಾರಣವಾಗಿದೆ. ಅರುಣ್ ಅವರಿಗೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಡಾಕ್ಟರ್ ಬಳಿ ತೋರಿಸಿದ್ದಾರೆ. ಅದಾಗಲೇ ಕ್ಯಾನ್ಸರ್ ಕೊನೆಯ ಸ್ಟೇಜ್ನಲ್ಲಿ ಇರುವುದು ತಿಳಿದಿದೆ.
ಡಾಕ್ಟರ್ ಕೊಟ್ಟ ರಿಪೋರ್ಟ್ ನೋಡಿ ದಂಪತಿ ಕಂಗಾಲಾಗಿ ಹೋಗಿದ್ದಾರೆ. ಇನ್ನು ಅರುಣ್ ಬದುಕುವುದು ಕಷ್ಟ ಎಂದು ಇಬ್ಬರಿಗೂ ತಿಳಿದಿದೆ. ಪತಿ ಸತ್ತುಹೋದರೆ ತಮ್ಮ ಭವಿಷ್ಯ ಏನು ಎಂಬ ಚಿಂತೆ ಶಶಿಕಲಾ ಅವರಿಗೆ ಕಾಡಿದೆ. ಇದರಿಂದ ದಂಪತಿ ಅನೇಕ ದಿನಗಳಿಂದ ಮಾನಸಿಕವಾಗಿ ಒತ್ತಡಕ್ಕೊಳಗಾಗಿದ್ದರು. ಇದರಿಂದ ಇಬ್ಬರೂ ಸಾಯುವ ನಿರ್ಧಾರಕ್ಕೆ ಬಂದಿದ್ದಾರೆ.
ಈ ಬಗ್ಗೆ ಡೆತ್ನೋಟ್ ಬರೆದಿಟ್ಟಿರುವ ಶಶಿಕಲಾ, ತಮ್ಮ ಸಾವಿಗೆ ತಾವೇ ಕಾರಣ ಎಂದು ಹೇಳಿದ್ದಾರೆ. ಅರುಣ್ಗೆ ಕ್ಯಾನ್ಸರ್ ಇರುವುದು ತಿಳಿದಿದೆ. ಅವರು ಬದುಕುವುದು ಕಷ್ಟ. ಆದ್ದರಿಂದ ನಾನೂ ಅವರ ಜತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಡಾಕ್ಟರ್ ರಿಪೋರ್ಟ್ ಟೇಬಲ್ ಮೇಲೆ ಇಟ್ಟಿದ್ದೇವೆ. ಈ ವರದಿ ನೋಡಿದರೆ ನಾವು ಸಾಯುವುಕ್ಕೆ ಏನು ಕಾರಣ ಎಂದು ತಿಳಿಯುತ್ತದೆ. ನಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್ನೋಟ್ನಲ್ಲಿ ಬರೆಯಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.